Mysore
23
overcast clouds
Light
Dark

ಆದಿತ್ಯ ಎಲ್‌1 : ಸೂರ್ಯನಿಗೆ ಇನ್ನಷ್ಟು ಹತ್ತಿರವಾದ ನೌಕೆ

ನವದೆಹಲಿ : ಸೂರ್ಯನ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಡಾವಣೆ ಮಾಡಿರುವ ಆದಿತ್ಯ ಎಲ್‌1 ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಕಕ್ಷೆ ಎತ್ತರಿಸುವ 3ನೇ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಯಶಸ್ವಿ ಕಾರ್ಯಾಚರಣೆಯ ನಂತರ, ಆದಿತ್ಯ ನೌಕೆಯು ಈಗ 296 ಕಿಮೀ x 71767 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸುತ್ತಿದೆ. ಮುಂದಿನ ಕಾರ್ಯಾಚರಣೆಯನ್ನು ಸೆಪ್ಟೆಂಬರ್ 15 ರಂದು ಮುಂಜಾನೆ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್ ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು.

ಬಾಹ್ಯಾಕಾಶ ನೌಕೆಯು 125 ದಿನಗಳ ನಂತರ ಎಲ್1 ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಆದಿತ್ಯ-ಎಲ್1 ಉಪಗ್ರಹ ಭೂಮಿ ಮತ್ತು ಚಂದ್ರನ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿತ್ತು.

ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ಅಥವಾ ಎಲ್-1 ಪಾಯಿಂಟ್‌ನಿಂದ ಸೂರ್ಯನನ್ನು ಅಧ್ಯಯನ ನಡೆಸಲಿದೆ. ಇಸ್ರೋ ಪ್ರಕಾರ, ಎಲ್1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾದ ಬಾಹ್ಯಾಕಾಶ ನೌಕೆಯು ಯಾವುದೇ ಗ್ರಹಣಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಯೋಜನವನ್ನು ಹೊಂದಿದೆ. ಇದು ಸೌರ ಚಟುವಟಿಕೆಗಳನ್ನು ವೀಕ್ಷಿಸಲು ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ