ನಂಜನಗೂಡು: ಕಳೆದ ವಾರ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಅಂಧಕಾಸುರನ ಸಂಹಾರದ ವೇಳೆ ಕಿಡಿಗೇಡಿಗಳು ಶ್ರೀಕಂಠೇಶ್ವರ ಉತ್ಸವ ಮೂರ್ತಿಗೆ ಅಪವಿತ್ರ ನೀರು ಎರಚಿ ಅಪಚಾರ ಮಾಡಿದ ಹಿನ್ನಲೆ ಶ್ರೀಕಂಠೇಶ್ವರ ಭಕ್ತ ಮಂಡಳಿ ವತಿಯಿಂದ ನಾಳೆ ನಂಜನಗೂಡು ಬಂದ್ ಕರೆಯಲಾಗಿದೆ. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಧಾರ್ಮಿಕ ಆಚರಣೆಯಾದ ಅಂಧಕಾಸುರನ ಸಂಹಾರದ ವೇಳೆ ಬುದ್ಧಿಜೀವಿಗಳು ದೇವಾಲಯದ ಆಚರಣೆಗೆ ಅಡಚಣೆ ಮಾಡುವುದಲ್ಲದೇ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪವಿತ್ರ ನೀರು ಎರಚುವ ಮೂಲಕ ಅಪಮಾನ ಮಾಡಿದ್ದರು.
ಇದನ್ನು ಖಂಡಿಸಿ ಆಚರಣೆಯಲ್ಲಿ ಭಾಗಿಯಾಗಿದ್ದ ನೂರಾರು ಭಕ್ತರು ಸ್ಥಳದಲ್ಲೇ ಕೂತು ಆಹೋರಾತ್ರಿ ಧರಣಿ ನಡೆಸಿದರು. ಘಟನೆ ನಡೆದು ಒಂದು ವಾರವಾದೂ ಇನ್ನೂ ಆರೋಪಿಗಳನ್ನು ಬಂಧಿಸದಿರುವುದನ್ನು ಖಂಡಿಸಿ ಶ್ರೀಕಂಠೇಶ್ವರ ಭಕ್ತ ಮಂಡಳಿ ನಾಳೆ ನಂಜನಗೂಡು ಬಂದ್‌ಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಭಕ್ತ ಮಂಡಳಿಯ ಸದಸ್ಯ ಗಿರೀಶ್, ಡಿ.26ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಇನ್ನಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿಲ್ಲ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಾಖ್ಷಿ ಆಧಾರಗಳು, ವೀಡೀಯೋ ತುಣುಕಗಳನ್ನು ನೀಡಲಾಗಿದೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಶ್ರೀಕಂಠೇಶ್ವರ ಸ್ವಾಮಿಯ ಸಾವಿರಾರು ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ.
ಈ ಕೂಡಲೇ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ನಾಳೆ ನಂಜನಗೂಡು ಬಂದ್‌ಗೆ ಕರೆ ನೀಡಲಾಗಿದೆ. ಯಾವುದೇ ಪಕ್ಷ ಭೇದವಿಲ್ಲದೇ ನಂನಗೂಡಿನ ವರ್ತಕರ ಸಂಘ, ಆಟೋರಿಕ್ಷಾ ಚಾಲಕರ ಸಂಘ, ಕನ್ನಡ ಪರ ಸಂಘಟನೆ, ರಸ್ತೆ ಬದಿ ವ್ಯಾಪಾರಿ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಿದ್ದಾರೆ ಎಂದು ಗಿರೀಶ್ ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೆ ಆರೋಪಿಗಳನ್ನು ಬಂಧಿಸಲು ಆದೇಶ ನೀಡಿ, ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದರೇ ಈ ಹೋರಾಟ ಕೇವಲ ನಂಜನಗೂಡಿಗೇ ಸೀಮಿತಗೊಳಿಸದೇ ಜಿಲ್ಲಾಮಟ್ಟದಲ್ಲೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎನ್.ಆರ್. ಕೃಷ್ಣಪ್ಪಗೌಡ, ನಗರಸಭಾ ಸದಸ್ಯ ಕಪಿಲೇಶ್ ಇದ್ದರು.