Mysore
24
broken clouds

Social Media

ಗುರುವಾರ, 12 ಡಿಸೆಂಬರ್ 2024
Light
Dark

2 ಸಾವಿರ ರೂ. ನೋಟು ಮೋದಿಗೆ ಇಷ್ಟವಿರಲಿಲ್ಲ : ಸಭೆಯ ಮಾಹಿತಿ ರಿವೀಲ್‌ ಮಾಡಿದ ನೃಪೇಂದ್ರ ಮಿಶ್ರಾ

ನವದೆಹಲಿ : ನರೇಂದ್ರ ಮೋದಿಯವರಿಗೆ 2 ಸಾವಿರ ರೂ. ನೋಟುಗಳನ್ನು ಚಲಾವಣೆಗೆ ತರಲು ಇಷ್ಟವಿರಲಿಲ್ಲ ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

2016ರ ನವೆಂಬರ್‌ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಬಿಡುಗಡೆ ಮಾಡಲು ಮೋದಿಯವರಿಗೆ ಇಷ್ಟವಿರಲಿಲ್ಲ. ಆದರೆ ನೋಟು ನಿಷೇಧ ಚರ್ಚೆಯಲ್ಲಿ ಅಧಿಕಾರಿಗಳ ಸಲಹೆಯನ್ನು ಒಪ್ಪಿದ ಬಳಿಕ ಹೊಸ ನೋಟು ಬಿಡುಗಡೆಗೆ ಸಹಮತ ಸೂಚಿಸಿದರು ಎಂದು ಮಾಧ್ಯಮವೊಂದಕ್ಕೆ ತಿಳಿಸಿದರು.

ಸಭೆಯಲ್ಲಿ ಏನಾಗಿತ್ತು? : ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರೂ ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪವನ್ನು ಅಧಿಕಾರಿಗಳು ಮುಂದಿಟ್ಟರು. ಈ ಪ್ರಸ್ತಾಪಕ್ಕೆ ಮೋದಿ ಬಡವರು ಮತ್ತು ಮಧ್ಯಮ ವರ್ಗದ ಜನರು 2000 ರೂ. ಮುಖಬೆಲೆಯ ನೋಟುಗಳನ್ನು ಬಳಸುವುದಿಲ್ಲ. ಅವರು ಹೆಚ್ಚಾಗಿ 100 ರೂ. ಮತ್ತು 500 ರೂ. ನೋಟು ಬಳಸುತ್ತಾರೆ. ಹೀಗಾಗಿ ಬಡವರಿಗೆ ತೊಂದರೆಯಾಗುವ ನೋಟುಗಳ ಬಿಡುಗಡೆಗೆ ತಮ್ಮ ಆಕ್ಷೇಪ ಇದೆ ಎಂದಿದ್ದರು.
ಮೋದಿ ಆಕ್ಷೇಪಕ್ಕೆ ಆಪ್ತ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ತಮ್ಮ ತಂಡದ ಸಲಹೆ ಅನ್ವಯ ತಂಡದ ನಾಯಕನಾಗಿ ಅವರು ಈ ನಿರ್ಧಾರ ಒಪ್ಪಿಕೊಂಡರು ಎಂದು ಮಿಶ್ರಾ ಹೇಳಿದ್ದಾರೆ.

ಹಿಂದೆ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ರಿಕೆಗೆ ಲೇಖನ ಬರೆದಿದ್ದ ನೃಪೇಂದ್ರ ಮಿಶ್ರಾ ಅಪನಗದೀಕರಣ ಸಿದ್ಧತೆಯ ವೇಳೆ 1 ಸಾವಿರ ರೂ. ನೋಟು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಮುದ್ರಿಸಬೇಕೆಂಬ ಸಲಹೆ ಇಷ್ಟವಾಗಿರಲಿಲ್ಲ. ಆದರೆ ಹಣದ ಕೊರತೆ ನೀಗಿಸಲು ಅನಿವಾರ್ಯವಾಗಿ 2 ಸಾವಿರ ರೂ. ಮುದ್ರಿಸಬೇಕೆಂದು ಸಲಹೆ ನೀಡಿದ ಬಳಿಕ ಕೊನೆಗೆ ಮೋದಿ ಒಪ್ಪಿಕೊಂಡಿದ್ದರು ಎಂದು ಅವರು ಬರೆದಿದ್ದರು.

ಈ ವಿಚಾರದ ಬಗ್ಗೆ ಭಾರೀ ಟೀಕೆ ಕೇಳಿ ಬಂದಿದ್ದರೂ ಮೋದಿಯವರು ಅಧಿಕಾರಿಗಳನ್ನು ದೂಷಿಸದೇ ಸ್ವತಃ ತಾವೇ ಹೊಣೆಯನ್ನು ಹೊತ್ತುಕೊಂಡಿದ್ದರು. ಕೆಲವು ವಿಚಾರಗಳ ಬಗ್ಗೆ ಸಮ್ಮತಿ ಇರದಿದ್ದರೂ ಜೊತೆಗಾರರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳುವ ಗುಣ ಮೋದಿಯವರಲ್ಲಿದೆ ಎಂದು ತಿಳಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ