Mysore
23
light intensity drizzle
Light
Dark

ಸಮುದ್ರಯಾನಕ್ಕೆ ಮುಂದಾದ ಭಾರತ : ಮಾನವ ಸಹಿತ ಜಲಾಂತರ್ಗಾಮಿ ಮತ್ಸ್ಯ 6000 ಸಿದ್ಧ

ನವದೆಹಲಿ : ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನ ಅನ್ವೇಷಣೆಗೆ ಆದಿತ್ಯ ಎಲ್‌-1 ನೌಕೆ ಕಳುಹಿಸಿರುವ ಭಾರತ ಇದೀಗ ಸಮುದ್ರಯಾನದತ್ತ ಮುಖ ಮಾಡಿದೆ.

ಭಾರತೀಯ ವಿಜ್ಞಾನಿಗಳ ಮಹತ್ವಾಕಾಂಕ್ಷೆಯ ಸಮುದ್ರಯಾನ ಯೋಜನೆ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಬರೋಬ್ಬರಿ 6 ಸಾವಿರ ಮೀಟರ್ ಸಮುದ್ರದ ಆಳಕ್ಕೆ ಮೂವರು ಸಂಶೋಧಕರನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ದೇಶೀಯ ನಿರ್ಮಿತ ಜಲಾಂತರ್ಗಾಮಿ ನೌಕೆ ಸಿದ್ಧವಾಗಿದೆ.

ಸಮುದ್ರದ ಆಳದಲ್ಲಿ ಇರಬಹುದಾದ ಬೆಲೆ ಬಾಳುವ ಲೋಹಗಳಾದ ನಿಕ್ಕಲ್, ಮ್ಯಾಂಗನೀಸ್, ಕೋಬಾಲ್ಟ್‌ ಲೋಹಗಳ ನಿಕ್ಷೇಪ ಪತ್ತೆ ಹಚ್ಚಲು ಈ ಯೋಜನೆ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತಜ್ಞರನ್ನು ಸಮುದ್ರದ ಆಳಕ್ಕೆ ಕರೆದೊಯ್ಯುವ ಜಲಾಂತರ್ಗಾಮಿ ನೌಕೆಗೆ ಮತ್ಸ್ಯ 6000 ಎಂದು ಹೆಸರಿಡಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ನೌಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೆನ್ನೈ ಸಮೀಪದ ಸಾಗರ ತೀರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಈ ಜಲಾಂತರ್ಗಾಮಿ ನೌಕೆಯ ಮೊದಲ ಸಮುದ್ರ ಪರೀಕ್ಷೆ ನಡೆಯಲಿದ್ದು, 2024ರ ಆರಂಭದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರದ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್, ಆಳ ಸಮುದ್ರ ಯೋಜನೆ ಅಡಿಯಲ್ಲಿ ಸಮುದ್ರಯಾನ ಕಾರ್ಯಕ್ರಮ ರೂಪಿಸಲಾಗಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಈ ನೌಕೆಯನ್ನು ಸಮುದ್ರದ 500 ಮೀಟರ್ ಆಳಕ್ಕೆ ಇಳಿಸಿ ಮೊದಲ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆ 2026ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಎನ್‌ಐಒಟಿ ನಿರ್ದೇಶಕ ಜಿ.ಎ ರಾಮದಾಸ್‌, 2.1 ಮೀಟರ್‌ ವ್ಯಾಸದ ಗೋಳಾಕಾರದಲ್ಲಿ ಈ ಜಲಾಂತರ್ಗಾಮಿಯನ್ನು ವಿನ್ಯಾಸಗೊಳಿಸಲಾಗಿದೆ. 6 ಸಾವಿರ ಮೀಟರ್‌ ಆಳಕ್ಕೆ ಕಳುಹಿಸಬೇಕಿರುವುದರಿಂದ 600 ಬಾರ್‌ ಒತ್ತಡ (ಸಮುದ್ರಮಟ್ಟದ ಒತ್ತಡಕ್ಕಿಂತ 600 ಪಟ್ಟು ಹೆಚ್ಚು) ತಡೆದುಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಜಲಾಂತರ್ಗಾಮಿಯನ್ನ ಸಿದ್ಧಪಡಿಸಲಾಗಿದೆ. 12 ರಿಂದ 16 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 96 ಗಂಟೆಗಳ ಕಾಲ ಆಕ್ಸಿಜನ್‌ ಇದರಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್‌ ಹಾಗೂ ಚೀನಾ ದೇಶಗಳು ಮಾತ್ರ ಈ ಮಾದರಿಯ ಮಾನವ ಸಹಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸಿವೆ. ಈ ನೌಕೆ ಮೂಲಕ ಅಮೂಲ್ಯ ಲೋಹಗಳಾದ ನಿಕ್ಕಲ್, ಕೋಬಾಲ್ಟ್, ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್ಸ್‌ ಹಾಗೂ ಗ್ಯಾಸ್ ಹೈಡ್ರೇಟ್ಸ್‌ಗಳನ್ನು ಪತ್ತೆ ಹಚ್ಚಲು ತೀರ್ಮಾನಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ