Mysore
23
overcast clouds
Light
Dark

BJPಯಲ್ಲಿ ಲಿಂಗಾಯತರ ಮೂಲೆಗುಂಪು: ಬೊಮ್ಮಾಯಿ ಅವರಿಗೂ ಯಡಿಯೂರಪ್ಪ ಸ್ಥಿತಿ ಬರಲಿದೆ: ಎಂ.ಬಿ.ಪಾಟೀಲ್‌

ವಿಜಯಪುರ : ಬಿಜೆಪಿ ಲಿಂಗಾಯತ ನಾಯಕರಾದ ಯಡಿಯೂರಪ್ಪ ಮೂಲಕ ಆಪರೇಶನ್ ಕಮಲ ಮಾಡಿ, ಅವರಿಗೆ ಕೆಟ್ಟ ಹೆಸರು ತಂದು, ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಅವರನ್ನೇ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬಿಜೆಪಿ ದಮನ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರು ಬಿಜೆಪಿ ಪಕ್ಷದಲ್ಲಿನ ವಾತಾವರಣದಿಂದ ಗಾಬರಿಯಾಗಿದ್ದು, ಮರಳಿ ಕಾಂಗ್ರೆಸ್ ಮನೆಗೆ ಬರುತ್ತಿದ್ದಾರೆ. ಟಿಕೆಟ್ ವಂಚಿಸಿದ ಕಾರಣಕ್ಕೆ ಲಕ್ಷ್ಮಣ ಸವದಿ, ಜಗದೀಶ ಶಟ್ಟರ್ ಅವರಂಥ ಹಿರಿಯ ನಾಯಕರು ಪಕ್ಷದ ನಾಯಕತ್ವದ ವರ್ತನೆಯಿಂದ ಹೊರಬರುತ್ತಿದ್ದಾರೆ. ಯಡಿಯೂರಪ್ಪ, ಶಟ್ಟರ್ ಅವರಿಗಾದ ಗತಿಯೇ ಬೊಮ್ಮಾಯಿ ಅವರಿಗೂ ಆಗಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ನಾಯಕರು ಕಾಂಗ್ರೆಸ್ ವೀರೇಂದ್ರ ಪಾಟೀಲ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿತು ಎಂದು ದೂರುತ್ತಾರೆ. ಆದರೆ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲ ಅವರು ಅನಾರೋಗ್ಯ ಪೀಡಿತರಾದ ಕಾರಣ ಅವರನ್ನು ಬದಲಿಸಲಾಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಈಗಲೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಆದರೂ ಅವರನ್ನು ಅಗೌರವವಾಗಿ ನಡೆಸಿಕೊಳ್ಳಲಾಯಿತು ಎಂದು ಹರಿಹಾಯ್ದರು.

ಲಿಂಗಾಯತ ಸಮುದಾದ ಯಡಿಯೂರಪ್ಪ ಅವರನ್ನು ಪದಚ್ಯುತ ಮಾಡಿದ ಬಳಿಕ ಲಿಂಗಾಯತ ನಾಯಕರು, ವೀರಶೈವ ಮಹಾಸಭಾ ಸೇರಿದಂತೆ ವೀರಶೈವ ಸಮುದಾಯದ ಹಲವರು ಧ್ವನಿ ಎತ್ತಿದ್ದರಿಂದ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದ್ದು ಎಂಬುದನ್ನು ಬೊಮ್ಮಾಯಿ ಅವರು ಮರೆಯಬಾರದು.

ಕಾಂಗ್ರೆಸ್ ಶಾಸಕರು, ಪಕ್ಷ ಬಯಸಿದಲ್ಲಿ, ಹೈಕಮಾಂಡ ಒಪ್ಪಿದಲ್ಲಿ ನಾನು ಮುಖ್ಯಮಂತ್ರಿ ಆಗಬಲ್ಲೆ, ಸಮರ್ಥನೂ ಇದ್ದೇನೆ. ನಾನು ಮಾತ್ರವಲ್ಲ ದೇಶಪಾಂಡೆ, ಕೃಷ್ಣ ಭೈರೆಗೌಡ, ಪರಮೇಶ್ವರ ಹೀಗೆ ಹಲವರು ಮುಖ್ಯಮಂತ್ರಿ ಆಗುವ ಅರ್ಹತೆ ಜೊತೆ ಸಮರ್ಥರಿದ್ದಾರೆ ಎಂದರು.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧೀಜಿ, ಇಂದಿರಾಗಾಂಧಿ, ರಾಜೀವ ಗಾಂಧಿ ಅವರಂಥ ನಾಯಕರು ಅಲಂಕರಿಸಿದ ಹುದ್ದೆಯಲ್ಲಿದ್ದಾರೆ. ಪ್ರಧಾನಮಂತ್ರಿ ಹುದ್ದೆಗೆ ಸಮರ್ಥರಾಗಿರುವ ಅವರನ್ನು ರಾಜ್ಯದ ಮುಖ್ಯಮಂತ್ರಿಯಂಥ ಸಣ್ಣ ಸ್ಥಾನಕ್ಕೆ ಪರಿಗಣಿಸಿ ಚರ್ಚಿಸುವುದು ಸರಿಯಲ್ಲ. ಇದರ ಹೊರತಾಗಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ