Mysore
25
overcast clouds
Light
Dark

ಜಾತಿ ಗಣತಿ ವರದಿ ಕುರಿತು ಸಿಎಂಗೆ ಪತ್ರ ಬರೆದಿಲ್ಲ: ಡಿಕೆಶಿ ಸ್ಪಷ್ಟನೆ

ಬೆಂಗಳೂರು: ಜಾತಿ ಗಣತಿ ವರದಿ ಅಂಗೀಕಾರ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಪತ್ರ ಬರೆದಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿರುವುದನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ತಾವು ಸಿಎಂ ಅವರಿಗೆ ಯಾವುದೇ ಪತ್ರ ಬರೆದಿಲ್ಲ. ಈ ವಿಚಾರವಾಗಿ ಅವರ ಜತೆ ಚರ್ಚೆಯನ್ನೂ ನಡೆಸಿಲ್ಲ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೂ ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವುದು ಸತ್ಯಕ್ಕೆ ದೂರವಾದುದು ಹಾಗೂ ಕಪೋಲ ಕಲ್ಪಿತ. ತಮ್ಮ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ತಂದು ಹಾಕಲು, ಒಡಕು ಮೂಡಿಸಲು ಈ ಸುಳ್ಳು ಸುದ್ದಿಯನ್ನು ಸೃಷ್ಠಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಲಿರುವ ಜಾತಿ ಗಣತಿ ವರದಿ ಅಂಗೀಕಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿತ್ತು. ಈ ಪತ್ರದಲ್ಲಿ ಅವರು ಜಾತಿ ಗಣತಿ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಆದರೆ ಇದೀಗ ಅವರು ಸ್ವತಃ ಈ ವಿಚಾರವನ್ನು ನಿರಾಕರಣೆ ಮಾಡಿದ್ದಾರೆ. ಜಾತಿ ಗಣತಿ ವರದಿ ಅಂಗೀಕಾರಕ್ಕೆ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂಬ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

2015 ರಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ನವೆಂಬರ್ ಅಂತ್ಯದೊಳಗಾಗಿ ಸರ್ಕಾರಕ್ಕೆ ಸಲ್ಲಿಸಲು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಆಯೋಗದಿಂದ ವರದಿಯನ್ನು ಸ್ಪೀಕಾರ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಕೆಲಸ ಕಾರ್ಯಗಳನ್ನು ಆಯೋಗ ತ್ವರಿತಗೊಳಿಸಿದೆ.

ಕೆ ಜಯಪ್ರಕಾಶ್ ಹೆಗ್ಡೆ ಅವರ ಮೂರು ವರ್ಷಗಳ ಅಧಿಕಾರ ಅವಧಿ ನವೆಂಬರ್ 25 ಕ್ಕೆ ಪೂರ್ಣಗೊಳ್ಳಲಿದೆ. ಈ ಅವಧಿಯ ಒಳಗಾಗಿ ಅವರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ