ತಿರುಪತಿ : ಚಿರತೆ ದಾಳಿಗೆ ಆರು ವರ್ಷದ ಬಾಲಕಿ ಬಲಿಯಾದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನಂ ಎಚ್ಚೆತ್ತುಕೊಂಡಿದ್ದು, ಕಾಲ್ನಡಿಗೆ ಮೂಲಕ ಬೆಟ್ಟ ಹತ್ತುವವರಿಗೆ ಹೊಸ ನಿಯಮ ತಂದಿದೆ. ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತುವ ಪ್ರತಿಯೊಬ್ಬ ಯಾತ್ರಾರ್ಥಿಗಳಿಗೆ ರಕ್ಷಣೆಗಾಗಿ ಸಿಬ್ಬಂದಿಯನ್ನು ಒದಗಿಸಲು ಮುಂದಾಗಿದೆ.
ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದಲ್ಲಿ ಬೆಳಗ್ಗೆ 5 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ 15ವರ್ಷದ ಮಕ್ಕಳ ಜೊತೆ ಪೋಷಕರು ಬೆಟ್ಟ ಹತ್ತಬಹುದಾಗಿದೆ. ಅಲಿಪಿರಿ ಮಾರ್ಗಮಧ್ಯೆ ಏಳನೇ ಮೈಲಿ ಬಳಿ ಮಕ್ಕಳಿಗೆ ಟ್ಯಾಗ್ ಹಾಕಲಾಗುತ್ತದೆ. ಅದರಲ್ಲಿ ಮಕ್ಕಳ ಹೆಸರು, ಪೋಷಕರ ವಿವರ, ಫೋನ್ ನಂಬರ್, ಪೊಲೀಸ್ ಟೋಲ್ ಫ್ರೀ ನಂಬರ್ ಇರಲಿದೆ.
ಹಿರಿಯರು ರಾತ್ರಿ 10 ಗಂಟೆಯವರೆಗೆ ಹೋಗಬಹುದು. ಘಾಟ್ ರಸ್ತೆಯಲ್ಲಿ ಸಂಜೆ 6 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡಲಾಗುತ್ತದೆ. ಯಾತ್ರಾರ್ಥಿಗಳನ್ನು ಗುಂಪುಗಳಲ್ಲಿ ಕಳುಹಿಸಲು ನಿರ್ಧರಿಸಲಾಗಿದೆ.
ಚಿರತೆ ಮಗುವನ್ನು ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳು, ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ನಡೆದ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ, ತಿರುಪತಿ ಮತ್ತು ತಿರುಮಲ ನಡುವೆ 500 ಕ್ಯಾಮೆರಾ ಸ್ಥಾಪಿಸಲಾಗುವುದು ಮತ್ತು ಅಗತ್ಯವಿದ್ದರೆ ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಗುವುದು ಎಂದು ತಿಳಿಸಿದರು.
ನರಭಕ್ಷಕ ಚಿರತೆಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರೂ ತಿರುಮಲದಲ್ಲಿ ಇನ್ನೂ ಐದು ಚಿರತೆಗಳು ಇವೆ ಎನ್ನಲಾಗಿದೆ. ಈ ಆತಂಕದ ಮಧ್ಯೆ 2000 ಮೆಟ್ಟಿಲ ಬಳಿ ಕರಡಿ ಕೂಡ ಕಾಣಿಸಿಕೊಂಡಿದೆ.