Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಪಿಯುಸಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೂ 20 ಅಂಕಗಳ ಆಂತರಿಕ ಪರೀಕ್ಷೆ: ಮಧು ಬಂಗಾರಪ್ಪ

ಬೆಂಗಳೂರು: ಪ್ರಥಮ ಹಾಗೂ ದ್ವೀತೀಯ ಪಿಯುಸಿಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಹೊಂದಿರುವ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳಿಗೆ ಆಂತರಿಕ ಮೌಲ್ಯಮಾಪನ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷಾರಂಭದಿಂದಲೇ ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಮತ್ತು ಪರೀಕ್ಷಾ ಒತ್ತಡ ನಿವಾರಣೆ ಮಾಡುವ ನಿಟ್ಟಿನಲ್ಲಿ 2023-24ನೇ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೂ 20 ಆಂತರಿಕ ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.  ಭಾಷಾ ವಿಷಯಗಳು ಮತ್ತು ಕೋರ್ ಸಬ್ಜೆಕ್ಟ್‌ಗಳಿಗೆ ಈ ನಿಯಮ ಅನ್ವಯ ಆಗಲಿದೆ.

ಮಂಗಳವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಲ್ಲಿಯವರೆಗೂ ವಿಜ್ಞಾನ, ಗಣಿತ, ರಸಾಯನಶಾಸ, ಭೌತಶಾಸ, ಜೀವಶಾಸ್ತ್ರ ಸೇರಿ ಇತರೆ 37 ವಿಷಯಗಳಿಗೆ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ಮತ್ತು 70 ಅಂಕಗಳಿಗೆ ಥಿಯೆರಿ ಪರೀಕ್ಷೆ ನಡೆಸಿ 100 ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಪ್ರಾಯೋಗಿಕ ಪರೀಕ್ಷೆ ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಅದನ್ನು 2023-24ನೇ ಸಾಲಿನಿಂದ 20 ಆಂತರಿಕ ಮತ್ತು 80 ಥಿಯರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹೊಸ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳ ನಿರಂತರ ಕಲಿಕೆಯ ಆಧಾರದ ಮೇಲೆ 10 ಅಂಕಗಳನ್ನು ನೀಡಲಾಗುತ್ತದೆ ಮತ್ತು ಅವರ ಕಾರ್ಯಯೋಜನೆಯ ಆಧಾರದ ಮೇಲೆ 10 ಅಂಕಗಳನ್ನು ನೀಡಲಾಗುತ್ತದೆ. “ಇದು ವಿದ್ಯಾರ್ಥಿಗಳಿಗೆ ಸ್ವಲ್ಪ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಾಯೋಗಿಕ ವಿಷಯಗಳಲ್ಲಿ ಅವರ ಆಸಕ್ತಿಯು ಹೆಚ್ಚಾಗುತ್ತದೆ” ಎಂದು ಸಚಿವರು ಹೇಳಿದರು.

ಒಂದು ವೇಳೆ ವಿದ್ಯಾರ್ಥಿಯು ಕಿರು ಪರೀಕ್ಷೆ ಮತ್ತು ಮಧ್ಯವಾರ್ಷಿಕ ಪರೀಕ್ಷೆಗೆ ಗೈರು ಹಾಜರಾಗಿದ್ದರೆ, ವಾರ್ಷಿಕ ಪರೀಕ್ಷೆಯಲ್ಲಿ 80 ಅಂಕಗಳಿಗೆ ಕನಿಷ್ಠ ಉತ್ತೀರ್ಣಗೊಳ್ಳಲು ಬೇಕಾದ 35 ಅಂಕಗಳನ್ನು ಪಡೆಯಬೇಕು. ಇದು ಕೇವಲ ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ