Mysore
25
overcast clouds
Light
Dark

ಬಿಜೆಪಿಯ ಹೀನ ರಾಜಕೀಯ ಬಡವರ ತಟ್ಟೆಯ ಅನ್ನಕ್ಕೂ ವ್ಯಾಪಿಸಿರುವುದು ದುರಂತ : ಜಯರಾಂ ರಮೇಶ್

ಬೆಂಗಳೂರು : ಕೇಂದ್ರ ಸರ್ಕಾರ ಕರ್ನಾಟಕದ ಜನರಿಗೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವುದನ್ನು ನಿರಾಕರಿಸಿ ಎತನಾಲ್ ಉತ್ಪಾದನೆಗೆ ಅಕ್ಕಿ ಪೂರೈಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ವಿರೋಧಿ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದಕ್ಕೆ ಅನ್ನಭಾಗ್ಯ ಯೋಜನೆಯಲ್ಲಿ ನಡೆದುಕೊಂಡ ರೀತಿಯೇ ಉದಾಹರಣೆ ಎಂದಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಜೂ.12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಜು.1 ರಿಂದ ಜಾರಿಗೊಳಿಸಲಾಗುವುದಾಗಿ ಘೋಷಿಸಲಾಗಿದೆ. ಬಡ ಕುಟುಂಬದ ಪ್ರತಿಯೊಬ್ಬರಿಗೂ ತಲಾ 10 ಕೆ.ಜಿ. ಅಕ್ಕಿ ನೀಡುವ ಈ ಯೋಜನೆಗೆ ಅಡ್ಡಿಪಡಿಸಲು ಕೇಂದ್ರ ಸರ್ಕಾರ ಜೂ.13 ರಂದು ಸುತ್ತೋಲೆ ಹೊರಡಿಸಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಮಾಡದಂತೆ ಕೇಂದ್ರ ಆಹಾರ ನಿಗಮಕ್ಕೆ ತಾಕೀತು ಮಾಡಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಸರ್ಕಾರ ಕೇಂದ್ರ ನಿಗದಿಪಡಿಸಿದಂತೆ ಪ್ರತಿ ಕ್ವಿಂಟಾಲ್‍ಗೆ 3,400 ರೂ.ಗಳನ್ನು ಪಾವತಿಸಿ ಅಕ್ಕಿ ಖರೀದಿಸಲು ಸಿದ್ಧವಿತ್ತು. ಆದರೆ ಆ ಕಿಟಕಿಯನ್ನು ಬಂದ್ ಮಾಡಿರುವ ಕೇಂದ್ರಸರ್ಕಾರ ಪೆಟ್ರೋಲಿಯಂ ಜೊತೆ ಮಿಶ್ರಣ ಮಾಡಲು ಪ್ರತಿ ಕ್ವಿಂಟಾಲ್‍ಗೆ 2,000 ರೂ.ನಂತೆ ಅಕ್ಕಿಯನ್ನು ಮಾರಾಟ ಮಾಡುವುದನ್ನು ಮುಂದುವರೆಸಿದೆ.ಆಹಾರ ಭದ್ರತಾ ಕಾಯಿದೆ ಜನರಿಗೆ ಆಹಾರ ಒದಗಿಸುವ ಆದ್ಯತೆ ಹೊಂದಿರಬೇಕು ಎಂದು ಹೇಳಿದ್ದಾರೆ.

ಇದೇ ಆರೋಪಕ್ಕೆ ಪೂರಕವಾಗಿ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಬಿಜೆಪಿಯ ಹೀನ ರಾಜಕೀಯವು ಬಡವರ ತಟ್ಟೆಯ ಅನ್ನಕ್ಕೂ ವ್ಯಾಪಿಸಿರುವುದು ದುರಂತ. ಕೇಂದ್ರ ಆಹಾರ ನಿಗಮದ ಗೋಧಾಮಗಳು ಕರ್ನಾಟಕದಲ್ಲೇ ಇವೆ. ಅಲ್ಲಿಂದ ಅಕ್ಕಿ ಖರೀದಿಸುವುದಾದರೆ ಸಾಗಾಣಿಕೆ ವೆಚ್ಚ ಮತ್ತು ಸಮಯ ಉಳಿತಾಯವಾಗುತ್ತಿತ್ತು. ಇತರೆ ರಾಜ್ಯಗಳಿಂದ ಅಕ್ಕಿ ತರಿಸುವುದು ದುಬಾರಿಯಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ತಡೆಯುವ ಬಿಜೆಪಿಯ ಕುತಂತ್ರದಿಂದ ರಾಜ್ಯಕ್ಕೆ ಹೊರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ