Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಅತಿ ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿಗೆ 2ನೇ ಸ್ಥಾನ

ಹೊಸದಿಲ್ಲಿ: ದೇಶದ 29 ಕೋಟ್ಯಧಿಪತಿ ಮುಖ್ಯಮಂತ್ರಿಗಳ ಪೈಕಿ ಅತಿ ಹೆಚ್ಚು ಸಾಲ ಹೊಂದಿರುವವರು ಎಂದರೆ ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್. ಅವರ ನಂತರದ ಸ್ಥಾನದಲ್ಲಿ ಇರುವವರು ಕರ್ನಾಟಕದ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿರುವ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ.

ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಭಾರತದ ಅತ್ಯಂತ ಸಿರಿವಂತ ಮುಖ್ಯಮಂತ್ರಿ ಎನಿಸಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ‘ಅತ್ಯಂತ ಬಡ ಮುಖ್ಯಮಂತ್ರಿ’ಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಎಡಿಆರ್ ವರದಿ ಪ್ರಕಾರ ದೇಶದ 29 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಅವರ ಸರಾಸರಿ ಆಸ್ತಿ 33.96 ಕೋಟಿ ರೂ ಇದೆ.

ಅತಿ ಹೆಚ್ಚು ಸಾಲ ಹೊಂದಿರುವ ಸಿಎಂಗಳು

ತೆಲಂಗಾಣ ಸಿಎಂ ಹಾಗೂ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಅತ್ಯಧಿಕ ಘೋಷಿತ ಸಾಲ ಇರುವ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟಾರೆ ಆಸ್ತಿ ಮೌಲ್ಯ 23.5 ಕೋಟಿ ರೂ ಇದ್ದರೆ, 8.8 ಕೋಟಿ ರೂ ಸಾಲ ಹೊಂದಿದ್ದಾರೆ.

ದೇಶದ ಅತಿ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ ಅವರು 13ನೇ ಸ್ಥಾನದಲ್ಲಿದ್ದಾರೆ.
ಅವರ ಆಸ್ತಿ ಮೌಲ್ಯ 8.92 ಕೋಟಿ ರೂ ಇದೆ. ಜತೆಗೆ 4.9 ಕೋಟಿ ರೂ ಸಾಲ ಹೊಂದಿದ್ದಾರೆ. ಅತ್ಯಧಿಕ ಸಾಲ ಇರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬೊಮ್ಮಾಯಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಏಕನಾಥ್ ಶಿಂಧೆ ಅವರು 3.75 ಕೋಟಿ ರೂ ಸಾಲ ಹೊಂದಿದ್ದು, ಅವರ ಆಸ್ತಿ ಮೌಲ್ಯ 11.6 ಕೋಟಿ ರೂ.

ಭಾರತದ ಎಲ್ಲ ಮುಖ್ಯಮಂತ್ರಿಗಳ ಚುನಾವಣಾ ಅಫಿಡವಿಟ್‌ಗಳನ್ನು ವಿಶ್ಲೇಷಣೆ ನಡೆಸಿದ ಬಳಿಕ ಈ ವರದಿ ಪ್ರಕಟಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಅವರು ಸುಮಾರು 510 ಕೋಟಿ ರೂ ಮೌಲ್ಯದ ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿದ್ದಾರೆ. ದೇಶದ ಉಳಿದ ಎಲ್ಲ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ಸೇರಿಸಿದರೂ ಅವುಗಳ ಒಟ್ಟು ಮೌಲ್ಯಕ್ಕಿಂತಲೂ ಹೆಚ್ಚು ಸಂಪತ್ತನ್ನು ಜಗನ್ ಹೊಂದಿದ್ದಾರೆ.

ಬಡ- ‘ಬಡಾ’ ಮುಖ್ಯಮಂತ್ರಿಗಳು

ಇನ್ನೊಂದೆಡೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಎಲ್ಲ ಮುಖ್ಯಮಂತ್ರಿಗಳಲ್ಲಿಯೇ ಅತ್ಯಂತ ಬಡ ಸಿಎಂ ಎನಿಸಿದ್ದಾರೆ. ಅವರು ಚುನಾವಣಾ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದ ನಿವ್ವಳ ಆಸ್ತಿ ಮೌಲ್ಯ ಕೇವಲ 15 ಲಕ್ಷ ರೂ. ಅವರ ಬಳಿ ಒಂದೇ ಒಂದು ಸ್ಥಿರ ಆಸ್ತಿ ಇಲ್ಲ. ಹಾಗೆಯೇ 1 ಕೋಟಿ ರೂ,ಗಿಂತ ಕಡಿಮೆ ಸಂಪತ್ತು ಹೊಂದಿರುವ ದೇಶದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಕೇವಲ 1 ಕೋಟಿ ರೂ ಆಸ್ತಿ ಘೋಷಣೆ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ‘ಅತಿ ಬಡವ’ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಹರ್ಯಾಣ ಸಿಎಂ ಮನೋಹರ ಲಾಲ್ ಖಟ್ಟರ್, ಮಣಿಪುರ ಸಿಎಂ ಎನ್ ಬೈರನ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕೂಡ ಸುಮಾರು 1 ಕೋಟಿ ರೂ ಆಸ್ತಿ ಹೊಂದಿದ್ದಾರೆ.

ಎರಡನೇ ಸ್ಥಾನದಲ್ಲಿ ಅರುಣಾಚಲ ಸಿಎಂ

ಜಗನ್ ರೆಡ್ಡಿ ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ ಸಿಎಂ ಪೇಮು ಖಂಡು ಇದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 163 ಕೋಟಿ ರೂ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 63.87 ಕೋಟಿ ರೂ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಾಗಾಲ್ಯಾಂಡ್ ಸಿಎಂ ನೀಫಿಯು ಅವರು 46 ಕೋಟಿ ರೂ ಹಾಗೂ ಪುದುಚೆರಿ ಸಿಎಂ ಎನ್ ರಂಗಸ್ವಾಮಿ ಅವರು 38 ಕೋಟಿ ರೂ ಸಂಪತ್ತು ಹೊಂದಿದ್ದಾರೆ.

ಉಳಿದ ಸಿಎಂಗಳ ಆಸ್ತಿ ಎಷ್ಟಿದೆ?

ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹಾಗೂ ಅವರ ಪಕ್ಕದ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ಅವರ ಸ್ವಂತ ಆಸ್ತಿ ಕ್ರಮವಾಗಿ 17 ಕೋಟಿ ರೂ ಹಾಗೂ 14 ಕೋಟಿ ರೂ ಇದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು 3 ಕೋಟಿ ರೂ ಆಸ್ತಿ ಹೊಂದಿದ್ದರೆ, ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಆಸ್ತಿ ಮೌಲ್ಯ 10 ಕೋಟಿ ರೂ ಇದೆ.

ಬಿಹಾರ ಸಿಎಂ ನಿತೀಶ್ ಕುಮಾರ್, ಮಿಜೋರಾಂನ ಜೊರಾಂಥಗ, ಸಿಕ್ಕಿಂನ ಪ್ರೇಮ್ ಸಿಂಗ್ ತಮಂಗ್ ಅವರು 3 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ 4 ಕೋಟಿ ರೂ, ರಾಜಸ್ಥಾನದ ಅಶೋಕ್ ಗೆಹ್ಲೋಟ್ 6 ಕೋಟಿ ರೂ, ಮಧ್ಯಪ್ರದೇಶ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ತಲಾ 7 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಗೋವಾ ಸಿಂಎ ಪ್ರಮೋದ್ ಸಾವಂತ್ 9 ಕೋಟಿ ಸಂಪತ್ತು ಹೊಂದಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣಗಳು

30 ಮುಖ್ಯಮಂತ್ರಿಗಳ ಅಫಿಡವಿಟ್ ವಿಶ್ಲೇಷಣೆಯ ಪ್ರಕಾರ, 13 ಸಿಎಂಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಪ್ರಯತ್ನ, ಅಪಹರಣ ಮತ್ತು ಅಪರಾಧ ಬೆದರಿಕೆ ಪ್ರಕರಣಗಳು ಸೇರಿವೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ