Mysore
25
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಸನಾತನ ಧರ್ಮ ಕುರಿತ ಹೇಳಿಕೆಯ ಪ್ರತಿಯೊಂದು ಶಬ್ದವನ್ನೂ ನಾನು ಸಮರ್ಥಿಸುತ್ತೇನೆ: ಉದಯನಿಧಿ ಸ್ಟಾಲಿನ್

ಚೆನ್ನೈ: ಸನಾತನ ಧರ್ಮ ಕುರಿತು ನೀಡಿರುವ ಹೇಳಿಕೆಗೆ ಬದ್ಧ. ಈ ಸಂಬಂಧ ಯಾವುದೇ ಕಾನೂನಾತ್ಮಕ ಸವಾಲು ಎದುರಿಸಲು ಸಿದ್ಧ ಎಂದು ತಮಿಳುನಾಡಿನ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಖಾತೆ ಸಚಿವ ಉದಯನಿಧಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನ ಪ್ರಗತಿಪರ ಬರಹಗಾರರ ಹಾಗೂ ಕಲಾವಿದರ ಸಂಘ ಆಯೋಜಿಸಿದ್ದ ‘ಸನಾತನ ನಿರ್ಮೂಲನೆ’ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು ‘ಸನಾತನ’ ಪರಿಕಲ್ಪನೆ ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾದದ್ದು ಹಾಗೂ ಇದನ್ನು ನಿರ್ಮೂಲನೆ ಮಾಡಲೇಬೇಕು ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿತ್ತು.

“ನನಗೆ ವಿಶೇಷ ಭಾಷಣ ಮಾಡುವ ಅವಕಾಶ ನೀಡಿದ್ದಕ್ಕಾಗಿ ಈ ಸಮ್ಮೇಳನದ ಆಯೋಜಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲಾಗಿ ‘ಸನಾತನ ನಿರ್ಮೂಲನೆ ಸಮ್ಮೇಳನ’ ಎಂದು ಈ ಸಮ್ಮೇಳನಕ್ಕೆ ಹೆಸರಿಟ್ಟಿದ್ದೀರಿ. ಇದನ್ನು ಶ್ಲಾಘಿಸುತ್ತೇನೆ” ಎಂದು ಉದಯನಿಧಿ ಹೇಳಿದ್ದಾಗಿ ಎಎನ್‍ಐ ವರದಿ ಮಾಡಿದೆ.

“ಕೆಲವು ಅಂಶಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು. ಡೆಂಗ್ಯು, ಸೊಳ್ಳೆ, ಮಲೇರಿಯಾ, ಕೊರೋನಾವನ್ನು ನಾವು ವಿರೋಧಿಸಲು ಸಾಧ್ಯವಿಲ್ಲ. ಇವುಗಳನ್ನು ನಿರ್ಮೂಲನೆ ಮಾಡಬೇಕು. ಅಂತೆಯೇ ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು. ಈ ಹೆಸರು ಸಂಸ್ಕತದಿಂದ ಬಂದದ್ದು, ಅದು ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ವಿರುದ್ಧವಾದದ್ದು” ಎಂದು ಹೇಳಿದ್ದರು.

ಬಳಿಕ ಎಕ್ಸ್ ನಲ್ಲಿ ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಉದಯನಿಧಿ, “ಸನಾತನ ಧರ್ಮ ಅನುಯಾಯಿಗಳ ಸಾಮೂಹಿಕ ಹತ್ಯೆಗೆ ನಾನು ಎಂದೂ ಕರೆ ನೀಡಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

“ಸನಾತನ ಧರ್ಮ ಎನ್ನುವುದು ಜನರನ್ನು ಜಾತಿ/ ಧರ್ಮದ ಹೆಸರಿನಲ್ಲಿ ವಿಭಜಿಸುವ ತತ್ವ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದು ಎಂದರೆ ಮಾನವೀಯತೆ ಮತ್ತು ಸಮಾನತೆಯನ್ನು ಎತ್ತಿಹಿಡಿಯುವುದು. ನಾನು ಹೇಳಿದ ಪ್ರತಿಯೊಂದು ಶಬ್ದವನ್ನೂ ನಾನು ಸಮರ್ಥಿಸುತ್ತೇನೆ. ಸನಾತನದ ಧರ್ಮದ ಕಾರಣದಿಂದ ದಮನಕ್ಕೆ ಮತ್ತು ತುಳಿತಕ್ಕೆ ಒಳಗಾದವರ ಪರವಾಗಿ ನಾನು ಮಾತನಾಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!