Mysore
21
overcast clouds
Light
Dark

ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಮಾದಕ್ಕೆ ಬಲಿಯಾದ್ನಾ ಅರ್ಜುನ ?

ಹಾಸನ : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಬರೊಬ್ಬರಿ 8 ಬಾರಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ್ದ ಅರ್ಜುನ ಆನೆ ನೆನ್ನೆ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಆದರೆ ಸ್ಥಳೀಯರೊಬ್ಬರು ಮಾವುತರೊಂದಿಗೆ ಅರ್ಜುನನ ಸಾವಿನ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್‌ ಅಗುತ್ತಿದ್ದು, ಗುರಿ ತಪ್ಪಿ ಬಿದ್ದ ಗುಂಡೇಟಿನಿಂದಾಗಿ ಅರ್ಜುನ ಉಸಿರು ಚೆಲ್ಲಿದನಾ ? ಎಂಬ ಅನುಮಾನ ಹುಟ್ಟುಹಾಕಿದೆ.

ವೈರಲ್‌ ಆಗಿರುವ ಮಾವುತ ಹಾಗೂ ಸ್ಥಳೀಯರೊಬ್ಬರ ಸಂಭಾಷಣೆ ವಿಡಿಯೋದಲ್ಲಿ ಮದದಲ್ಲಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಈ ಕಾರ್ಯಾಚರಣೆಯ ವೇಳೆ ಒಂಟಿ ಸಲಗ ದಾಳಿ ಮಾಡಿತ್ತು ಇದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಅಚಾನಕ್ಕಾಗಿ ಆ ಗುಂಡು ಅರ್ಜುನನ ಕಾಲಿಗೆ ತಗುಲಿದೆ. ಕಾರ್ಯಾಚರಣೆಯ ವೇಳೆ ಅರವಳಿಕೆ ಇಂಜೆಕ್ಷನ್‌ ನೀಡಲಾಯ್ತು, ಅದು ಗುರಿ ತಪ್ಪಿ ಪ್ರಶಾಂತ್‌ ಎಂಬ ಸಾಕಾನೆ ಮೇಲೆ ಬಿತ್ತು. ನಂತರ ಮತ್ತೊಂದು ಇಂಜೆಕ್ಷನ್‌ ನೀಡಿ ಅದನ್ನು ಸುಧಾರಿಸಲಾಯ್ತು. ನಂತರ ಅರ್ಜುನ ಕಾಡಾನೆ ಮೇಲೆ ದಾಳಿ ಮಾಡಿದ. ಕಾಡಾನೆ ಹಾಗೂ ಅರ್ಜುನನ ಕಾಳಗದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು. ಅದು ಅರ್ಜುನನ ಕಾಲಿಗೆ ತಗುಲಿತ್ತು. ಆಗ ಅರ್ಜುನ ಬಲ ಕಳೆದುಕೊಂಡ. ಆಗ ಅರ್ಜುನ ದೊಡ್ಡ ಆನೆಯಾದ್ದರಿಂದ ಸುತ್ತಮುತ್ತಲಿನ ಮರಗಳನ್ನು ಬೀಳಿಸಿದ, ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ತಗುಲಿದ್ದರಿಂದ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಈ ವೇಳೆ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿದೆ. ದಾಳಿಗೊಳಗಾದ ಅರ್ಜುನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮಾತನಾಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ