Mysore
28
few clouds

Social Media

ಗುರುವಾರ, 16 ಜನವರಿ 2025
Light
Dark

ವಾಣಿಜ್ಯ ಬಳಕೆ ಗ್ಯಾಸ್‌ ಸಿಲಿಂಡರ್‌ ದರ ಮತ್ತೆ ಇಳಿಕೆ : ₹83.50 ಕಡಿತ

ಹೊಸದಿಲ್ಲಿ : ಸಾರ್ವಜನಿಕ ರಂಗದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಗುರುವಾರ ಇಳಿಕೆ ಮಾಡಿವೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತೀಚಿನ ದರ ಪರಿಷ್ಕರಣೆಯ ನಂತರ ಹೊಸದಿಲ್ಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ 83.50 ರೂ. ಇಳಿಕೆಯಾಗಿದ್ದು ಸಿಲಿಂಡರ್‌ಗೆ 1,773 ರೂ.ಗೆ ಇಳಿದಿದೆ. ಈ ಹಿಂದೆ ಪ್ರತಿ ಸಿಲಿಂಡರ್‌ ದರ 1,856.50 ರೂ. ಇತ್ತು.

ಕೋಲ್ಕತ್ತಾದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ಗಳ ಬೆಲೆ ಈಗ 1875.50 ರೂ.ಗೆ ಇಳಿದಿದೆ. ಮುಂಬೈನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ 1,725 ರೂ.ಗೆ ಇಳಿಕೆಯಾಗಿದ್ದರೆ, ಚೆನ್ನೈನಲ್ಲಿ ಸದ್ಯ 19 ಕೆಜಿ ತೂಕದ ಸಿಲಿಂಡರ್‌ಗೆ 1937 ರೂ. ದರ ಇದೆ.

ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಅಂದರೆ ಜೂನ್‌ 1ರಿಂದಲೇ ಹೊಸ ದರಗಳು ಅನ್ವಯವಾಗಲಿವೆ.
ತೈಲ ಮಾರುಕಟ್ಟೆ ಕಂಪನಿಗಳು ಮೇ ತಿಂಗಳಲ್ಲಿ ಕೊನೆಯ ಬಾರಿಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಬದಲಾಯಿಸಿದ್ದವು. ಈ ವೇಳೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 171.50 ರೂಪಾಯಿ ಕಡಿತಗೊಳಿಸಿದ್ದವು. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಇದೇ ಗ್ಯಾಸ್‌ ಸಿಲಿಂಡರ್‌ಗಳ ದರವನ್ನು ಮಾರ್ಚ್‌ನಲ್ಲಿ 350.50 ರೂ.ನಷ್ಟು ಏರಿಕೆ ಮಾಡಲಾಗಿತ್ತು.

ಆದರೆ ಮನೆಗಳಲ್ಲಿ ಅಡುಗೆಗೆ ಬಳಕೆ ಮಾಡುವ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್‌ ದರ ಹಲವು ಸಮಯದಿಂದ ಗರಿಷ್ಠ ಮಟ್ಟದಲ್ಲೇ ಇದ್ದು, ಮಾರ್ಚ್‌ನಲ್ಲಿ ಪ್ರತಿ ಸಿಲಿಂಡರ್‌ ದರವನ್ನು 50 ರೂ. ಏರಿಕೆ ಮಾಡಲಾಗಿತ್ತು. ಇದರಲ್ಲಿ ಯಾವುದೇ ಇಳಿಕೆ ಆಗಿಲ್ಲ. ಪ್ರಸ್ತುತ, ಹೊಸದಿಲ್ಲಿಯಲ್ಲಿ ಗೃಹಬಳಕೆಯ ಅಡುಗೆ ಅನಿಲದ ಬೆಲೆ 14.2 ಕೆಜಿ ಸಿಲಿಂಡರ್‌ಗೆ 1,003 ರೂ. ಇದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 1,029 ರೂ., 1,002.5 ರೂ. ಮತ್ತು 1,018.5 ರೂ. ಇದೆ.

ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್‌ ಖರೀದಿಸಲು ಗ್ರಾಹಕರು 1105.50 ರೂ. ಪಾವತಿಸಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ