ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಆಡಳಿತ ಸೇವೆಗಳ ಮೇಲಿನ ಅಧಿಕಾರ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗುರುವಾರ (ಮೇ 11) ದೆಹಲಿ ಸರ್ಕಾರದ ಪರವಾಗಿ ಮಹತ್ವದ ತೀರ್ಪನ್ನು ನೀಡಿದ್ದು, ಇದರಿಂದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕಾನೂನು ಸಮರದಲ್ಲಿ ದೊಡ್ಡ ಗೆಲುವು ಸಿಕ್ಕಂತಾಗಿದೆ.
ರಾಷ್ಟ್ರರಾಜಧಾನಿಯಲ್ಲಿ ಆಡಳಿತಾತ್ಮಕ ಸೇವೆಯಲ್ಲಿ ದೆಹಲಿ ಸರ್ಕಾರವೇ ನಿಯಂತ್ರಣ ಹೊಂದಿರಬೇಕು. ಚುನಾಯಿತ ಸರ್ಕಾರ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಹೊಂದಿರುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಒಮ್ಮತದ ತೀರ್ಪಿನಲ್ಲಿ ತಿಳಿಸಿದೆ.
ಸಾಂವಿಧಾನಿಕ ಪೀಠದಲ್ಲಿ ಸಿಜೆಐ ಹಾಗೂ ಜಸ್ಟೀಸ್ ಎಂಆರ್ ಶಾ, ಜಸ್ಟೀಸ್ ಕೃಷ್ಣಾಮೂರ್ತಿ, ಜಸ್ಟೀಸ್ ಹಿಮಾ ಕೊಹ್ಲಿ ಮತ್ತು ಜಸ್ಟೀಸ್ ಪಿಎಸ್ ನರಸಿಂಹ ಅವರನ್ನೊಳಗೊಂಡಿದ್ದು, ಸೇವೆಗಳ ವಿಚಾರದಲ್ಲಿ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂಬ 2019ರ ಜಸ್ಟೀಸ್ ಅಶೋಕ್ ಭೂಷಣ್ ಅವರ ತೀರ್ಪನ್ನು ಒಪ್ಪಲು ನಿರಾಕರಿಸಿದೆ.
ಪ್ರಜಾಪ್ರಭುತ್ವ ಮತ್ತು ಫೆಡರಲ್ ವ್ಯವಸ್ಥೆ ಸಾಂವಿಧಾನಿಕ ವ್ಯವಸ್ಥೆಯ ಮೂಲಭೂತ ಭಾಗವಾಗಿದೆ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.