ಚಾಮರಾಜನಗರ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ತರಬೇತಿ ಪಡೆಯುತ್ತಿದ್ದ ಸರ್ಕಾರಿ ನೌಕರರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನೌಕರ ಸಾವನ್ನಪ್ಪಿದ್ದಾರೆಂದು ಕಾಮಗೆರೆ ಆಸ್ಪತ್ರೆ ವೈದ್ಯರು ಘೋಷಣೆ ಮಾಡಿದ್ದರು. ಆದರೆ, ಆ ನೌಕರನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯವಾಗ ದೇಹದ ಕೈ-ಕಾಲುಗಳನ್ನು ಅಲುಗಾಡಿಸಿದ್ದಾರೆಂದು ಕುಟುಂಬ ವರ್ಗದವರು ತಿಳಿಸಿದ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆ ಸಿಬ್ಬಂದಿ ಅವರನ್ನು ಎದ್ದು ಕೂರಿಸಿ ಮರಳಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನೌಕರ ಮೃತಪಟ್ಟಿದ್ದಾರೆ ಎಂದು ಮತ್ತೊಮ್ಮೆ ದೃಢಪಡಿಸಲಾಯಿತು.
ಸರ್ಕಾರಿ ಖಜಾನೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಜಗದೀಶ್ (40) ಅವರು ಮಂಗಳವಾರ ಬೆಳಗ್ಗೆ ಚಾಮರಾಜನಗರ ಜಿಲ್ಲೆ ಹನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಹಾಜರಾಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ಇವರನ್ನು ಪಟ್ಟಣದ ಕಾಮಗೆರೆ ಆಸ್ಪತ್ರೆಗೆ ಕೊಂಡೊಯ್ದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ಆಸ್ಪತ್ರೆ ವೈದ್ಯರು ಘೋಷಣೆ ಮಾಡಿದ್ದಾರೆ. ನಂತರ ಜಗದೀಶ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಾಗ ಅವರು ಕೈ ಕಾಲು ಅಲ್ಲಾಡಿಸಿದ್ದಾರೆಂದು ಹೇಳಲಾಗಿದೆ.
ಮೈಸೂರಿಗೆ ರವಾನೆ: ತಕ್ಷಣ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಮತ್ತು ನೌಕರನ ಕುಟುಂಬಸ್ಥರು ಜಗದೀಶ್ ಅವರನ್ನು ಶವಾಗಾರದಿಂದ ಪುನಃ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರು ನೌಕರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಮೈಸೂರಿನ ವೈದ್ಯರು ನೌಕರ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
https://andolana.in/districts/chamarajanagar/staff-died-of-heart-attack-during-election-training/