ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರು ಇಲ್ಲದ ಕಾರಣಕ್ಕೆ ಜೆಡಿಎಸ್‍ನಿಂದ ಸಿದ್ದರಾಮಯ್ಯ ಅವರನ್ನು ಆಮದು ಮಾಡಿಕೊಂಡು ಮುಖ್ಯಮಂತ್ರಿ ಮಾಡಲಾಯಿತೇ? ಎಂದು ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಅವರು ಸಚಿವ ಎಂ.ಬಿ.ಪಾಟೀಲ್‍ಗೆ ಪ್ರಶ್ನಿಸಿದ್ದಾರೆ.
ವಿಪಕ್ಷ ನಾಯಕನಾಗಲು ಬಿಜೆಪಿಯಲ್ಲಿ ಸಮರ್ಥರಿಲ್ಲವೇ? ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಲೆಹರ್ ಸಿಂಗ್, ಹಾಗಾದರೆ ಕಾಂಗ್ರೆಸ್‍ನಲ್ಲೂ ಸಮರ್ಥ ನಾಯಕರಿಲ್ಲದೆ ಸಿದ್ದರಾಮಯ್ಯ ಅವರನ್ನು ಆಮದು ಮಾಡಿಕೊಂಡಿದ್ದೀರ ಎಂದು ಮರುಪ್ರಶ್ನೆ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗಲು ಸಮರ್ಥರಿಲ್ಲವೇ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಂದಾಳತ್ವ ವಹಿಸಲು ಬಿಜೆಪಿಯವರು ಏಕೆ ಕೇಳುತ್ತಿದ್ದಾರೆ ಎಂಬ ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮೊದಲು ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥ ನಾಯಕರಿರಲಿಲ್ಲವೇ ಎಂಬುದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ಜೆಡಿಎಸ್ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದ್ದು ಏಕೆ? ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅಥವಾ ಎಂ.ಬಿ.ಪಾಟೀಲ್ ಅವರನ್ನೇ ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.