ಧಾರವಾಡ: ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ” ಎಂದು ಹೈಕೋರ್ಟ್‌ನ ಧಾರವಾಡ ಪೀಠವು ಆದೇಶಿಸಿದೆ.
ದತ್ತು ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿ ಏಕ ಸದಸ್ಯ ಪೀಠವು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಾಗಲಕೋಟೆಯ ಬನಹಟ್ಟಿ ತಾಲ್ಲೂಕಿನ ನಿವಾಸಿ ಎಸ್ ಗಿರೀಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.
“ಸ್ವಂತ ಮಗ ಅಥವಾ ಮಗಳಾಗಲಿ, ದತ್ತು ಮಗ ಅಥವಾ ಮಗಳಾಗಲಿ ಅವರು ಮಕ್ಕಳೇ ಆಗಿರುತ್ತಾರೆ. ಇವರ ನಡುವೆ ತಾರತಮ್ಯವಿದೆ ಎಂಬುದಾಗಿ ನ್ಯಾಯಾಲಯ ಒಪ್ಪಿಕೊಂಡರೆ, ದತ್ತು ಸ್ವೀಕಾರದ ಉದ್ದೇಶವೇ ಈಡೇರುವುದಿಲ್ಲ. ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ” ಎಂದು ಪೀಠವು ಆದೇಶಿಸಿದೆ.
“ಅನುಕಂಪದ ಉದ್ಯೋಗಕ್ಕೆ ಸಲ್ಲಿಕೆಯಾದ ಅರ್ಜಿ ಪರಿಗಣಿಸುವಾಗ ಸ್ವಾಭಾವಿಕ ಮಕ್ಕಳಿಗೆ ಸರಿಸಮನಾಗಿ ದತ್ತು ಮಕ್ಕಳನ್ನು ಪರಿಗಣಿಸಬೇಕು ಎಂದು ೨೦೨೧ರಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಮೇಲ್ಮನವಿದಾರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ನಂತರ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂಬ ಕಾರಣಕ್ಕೆ ತಿದ್ದುಪಡಿ ನಿಯಮಗಳ ಲಾಭವನ್ನು ಮೇಲ್ಮನವಿದಾರನಿಗೆ ನಿರಾಕರಿಸುವಂತಿಲ್ಲ” ಎಂದು ತಿಳಿಸಿದೆ.
“ಮೃತ ವಿನಾಯಕ ಅವರು ಪತ್ನಿ, ಸ್ವಾಭಾವಿಕ ಪುತ್ರ ಮತ್ತು ಪುತ್ರಿ ಅವರನ್ನು ಹೊಂದಿದ್ದರು. ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಾಗ ಅರ್ಜಿದಾರರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಬೇಕಾಗುತ್ತದೆ. ಸ್ವಂತ ಪುತ್ರ ಮೃತಪಟ್ಟ ಕಾರಣಕ್ಕೆ ಮನೆಯ ಜವಾಬ್ದಾರಿ ನೋಡಿಕೊಳ್ಳಲು ಗಿರೀಶ್ ಅವರನ್ನು ವಿನಾಯಕ ದತ್ತು ಪಡೆದಿದ್ದಾರೆ. ಅವರ ಸ್ವಾಭಾವಿಕ ಮಗಳು ಅನುಕಂಪದ ಉದ್ಯೋಗ ನೀಡಬೇಕಾಗುತ್ತದೆ. ಆದರೆ, ಆಕೆ ದೈಹಿಕ ಹಾಗೂ ಮಾನಸಿಕ ವಿಕಲಚೇತನರಾಗಿದ್ದರೆ. ಇಂತಹ ಸಂದರ್ಭದಲ್ಲಿ ಮನೆ ಜವಾಬ್ದಾರಿ ಹೊತ್ತಿರುವ ದತ್ತು ಪುತ್ರನಿಗೆ ಅನುಕಂಪದ ಆಧಾರದ ಉದ್ಯೋಗ ನೀಡಬೇಕಾಗುತ್ತದೆ. ಅನುಕಂಪದ ಆಧಾರದ ಉದ್ಯೋಗದ ನಿಯಮಗಳಿಗೆ ತಿದ್ದುಪಡಿ ತಂದಿರುವುದರಿಂದ, ದತ್ತು ಪುತ್ರ ಮತ್ತು ಸ್ವಾಭಾವಿಕ ಪುತ್ರನ ನಡುವೆ ತಾರತಮ್ಯ ಮಾಡುವುದು ಸಂವಿಧಾನದ ಪರಿಚ್ಛೇದ 14ರ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಲಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ ಅನುಕಂಪದ ಉದ್ಯೋಗಕ್ಕಾಗಿ ಮೇಲ್ಮನವಿದಾರ ಗಿರೀಶ್ (ದತ್ತು ಪುತ್ರ) ಸಲ್ಲಿಸಿರುವ ಅರ್ಜಿಯನ್ನು 12 ವಾರಗಳಲ್ಲಿ ಪರಿಗಣಿಸಬೇಕು ಎಂದು ಅಭಿಯೋಜನಾ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ವಿನಾಯಕ ಎಂ. ಮುತ್ತಟ್ಟಿ ಎಂಬುವರು ಬನಹಟ್ಟಿಯ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿ ದಲಾಯತ್ (ಗ್ರೂಪ್- ಡಿ ನೌಕರ) ಆಗಿ ಸೇವೆ ಸಲ್ಲಿಸುತ್ತಿದ್ದರು. ವಿನಾಯಕ ಅವರ ಪುತ್ರ 2010ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. 2011ರಲ್ಲಿ ವಿನಾಯಕ ಎಂ.ಮುತ್ತಟ್ಟಿ ಅವರು ಗಿರೀಶ್ (21 ವರ್ಷವಿದ್ದಾಗ) ಎಂಬಾತನನ್ನು ದತ್ತು ಪಡಿದುಕೊಂಡಿದ್ದರು. ಆ ಸಂಬಂಧ ದತ್ತು ಸ್ವೀಕಾರ ಪತ್ರ ಬರೆಸಿದ್ದರು. 2018ರ ಮಾರ್ಚ್ 27ರಂದು ವಿನಾಯಕ ಮೃತಪಟ್ಟಿದ್ದರು. ಇದರಿಂದ ಅನುಕಂಪದ ಆಧಾರದಲ್ಲಿ ತಂದೆಯ ಉದ್ಯೋಗವನ್ನು ತಮಗೆ ನೀಡುವಂತೆ ಕೋರಿ ದತ್ತು ಪುತ್ರ ಗಿರೀಶ್ ಅವರು 2018ರ ಜೂನ್ 7ರಂದು ಅಭಿಯೋಜನಾ (ಪ್ರಾಸಿಕ್ಯೂಷನ್) ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಇಲಾಖೆಯ ನಿರ್ದೇಶಕರು 2018ರ ಆಗಸ್ಟ್ 7ರಂದು ತಿರಸ್ಕರಿಸಿದ್ದರು.
“ಅರ್ಜಿದಾರರು ದತ್ತು ಮಗವಾಗಿದ್ದು, ಅವರಿಗೆ ಅನುಕಂಪದ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅರ್ಜಿದಾರ ಅನುಕಂಪದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಂದು, ‘ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳು-1996’ ಅನ್ವಯವಾಗುತ್ತಿರಲಿಲ್ಲ ಎಂದು ನಿರ್ದೇಶಕರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದರು. ಈ ಆದೇಶ ಪ್ರಶ್ನಿಸಿ ಗಿರೀಶ್ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠವು ಸಹ ಆ ಅರ್ಜಿಯನ್ನು ತಿರಸ್ಕರಿಸಿ 2021ರ ಜೂನ್ 24ರಂದು ಆದೇಶಿಸಿತ್ತು. ಇದರಿಂದ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ದತ್ತು ಮಕ್ಕಳಿಗೆ ಅನುಕಂಪದ ಉದ್ಯೋಗ ನೀಡಲು ಅವಕಾಶವಿಲ್ಲ ಎಂಬುದಾಗಿ 1996ರ ನಿಯಮಗಳು ತಿಳಿಸುತ್ತದೆ ಎಂಬ ಸರ್ಕಾರದ (ಅಭಿಯೋಜನಾ ಇಲಾಖೆ) ವಾದವನ್ನು ತಿರಸ್ಕರಿಸಿದೆ.