ಚೆನ್ನೈ : ವಿಶ್ವದ ಅತಿದೊಡ್ಡ ಬ್ರಾಂಡೆಡ್ ಸ್ಪೋರ್ಟ್ಸ್ ಶೂ ತಯಾರಿಕಾ ಕಂಪೆನಿ ಎನಿಸಿರುವ ತೈವಾನ್ ಮೂಲದ ಪೌ ಚೆನ್ ಕಂಪನಿಯ ಅಂಗ ಸಂಸ್ಥೆಯೊಂದು ತಮಿಳುನಾಡಿನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ 2,302 ಕೋಟಿ ರೂ.ಗಳ ಭಾರೀ ಹೂಡಿಕೆ ಮಾಡಲಿದೆ.
ಹಲವು ಜಾಗತಿಕ ಬ್ರಾಂಡ್‌ಗಳಿಗೆ ಶೂಗಳನ್ನು ಉತ್ಪಾದಿಸುವ ಮೂಲಕ ಜಾಗತಿಕ ಮನ್ನಣೆ ಗಳಿಸಿರುವ ಪೌ ಚೆನ್ ಕಂಪೆನಿಯು 2022ರಲ್ಲಿ 27.2 ಕೋಟಿ ಜೋಡಿ ಶೂಗಳನ್ನು ತಯಾರಿಸಿ ವಿಶ್ವದಾದ್ಯಂತ ರಫ್ತು ಮಾಡಿದೆ. ಇದು ಪ್ರಮುಖ ಜಾಗತಿಕ ಬ್ರ್ಯಾಂಡ್‌ಗಳಾದ ನೈಕಿ, ಅಡಿಡಾಸ್, ಏಸಿಕ್ಸ್, ಕ್ಲಾರ್ಕ್ಸ್, ರೀಬಾಕ್, ಪೂಮಾ, ಕ್ರಾಕ್ಸ್, ಟಿಂಬರ್‌ಲ್ಯಾಂಡ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಶೂಗಳನ್ನು ತಯಾರಿಸುತ್ತದೆ. ಇಂಥ ದೈತ್ಯ ಕಂಪನಿಯ ಅಂಗ ಸಂಸ್ಥೆಯು ತಮಿಳುನಾಡಿನಲ್ಲಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಲು ಸಿದ್ಧತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಆನ್‌ಲೈನ್ ಮೂಲಕ ಸಭೆ ನಡೆಸಿದ ಬಳಿಕ ಪೌ ಚೆನ್ ಕಂಪೆನಿಯ ಉಪಾಧ್ಯಕ್ಷ ಜಾರ್ಜ್ ಲಿಯು ಅವರು “ಇದು ಭಾರತದಲ್ಲಿ ಬರಲಿರುವ ಅನೇಕ ಹೂಡಿಕೆಗಳಲ್ಲಿ ಮೊದಲನೆ ಪ್ರಯತ್ನವಾಗಿದೆ. ನಮ್ಮ ಹೂಡಿಕೆ ಯೋಜನೆಗೆ ಉತ್ತಮ ಬೆಂಬಲ ಸಿಗಲಿದೆ ಎಂಬ ವಿಶ್ವಾಸವಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಬ್ರಾಂಡೆಡ್ ಸ್ಪೋರ್ಟ್ಸ್ ಶೂ ತಯಾರಿಕಾ ಕಂಪೆನಿ ಪೌ ಚೆನ್‌ನ ಅಂಗ ಸಂಸ್ಥೆಯ ಹೂಡಿಕೆಯಿಂದ ತಮಿಳುನಾಡಿನಲ್ಲಿ 12 ವರ್ಷಗಳ ಅವಧಿಯಲ್ಲಿ ಸುಮಾರು 20,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತೈವಾನ್ ಮೂಲದ ಕಂಪನಿಯು ಹೇಳಿಕೊಂಡಿದೆ.
ಜಾರ್ಜಿಯೊ ಅರ್ಮಾನಿ ಮತ್ತು ಗುಚ್ಚಿ ಸೇರಿದಂತೆ ಅನೇಕ ಬ್ರಾಂಡ್‌ಗಳಿಂದ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಪಡೆದುಕೊಂಡಿರುವ ನೆರೆಯ ರಾಜ್ಯ ತಮಿಳುನಾಡು, ಭಾರತದ ಪಾದರಕ್ಷೆ ರಫ್ತಿನಲ್ಲಿ ಇದೀಗ ಶೇ. 45ರಷ್ಟು ಪಾಲು ಪಡೆದಿದೆ ಎಂದು ಅಲ್ಲಿನ ರಾಜ್ಯ ಸರಕಾರದ ವರದಿ ತಿಳಿಸಿದೆ. ಈ ಹೊಸ ಹೂಡಿಕೆಯು ತಮಿಳುನಾಡಿನ ಪಾದರಕ್ಷೆ ಉದ್ಯಮಕ್ಕೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಎಂ.ಕೆ. ಸ್ಟಾಲಿನ್ ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.
ತಮಿಳುನಾಡು ರಾಜ್ಯವು ಅನಾದಿ ಕಾಲದಿಂದಲೂ ಉದ್ಯಮಗಳಿಗೆ ಹೆಸರಾಗಿದ್ದು, ಪಾದರಕ್ಷೆ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂತರಾಷ್ಟ್ರೀಯ ತಯಾರಕರಿಗೆ ಜನಪ್ರಿಯ ತಾಣವಾಗಿ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಚಿಪ್ ತಯಾರಿಕೆ, ಮೊಬೈಲ್ ಫೋನ್ ಉತ್ಪಾದನೆ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲೂ ಹೆಸರು ಮಾಡುತ್ತಿದ್ದು, ಹೊಸ ತಲೆಮಾರಿನ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಮೂಲಕ ನೆರೆಯ ರಾಜ್ಯಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ.