Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಝೀಕಾ ವೈರಸ್ ಗೈಡ್‍ಲೈನ್ಸ್ ಪಾಲಿಸುವಂತೆ ಆರೋಗ್ಯ ಇಲಾಖೆ ಕರೆ

ಬೆಂಗಳೂರು : ಝೀಕಾ ವೈರಸ್‍ನಿಂದ ಪಾರಾಗಲು ಜನ ಕೆಲ ಗೈಡ್‍ಲೈನ್ಸ್‍ಗಳನ್ನು ಫಾಲೋ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ವೈರಸ್ ಬಗ್ಗೆ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಎದುರಾಗುವ ಸಾಧ್ಯತೆ ಇರುವುದರಿಂದ ಜನ ರೋಗ ಲಕ್ಷಣ ಕಂಡು ಬಂದ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಯೇಳುವುದು ಹಾಗೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸೋಂಕಿನ ಲಕ್ಷಣವಾಗಿದ್ದು, ಇಂತಹ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಲಾಗಿದೆ.

ಝೀಕಾ ವೈರಸ್ ತಡೆಗಟ್ಟಲು ನೀರು ಶೇಖರಣಾ ಪರಿಕರಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು ಮತ್ತು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ದರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.

ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕ ಮಾಡಲು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ