ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ (ಜೂನ್.24) ಆರಂಭಗೊಂಡಿದ್ದು, ಲೋಕಸಭೆಯ ಹಂಗಾಮಿ ಅಧ್ಯಕ್ಷರಾಗಿ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ ಪ್ರಮಾಣವಚನ ಸ್ವೀಕರಿಸಿದರು.
ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭರ್ತೃಹರಿ ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಸಂಸತ್‌ನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ವಾರಣಾಸಿ ಕ್ಷೇತ್ರದ ಸಂಸದರಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದರು.
ಅಧಿವೇಶನದ ಮೊದಲ ದಿನವಾದ ಇಂದು 280 ಮಂದಿ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದು, ಮಂಗಳವಾರ 264 ಮಂದಿ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಜೂನ್.26ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.
ಉಭಯ ಸದನಗಳ ಜಂಟಿ ಸಭೆ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂನ್.27 ರಂದು ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಗಳ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚಗೆ ಜೂನ್. 28ರಿಂದ ಆರಂಭವಾಗುತ್ತದೆ. ಬಳಿಕ ಎರಡು ಸದನಗಳನ್ನು ಮುಂದೂಡಲಾಗಿದ್ದು, ಜುಲೈ 22ರಂದು ಕೇಂದ್ರ ಬಜೆಟ್ ಮಂಡನೆಗಾಗಿ ಮತ್ತೆ ಉಭಯ ಸದನಗಳಲ್ಲಿ ಸೇರಲಿವೆ.