Mysore
27
broken clouds
Light
Dark

ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಜೆಡಿಎಸ್ ಅಭ್ಯರ್ಥಿ : ಪಕ್ಷದಿಂದ ಉಚ್ಚಾಟನೆಗೆ ತೀರ್ಮಾನ

ಬೆಳಗಾವಿ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಏಕಾಏಕಿ ನಾಮಪತ್ರ ವಾಪಸ್ ಪಡೆದಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಗೋಕಾಕ್​ನಲ್ಲೂ ಸಹ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಇದರೊಂದಿಗೆ ಜೆಡಿಎಸ್​ ವರಿಷ್ಠರಿಗೆ ಶಾಕ್ ಕೊಟ್ಟಿದ್ದಾರೆ.

ಹೌದು, ಗೋಕಾಕ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದನ್ ಗಿಡ್ಡನವರ್ ಅವರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡು ಕಾಂಗ್ರೆಸ್​ ಜೊತಗೆ ಕೈಜೋಡಿಸಿದ್ದಾರೆ. ಇದರೊಂದಿಗೆ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಒಂದಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಪಕ್ಷದ ನಾಯಕರಿಗೆ ಹೇಳದೆ ನಾಮಪತ್ರ ವಾಪಸ್ ಪಡೆದಿದ್ದಾರೆಂಬ ಟೀಕೆ ವ್ಯಕ್ತವಾಗಿದೆ.
ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್​​ ಮಧ್ಯೆ ಜಿದ್ದಾಜಿದ್ದಿ ಹೋರಾಟವಿರುವ ಗೋಕಾಕ್​ ರಾಜಕೀಯದಲ್ಲಿ ಹೊಸ ಬೆಳವಣಿಗೆ ನಡೆಸಿದ್ದು, ಕಾಂಗ್ರೆಸ್​ಗೆ ವರದಾನವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಕೊಂಚ ಸಂಕಷ್ಟ ಎದುರಾಗಿದೆ. ಯಾಕಂದ್ರೆ, ಕ್ಷೇತ್ರದ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ಹಾಗೂ ಕಾಂಗ್ರೆಸ್​​ ನಡುವೆ ಹರಿದುಹಂಚಿ ಹೋಗಲಿದ್ದು, ಇದರಿಂದ ತಮಗೆ ಲಾಭವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ರಮೇಶ್ ಜಾರಕಿಹೊಳಿ ಇದ್ದರು.

ಆದರೆ, ಇದೀಗ ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದು, ರಮೇಶ್ ಜಾರಕಿಹೊಳಿ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ.
ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿರುವ ಗೋಕಾಕ್ ತಾಲೂಕು ಜೆಡಿಎಸ್ ಅಧ್ಯಕ್ಷರೂ ಆಗಿರುವ ಚಂದನ್ ಗಿಡ್ಡನವರ್, ಅವರು ಕಾಂಗ್ರೆಸ್​ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಚಂದನ್ ಗಿಡ್ಡನವರ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಜಿಲ್ಲಾ ಜೆಡಿಎಸ್ ನಿರ್ಧಾರ ಮಾಡಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ