Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಚುನಾವಣೆಯಲ್ಲಿ ಗೆಲ್ಲಲು ಜ್ಯೋತಿಷಿಗಳ ಮೊರೆ ಹೋಗ್ತಿದ್ದಾರಾ ಅಭ್ಯರ್ಥಿಗಳು ?

ಬೆಂಗಳೂರು : ಚುನಾವಣೆ ಹತ್ತಿರ ಬಂದಾಗ ಮತದಾರರಿಗೆ ಹಲವು ರೀತಿ ಆಮಿಷ ಒಡ್ಡುವುದು ಸರ್ವೆಸಾಮಾನ್ಯ. ಇದರ ಜೊತೆಗೆ ರಾಜಕಾರಣಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ.
ಇಷ್ಟೇ ಅಲ್ಲದೆ, ಹಲವು ರೀತಿಯ ಪೂಜೆ, ಹೋಮ-ಹವನಗಳನ್ನು ನಡೆಸುತ್ತಿದ್ದಾರೆ. ಹಳ್ಳಿ, ಹಳ್ಳಿಗಳಲ್ಲೂ ರಾಜಕಾರಣಿಗಳು ದೇವಸ್ಥಾನಗಳಿಗೆ ಎಡತಾಕುವುದು ಸಾಮಾನ್ಯವಾಗಿದೆ.
ದೇವಾಲಯಗಳಿಗೆ ಭೇಟಿ ನೀಡಿ, ಆಯಾ ಸಮುದಾಯಗಳ ಮತ ಸೆಳೆಯುವ ತಂತ್ರದ ಭಾಗವಾಗಿ ರಾಜಕೀಯ ನಾಯಕರು ಹೋದ ಕಡೆಯಲ್ಲಿ ದೇವರಿಗೆ ಕೈಮುಗಿಯುವುದು ಹೆಚ್ಚು ಕಂಡುಬರುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವುದನ್ನು ಹೊರತುಪಡಿಸಿದರೆ ಬಿಜೆಪಿ ಇನ್ನೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಹಾಗಾಗಿ ಟಿಕೆಟ್ ಸಿಗುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ಅನುಮಾನವಿದೆ. ಅದರ ಬಗ್ಗೆ ಕೇಳಲು ಟಿಕೆಟ್ ಆಕಾಂಕ್ಷಿಗಳು ಜ್ಯೋತಿಷಿಗಳಿಗೆ ಎಡತಾಕುತ್ತಿದ್ದಾರೆ.
ರಾಶಿ ಫಲ, ಯಾವ ದೇವರ ಪೂಜೆ ಮಾಡಿಸಬೇಕು. ಮತದಾರರಿಗೆ ಗಿಫ್ಟ್ ಯಾವ ಸಂದರ್ಭದಲ್ಲಿ ನೀಡಬೇಕು, ಮತದಾರರ ಭೇಟಿಗೆ ಹೋಗುವ ವೇಳೆ ಯಾವ ಬಣ್ಣದ ಬಟ್ಟೆ ಧರಿಸಬೇಕು, ಮನೆಯಿಂದ ಹೊರಡುವಾಗ ಯಾವ ದಿಕ್ಕಿನಿಂದ ಪ್ರಮಾಣ ಮಾಡಬೇಕು ಎಂಬುದನ್ನೂ ಕೇಳುವವರು ಇದ್ದಾರೆ.
ಗೆಲುವಿನ ದಾರಿ ಸುಗಮವಾಗಲಿ ಎಂದು ಸುದರ್ಶನ ಹೋಮ, ಪ್ರತ್ಯಂಗೀರಾ ಹೋಮ, ಶನೇಶ್ವರನ ಜಪ ಹೀಗೆ ಹಲವು ಬಗೆಯ ಪೂಜೆ-ಹೋಮಗಳನ್ನು ಮಾಡಿಸಲಾಗುತ್ತಿದೆ. ಇದರ ಜೊತೆಗೆ ವಿವಿಧ ದೇವಸ್ಥಾನ-ಮಠಗಳಿಗೆ ಭೇಟಿ ಕೊಡುವುದು, ಮನೆದೇವರ ಪೂಜೆ ಮಾಡುವುದು ಕೂಡ ನಡೆಸುತ್ತಾರೆ.
ಇನ್ನು ಚುನಾವಣೆ ಸಮೀಪ ಬಂದಾಗ, ಚುನಾವಣೆಯನ್ನು ಎದುರಿಸಲು ರಾಜಕೀಯ ನಾಯಕರು ಪ್ರತ್ಯಂಗಿರಾ ಹೋಮ ಹವನ ಮೊರೆ ಹೋಗುವುದು ಸಾಮಾನ್ಯ. ರಾಜಕೀಯ ಜೀವನದಲ್ಲಿ ಅಡ್ಡಿಯಾಗುವ ಶತ್ರುಗಳನ್ನು ಸಂಹಾರ ಮಾಡಿಸಲು ಈ ಹೋಮ ಮಾಡಿಸಲಾಗುತ್ತದೆ.
ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಈ ಹೋಮವನ್ನು ಬಹುತೇಕರು ಯಾರಿಗೂ ತಿಳಿಯದಂತೆ ಮಾಡಿಸುತ್ತಾರೆ. ಇದು ಹೊರಗೆ ಗೊತ್ತಾಗುವುದೇ ಇಲ್ಲ ಎಂದು ಅರ್ಚಕರೊಬ್ಬರು ಹೇಳುತ್ತಾರೆ.
ಅಭ್ಯರ್ಥಿಗಳು ಪಕ್ಷಗಳಿಂದ ತಾವು ಪಡೆದುಕೊಳ್ಳುವ ಬಿ ಫಾರಂ ಅನ್ನು ದೇವಸ್ಥಾನಗಳಿಗೆ ತೆಗೆದುಕೊಂಡು ಹೊಗಿ ಪೂಜೆ ನೆರವೇರಿಸುತ್ತಾರೆ. ಬಳಿಕ ನಾಮಪತ್ರ ಸಲ್ಲಿಸಲು ಜ್ಯೋತಿಷಿಗಳ ಬಳಿ ಸಮಯ ಕೇಳುತ್ತಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಪಕ್ಷಗಳು ಜ್ಯೋತಿಷಿಗಳ ಮೊರೆ ಹೋಗುತ್ತವೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು? ಯಾವ ದಿನಾಂಕ, ಸಮಯದಲ್ಲಿ ಮಾಡಬೇಕು ಎಂಬುದನ್ನು ಕೇಳಿಯೇ ಪಟ್ಟಿ ಪ್ರಕಟಿಸುವ ಪದ್ಧತಿ ಬಹುತೇಕ ಎಲ್ಲ ಪಕ್ಷಗಳಲ್ಲೂ ಇದೆ.
ಇನ್ನು ಕೆಲ ರಾಜಕಾರಣಿಗಳೂ ಕೇರಳದ ಜ್ಯೋತಿಷಿಗಳ ಮೊರೆಹೋಗುವುದು ಉಂಟು. ಈ ಹಿಂದೆಯೂ ಸಹ ಪ್ರತಿಷ್ಠಿತ ರಾಜಕಾರಣಿಗಳು ಕೇರಳದಲ್ಲಿ ಯಜ್ಞ, ಯಾಗಾದಿಗಳನ್ನು ಮಾಡಿಸಿದ್ದರು. ಇದರ ಜೊತೆಗೆ ಪ್ರತಿಷ್ಠಿತ ದೇವಾಲಯಗಳಲ್ಲೂ ಹೋಮ ಮಾಡಿಸಿದ್ದರು. ಹಾಗಾಗಿ ಪೂಜೆ ಮಾಡಿಕೊಡುವವರಿಗೆ ಚುನಾವಣೆಗಳು ಬಂದಾಗ ಹೆಚ್ಚು ಬೇಡಿಕೆ ಬರುತ್ತದೆ.
ಇನ್ನು ಅನೇಕ ರಾಜಕಾರಣಿಗಳು ಜಾತಕ ಹಿಡಿದು ಜ್ಯೋತಿಷಿಗಳನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯ ಕೇಳುತ್ತಾರೆ. ಜ್ಯೋತಿಷಿಗಳ ಸಲಹೆಯಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಕೊಳ್ಳೆಗಾಲದ ಜ್ಯೋತಿಷಿಗಳಿಂದಲೂ ಸಲಹೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವರು ತಮ್ಮ ಶತ್ರು ನಾಶಕ್ಕೆ ಮಾಟಮಂತ್ರ ಮಾಡಿಸುವುದೂ ನಡೆಯುತ್ತಿದೆ. ಲಿಂಬೆಹಣ್ಣು, ತಾಯತ, ಕಾಯಿ, ಕರಿದಾರದಿಂದ ಮಾಟ ಮಂತ್ರ ಮಾಡಿಸಿ ಓಡಾಡುವ ದಾರಿಯಲ್ಲಿ, ಶತ್ರುಗಳ ಕಚೇರಿ, ಮನೆ ಸುತ್ತಮುತ್ತ ಹಾಕುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ.
ರಾಯಚೂರು ಜಿಲ್ಲೆ ಲಿಂಗಸಗೂರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಅವರ ಮನೆ ಮತ್ತು ಕಚೇರಿ ಮುಂದೆ ಮಾಟಮಂತ್ರ ಮಾಡಿಸಿರುವ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇದರ ಜೊತೆಗೆ ಆಡಳಿತ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!