ಹಾಸನ: ಹಿಂದಿನ ಸರ್ಕಾರದಲ್ಲಿ ನಡೆದಿರುವ ವೈದ್ಯಕೀಯ ಕಾಲೇಜು ನಿರ್ಮಾಣ, ನೀರಾವರಿ ಅವ್ಯವಹಾರ, ಬಿಟ್‍ಕಾಯಿನ್, ಕೋವಿಡ್ ಸಂದರ್ಭದ ಖರೀದಿ ಸೇರಿದಂತೆ ಎಲ್ಲಾ ಹಗರಣಗಳನ್ನು ತನಿಖೆಗೊಳಪಡಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಲು ಹಾಸನಕ್ಕೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ನಾಲ್ಕು ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ ನಡೆದಿವೆ ಎಂಬ ಆರೋಪಗಳಿವೆ. ಕೊರೊನಾ ಸಮಯದಲ್ಲಿ ಅನೇಕ ಸಾಮಾಗ್ರಿ ಖರೀದಿಯಲ್ಲೂ ಅವ್ಯವಹಾರಗಳಾಗಿವೆ. ಅವುಗಳನ್ನು ತನಿಖೆ ನಡೆಸಲಾಗುವುದು.
ಮುಖ್ಯಮಂತ್ರಿ @siddaramaiah ಅವರು ಹಾಸನದಲ್ಲಿ ರಾಜ್ಯಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಡಿನ ಜನತೆಗೆ ಶುಭ ಕೋರಿದರು.
ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ,… pic.twitter.com/MKRsHn0F5g— CM of Karnataka (@CMofKarnataka) June 27, 2023
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಕೇವಲ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್ ಸುಳ್ಳು ಹೇಳಿದ್ದರು. ದುರಂತದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದರು. ಅವೆಲ್ಲವನ್ನೂ ತನಿಖೆ ನಡೆಸುತ್ತೇವೆ ಎಂದರು.
ನಿರಾವರಿ ಇಲಾಖೆಯಲ್ಲೂ ಅವ್ಯವಹಾರವಾಗಿದೆ ಎಂಬ ಆರೋಪಗಳಿವೆ. ಬಿಟ್ ಕಾಯಿನ್ ಹಗರಣ ನಡೆದಿದೆ. ಪಿಎಸ್‍ಐ ಹಗರಣದ ತನಿಖೆ ಮತ್ತಷ್ಟು ಚುರುಕುಗೊಳಿಸಿ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಜಾರಿಯಾಗಿದೆ. ಮಹಿಳೆಯರು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ. ಜುಲೈ ಒಂದರಿಂದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಮನೆ ಯಜಮಾನಿಗೆ ನೀಡುವ ಗೃಹಲಕ್ಷ್ಮೀ ಯೋಜನೆ ಆಗಸ್ಟ್ 15ರ ಬಳಿಕ ಜಾರಿಯಾಗಲಿದೆ. ಈಗಾಗಲೇ ಅರ್ಜಿ ಕರೆಯಲಾಗಿದ್ದು, ಸಾಕಷ್ಟು ಅರ್ಜಿಗಳು ಬರುತ್ತಿವೆ ಎಂದರು.
ಅನ್ನಭಾಗ್ಯ ಕಾರ್ಯಕ್ರಮದಲ್ಲಿ ಐದು ಕೆಜಿ ನೀಡಲಾಗುತ್ತಿದೆ. ಅದರ ಜೊತೆಗೆ ಐದು ಕೆಜಿ ಸೇರಿಸಿ ಹತ್ತು ಕೆ.ಜಿ. ನೀಡುವುದಾಗಿ ನಾವು ಭರವಸೆ ನೀಡಿದ್ದೆವು. ಅನ್ನಭಾಗ್ಯ ಯೋಜನೆ ಜಾರಿಗೆ ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ. ಕೇಂದ್ರ ಆಹಾರ ನಿಗಮ ಮೊದಲು ಅಕ್ಕಿ ಕೊಡುತ್ತೇವೆ ಎಂದು ಒಪ್ಪಿಕೊಂಡು ನಂತರ ಕೊಡಕ್ಕಾಗಲ್ಲ ಎಂದು ಪತ್ರ ಬರೆದಿದ್ದಾರೆ. ಕೇಂದ್ರದ ಷಡ್ಯಂತ್ರ ಎಫ್‍ಸಿಐನ ಬಳಿ ಸಾಕಷ್ಟು ದಾಸ್ತಾನು ಇಟ್ಟುಕೊಂಡು ಕೊಡಲ್ಲ ಎನ್ನುತ್ತಿದ್ದಾರೆ. ಕೇಂದ್ರ ಆಹಾರ ನಾಗರೀಕ ಪೂರೈಕೆ ಸಚಿವಾಲಯ ಎಫ್‍ಸಿಐ ನಿಂದ ಪತ್ರ ಬರೆಸಿದೆ. ಬಿಜೆಪಿ ಬಡವರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಅಕ್ಕಿ ಖರೀದಿಗೆ ಪಂಚಾಬ್, ಚತ್ತಿಸ್‍ಗಡ, ತೆಲಂಗಾಣ, ಆಂಧ್ರ ಪ್ರದೇಶ ಸರ್ಕಾರದಲ್ಲಿ ಪ್ರಯತ್ನ ಮಾಡಿದ್ದೇವೆ. ಅಕ್ಕಿ ಸಿಕ್ಕ ತಕ್ಷಣವೇ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. ಅಕ್ಕಿ ಖರೀದಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದಾದರೂ ಜಾರಿ ಮಾಡಿದರಾ. ರಾಜಕೀಯ ಗಿಮಿಕ್ ಎಂದು ಆರೋಪಿಸಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದಕ್ಕೆ ಜನರು ಕಿವಿಗೊಡಬೇಡಿ. ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.
ಯುವ ನಿಧಿ ಕಾರ್ಯಕ್ರಮ 2022-23ರಲ್ಲಿ ಉತ್ತೀರ್ಣವಾಗಿರುವ ಪದವೀಧರರು ಹಾಗೂ ಡಿಪ್ಲೋಮೋ ಪದವೀಧರರಿಗೆ ಆರು ತಿಂಗಳವರೆಗೂ ಕೆಲಸ ಸಿಗದಿದ್ದರೆ 24 ತಿಂಗಳು ತಿಂಗಳಿಗೆ ಮೂರು ಸಾವಿರ ಮತ್ತು ಒಂದು ಸಾವಿರ ರೂಪಾಯಿ ಪಂಚಖಾತ್ರಿಗಳ ಜಾರಿಗೆ ವರ್ಷಕ್ಕೆ 59 ಸಾವಿರ ಕೋಟಿ ಬೇಕು. ಈ ವರ್ಷ ಭಾರ ಜಾಸ್ತಿ ಇದೆ. ಯಾರು ಏನೇ ಹೇಳಲಿ. ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದು ಹೇಳಿದರು.