ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಬುಧವಾರ (ನವೆಂಬರ್ 01) ಇಸ್ರೇಲ್ ಯುದ್ಧ ವಿಮಾನಗಳು ಗಾಜಾಪಟ್ಟಿಯಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ ಹಮಾಸ್ ಕಮಾಂಡರ್ ಸೇರಿದಂತೆ ಕನಿಷ್ಠ 50 ಮಂದಿ ಪ್ಯಾಲೆಸ್ತೇನಿಯನ್ ಜನರು ಮೃತ್ಯುಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.
ಯುದ್ಧ ತೀವ್ರ ಸ್ವರೂಪ ಪಡೆದಿದ್ದು, ಗಾಯಗೊಂಡವರಿಗೆ ಚಿಕಿತ್ಸೆಯೂ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಇಂಧನ ಮತ್ತು ಔಷಧದ ಕೊರತೆ ತಲೆದೋರಿದೆ ಎಂದು ವರದಿ ವಿವರಿಸಿದೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆ ವೈಮಾನಿ ದಾಳಿ ನಡೆಸುವ ಮೂಲಕ ಯುದ್ಧಕ್ಕೆ ನಾಂದಿ ಹಾಡಿತ್ತು.
ಹಮಾಸ್ ಮತ್ತು ಇಸ್ರೇಲ್ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಗಾಯಗೊಂಡು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅಕ್ಟೋಬರ್ 7ರ ದಾಳಿಯ ರೂವಾರಿ ಹಮಾಸ್ ನ ಕಮಾಂಡರ್ ಇಬ್ರಾಹಿಂ ಬಿಯಾರಿ ವೈಮಾನಿಕ ದಾಳಿಯಲ್ಲಿ ಕೊನೆಯುಸಿರೆಳೆದಿರುವುದಾಗಿ ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ತಿಳಿಸಿದೆ.
1948ರಿಂದ ಇಸ್ರೇಲ್ ಯುದ್ಧದ ಪರಿಣಾಮ ಜಬಾಲಿಯಾ ನಿರಾಶ್ರಿತರಿಗೆ ತವರು ಮನೆ ಇದ್ದಂತಾಗಿದೆ. ಗಾಜಾಪಟ್ಟಿಯಲ್ಲಿ ವಾಸ್ತವ್ಯ ಹೂಡಿರುವವರು ತಕ್ಷಣವೇ ಬೇರೆಡೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಎಚ್ಚರಿಕೆ ನೀಡಿದ್ದರೂ ಕೂಡಾ ನೂರಾರು ಮಂದಿ ಗಾಜಾದಲ್ಲಿಯೇ ಉಳಿದಕೊಂಡಿದ್ದು, ಬಾಂಬ್ ದಾಳಿಯಲ್ಲಿ ನೂರಾರು ಕಟ್ಟಡಗಳು ಧ್ವಂಸಗೊಂಡಿರುವುದಾಗಿ ಹಮಾಸ್ ತಿಳಿಸಿದೆ.