Mysore
20
overcast clouds
Light
Dark

ಡಿಜಿಟಲ್ ಪ್ರಪಂಚದ ನಕಲಿ ಮತ್ತು ನಕಲುಗಳೂ, ಮನರಂಜನೋದ್ಯಮವೂ

ನಕಲಿ ಹಾವಳಿ ಮತ್ತು ನಕಲು ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎನ್ನುವ ಮಾತು ಮತ್ತೆ ಕೇಳಿಬರುತ್ತಿದೆ. ಡಿಜಿಟಲ್ ಜಗತ್ತಿನ ಕೊಡುಗೆಗಳಿವು. ಕೃತಕ ಬುದ್ಧಿಮತ್ತೆಯ ಬೇಡದ ಉಡುಗೊರೆ. ನಕಲಿ ಫೇಕ್, ಬರಿ ಫೇಕ್ ಅಲ್ಲ, ಡೀಪ್‌ಫೇಕ್ ವಿಡಿಯೋಗಳ ಕುರಿತಂತೆ ಕೇಂದ್ರ ಸರ್ಕಾರ ಮೊದಲ್ಗೊಂಡು ಜನಸಾಮಾನ್ಯರವರೆಗೆ ಮಾತನಾಡಲು ಆರಂಭಿಸಿದ್ದು ಇತ್ತೀಚೆಗೆ ಜನಪ್ರಿಯ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರ ಇಂತಹ ವಿಡಿಯೋ ಜಾಲತಾಣಗಳಲ್ಲಿ ಹರಿದಾಡತೊಡಗಿದಾಗ.

ರಶ್ಮಿಕಾ ಮಂದಣ್ಣ, ಲಿಫ್ಟ್‌ನ ಒಳಗೆ ಬರುವಂತೆ ಇರುವ ವಿಡಿಯೋ ಅದು. ಬ್ರಿಟಿಷ್ ಇನ್‌ಫ್ಲುಯೆನ್ಸರ್ ಝಾರಾ ಪಟೇಲ್ ಅವರ ವಿಡಿಯೋವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಬದಲಾಯಿಸಿ, ರಶ್ಮಿಕಾ ಅವರ ಮುಖವನ್ನು ಸೇರಿಸಿದ ನಕಲಿ ವಿಡಿಯೋ ಅದು.

ಅವರಿಂದಾಗಿಯೇ ಇಂತಹದೊಂದು ವಿಡಿಯೋದ ಕುರಿತು ಉದ್ಯಮದ ಮಂದಿ ಮತ್ತಿತರರು ತಿಳಿಯುವಂತಾಯಿತು. ಈಗ, ಈ ಹಂತದಲ್ಲಿ ಇಂತಹದೊಂದು ಪ್ರಸಂಗವನ್ನು ಎದುರಿಸುವುದು ಕಷ್ಟಸಾಧ್ಯ ಅಲ್ಲ, ಶಾಲೆಯಲ್ಲಿರುವಾಗ ಇಂತಹ ಪ್ರಕರಣ ಆಗಿದ್ದರೆ ಹೇಗೆ ನಿಭಾಯಿಸುತ್ತಿದ್ದೆ ಎನ್ನುವುದನ್ನು ಊಹಿಸಲೂ ಆಗುತ್ತಿಲ್ಲ ಎಂದಿದ್ದಾರೆ ಅವರು.

ಕಳೆದ ವರ್ಷ, ಕೃತಕ ಬುದ್ಧಿಮತ್ತೆಯ ಉಪಕರಣಗಳ ನೆರವಿನಿಂದ ಅಮೆರಿಕದ ನ್ಯೂಜರ್ಸಿಯ ವೆಸ್ಟ್‌ಫೀಲ್ಡ್ ಹೈಸ್ಕೂಲಿನ ವಿದ್ಯಾರ್ಥಿಗಳು, ತಮ್ಮ ತರಗತಿಯ ವಿದ್ಯಾರ್ಥಿನಿಯರ ನಗ್ನ ಚಿತ್ರಗಳನ್ನು ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣವೂ ಸೇರಿದಂತೆ ವರದಿಯಾದ, ವರದಿಯಾಗದ ಘಟನೆಗಳು ಈಗ ಹೊರಬರುತ್ತಿವೆ.

ಕೃತಕ ಬುದ್ಧಿಮತ್ತೆಯ ಸಾಧಕ-ಬಾಧಕಗಳ ಕುರಿತಂತೆ ಎಲ್ಲೆಡೆಯಲ್ಲೂ ಚರ್ಚೆಗಳಾಗುತ್ತಿವೆ, ಮನರಂಜನೋದ್ಯಮಕ್ಕೆ ವರವಾಗಬಲ್ಲ ಸಾಧ್ಯತೆಯ ಜೊತೆಜೊತೆಗೆ ಇಂತಹ ಪ್ರಕರಣಗಳೂ ಇವೆ. ತಂತ್ರಜ್ಞಾನವನ್ನು ಮನರಂಜನೋದ್ಯಮದ ಬೆಳವಣಿಗೆಗಾಗಿ ಬಳಸಬೇಕು. ಆ ನಿಟ್ಟಿನಲ್ಲಿ ಯೋಚನೆ, ಯೋಜನೆಗಳಿರಬೇಕು. ಚಿತ್ರನಿರ್ಮಾಣದ ವಿವಿಧ ಹಂತಗಳಲ್ಲಿ ಅದನ್ನು ಎಲ್ಲ ರೀತಿಯಲ್ಲೂ ಬಳಸಿಕೊಳ್ಳಲು ಸಾಧ್ಯ. ಆಗಿ ಹೋದ ನಟನಟಿಯರು ಇರುವಂತೆ ತೋರಿಸುವ ಚಿತ್ರಗಳನ್ನು ನಿರ್ಮಿಸಲು ಸಾಧ್ಯ. ಈಗಾಗಲೇ ಅಂತಹ ಪ್ರಯತ್ನಗಳು ನಡೆಯುತ್ತಿರುವುದಾಗಿ ಸುದ್ದಿ ಇದೆ.

ನಮ್ಮ ದೇಶದ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ, ಕೃತಕ ಬುದ್ಧಿಮತ್ತೆಯ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳನ್ನು ತೇಲಿಬಿಟ್ಟಾಗ ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇದೆ.

ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚಿಸಿದವರು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲುಶಿಕ್ಷೆ ಮತ್ತು ಒಂದು ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾರೆ. ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು, ಇದು ಅತಿ ದೊಡ್ಡ ಉಲ್ಲಂಘನೆ, ಸರ್ಕಾರ ನಾಗರಿಕರ ಸುರಕ್ಷತೆ ಮತು ನಂಬಿಕೆಯನ್ನು ಉಳಿಸಿಕೊಳ್ಳಲು ಗಂಭೀರವಾಗಿ ಈ ನಿಯಮದಡಿಯಲ್ಲಿ ಪ್ರಯತ್ನಿಸಲಿದೆ ಎಂದಿದ್ದಾಗಿ ವರದಿಯಾಗಿದೆ.

ಡಿಜಿಟಲ್ ಜಗತ್ತು ಅತ್ಯಂತ ವೇಗವಾಗಿ ರೂಪಾಂತರಗೊಳ್ಳುತ್ತಿರುವ ಈ ದಿನಗಳಲ್ಲಿ ನಮ್ಮ ಕಾಯಿದೆಗಳು, ಇಂತಹವುಗಳ ಕುರಿತು ಯೋಚನೆ ಮಾಡುವಷ್ಟರಲ್ಲಿ, ಅಲ್ಲಿ ಇನ್ನೇನೋ ಬದಲಾಗುತ್ತಲೇ ಇರುತ್ತದೆ. ನಮ್ಮ ಮಾಹಿತಿ ತಂತ್ರಜ್ಞಾನ ಕಾಯಿದೆ ಕೇವಲ 23 ವರ್ಷಗಳ ಹಿಂದಿನದು. ಅಷ್ಟರಲ್ಲೇ ಹಲವು ತಿದ್ದುಪಡಿಗಳಾಗಿವೆ. ಅದರ ಬದಲಿಗೆ ಡಿಜಿಟಲ್ ಇಂಡಿಯಾ ಕಾಯಿದೆ ಬರಬೇಕಾಗಿದೆ. ಅದಿನ್ನೂ ಕರಡಿನ ಹಂತದಲ್ಲಿದೆ ಎನ್ನಲಾಗಿದೆ.

ಅಮೆರಿಕದಲ್ಲಿ ಸಾಮಾಜಿಕ ತಾಣಗಳಿಗೆ ಪ್ರವೇಶಿಸಲು ವಯಸ್ಸಿನ ಮಿತಿ ಇದೆ. 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಲ್ಲಿ ಪ್ರವೇಶಿಸುವಂತಿಲ್ಲ. ನಮ್ಮಲ್ಲೋ ಪ್ರತಿಶತ ೩೦ರಷ್ಟು ಮಂದಿ ಈ ವಯೋಮಾನದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡುತ್ತಿರುತ್ತಾರೆ ಎನ್ನುತ್ತದೆ ಒಂದು ಮಾಹಿತಿ. ಕೊರಿಯಾ, ಫಿನ್‌ಲ್ಯಾಂಡ್‌ಗಳಲ್ಲಿ ಡಿಜಿಟಲ್ ಸಾಕ್ಷರತೆಗೆ ಆದ್ಯತೆ ನೀಡಲಾಗುತ್ತಿದೆ.

ಕೃತಕ ಬುದ್ಧಿಮತ್ತೆಯ ಡೀಪ್‌ಫೇಕ್ ತಂತ್ರಜ್ಞಾನದ ಸದ್ಬಳಕೆಯಾಗುವಂತೆ, ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದೂ ಹೌದು. ವಿಶೇಷವಾಗಿ ಈ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವ ಹದಿಹರೆಯದವರಿಗೆ ಇದರ ಸಾಧಕ-ಬಾಧಕಗಳನ್ನು ತಿಳಿಯಹೇಳುವ ಕೆಲಸಗಳಾಗಬೇಕು.

ನಕಲಿ ಆಯಿತು, ಇನ್ನು ನಕಲು. ಪೈರೆಸಿ. ಡೀಪ್‌ಫೇಕ್ ಸುದ್ದಿಯ ಬೆನ್ನಲ್ಲೇ ಬಂದ ಸುದ್ದಿ, ಕೇಂದ್ರ ಸರ್ಕಾರ ಪೈರೆಸಿ ತಡೆಗಟ್ಟಲು ಕೈಗೊಂಡ ಹೊಸ ಕ್ರಮದ ಕುರಿತಂತೆ ವಾರ್ತಾ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕಳೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸಿನಿಮಾಟೋಗ್ರಫಿ ಕಾಯಿದೆಗೆ ತಿದ್ದುಪಡಿ ತರಲಾಗಿತ್ತು. ಅದರನ್ವಯ ಯಾವುದೇ ಪೈರೆಸಿ ಮಾಡುವವರು ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿ ಇಲ್ಲವೇ ಚಿತ್ರದ ಅಧಿಕೃತ ನಿರ್ಮಾಣ ವೆಚ್ಚದ ಶೇ.5ರಷ್ಟು ಮೊತ್ತದ ದಂಡ ತೆರಬೇಕಾಗುತ್ತದೆ.

ಭಾರತೀಯ ಚಿತ್ರರಂಗ ಪೈರೆಸಿಯ ಕಾರಣದಿಂದ ಸುಮಾರು 20,000 ಕೋಟಿ ರೂ. ನಷ್ಟವನ್ನು ಅನುಭವಿಸುತ್ತದೆ. ಅದನ್ನು ತಡೆಯಲು ಸರ್ಕಾರದ ಮಟ್ಟದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಕೇಂದ್ರ ಮತ್ತು ಪ್ರಾದೇಶಿಕ ಅಧಿಕಾರಿಗಳನ್ನು ಇದರ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತೆರೆಕಂಡ ಹೊಸ ಚಿತ್ರಗಳ ಪೈರೆಸಿ ಆದ ಸಂದರ್ಭದಲ್ಲಿ ಅದರ ಕೃತಿಸ್ವಾಮ್ಯ ಹೊಂದಿದವರು ಇಲ್ಲವೇ ಅವರ ಪ್ರತಿನಿಧಿಗಳು ನೋಡೆಲ್ ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಅದನ್ನು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಅದು ಯಾವ ಜಾಲತಾಣದಲ್ಲಿ ಇದೆಯೋ, ಅದರ ಮುಖ್ಯಸ್ಥರಿಗೆ ಪತ್ರ ಬರೆದು 48 ಗಂಟೆಗಳ ಒಳಗೆ ತೆಗೆದು ಹಾಕುವಂತೆ ನೋಡಿಕೊಳ್ಳುತ್ತಾರೆ. ಒಂದು ವೇಳೆ ತೆಗೆಯದೆ ಇದ್ದರೆ, ಪೊಲೀಸರಿಗೆ ದೂರು ನೀಡಿ ಆ ಮೂಲಕ ತೆಗೆದುಹಾಕುವಂತೆ ನೋಡಿಕೊಳ್ಳಲಾಗುವುದು.

ಚಲನಚಿತ್ರಗಳ ಪೈರೆಸಿಯ ಪಿಡುಗು ಇಂದು ನಿನ್ನೆಯದಲ್ಲ. ಡಿಜಿಟಲ್ ಕ್ರಾಂತಿ ಜೊತೆಯಲ್ಲೇ ಇದು ಹರಡಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಚಿತ್ರಗಳು, ಅದರಲ್ಲೂ ಜನಪ್ರಿಯ ನಟರ ಚಿತ್ರಗಳು ತೆರೆಕಂಡ ಅರ್ಧಗಂಟೆಯೊಳಗಾಗಿ ಅದನ್ನು (ಪೈರೆಸಿ) ಹತ್ತಾರು ವಾಹಿನಿಗಳಲ್ಲಿ ನೋಡಬಹುದು, ಇದರಿಂದಾಗಿ ನಿರ್ಮಾಪಕರು ನಷ್ಟವನ್ನು ಅನುಭವಿಸುತ್ತಾರೆ; ಗಳಿಕೆ ಇಳಿಮುಖವಾಗುತ್ತದೆ.

ಪೈರೆಸಿಯ ಕುರಿತಂತೆ ಸಕಾರಾತ್ಮಕವಾಗಿ ಮಾತನಾಡುವವರೂ ಇದ್ದಾರೆನ್ನಿ. ಚಲನಚಿತ್ರಗಳನ್ನು ನೋಡಿದ ನಿಜವಾದ ಅನುಭವ ಆಗಲು ಅದನ್ನು ಚಿತ್ರಮಂದಿರಗಳಲ್ಲಿ ನೋಡಬೇಕು. ಚಿತ್ರದ ಗುಣಮಟ್ಟ, ತಾಂತ್ರಿಕತೆ ಚೆನ್ನಾಗಿದ್ದಾಗ, ಅಂತಹ ಚಿತ್ರಗಳನ್ನು ಮತ್ತೆ ಚಿತ್ರಮಂದಿರಗಳಲ್ಲಿ ನೋಡುವವರೂ ಇದ್ದಾರೆ ಎನ್ನುವುದು ಸಿನಿಮಾ ಪಂಡಿತರ ಲೆಕ್ಕಾಚಾರ.

ಪೈರೆಸಿ ಪಿಡುಗು ಭಾರತದ ಎಲ್ಲ ಭಾಷೆಯ ಚಿತ್ರರಂಗಗಳಿಗೂ ಹರಡಿದೆ. ಬೇರೆಬೇರೆ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಅಲ್ಲಿನ ಚಿತ್ರೋದ್ಯಮಕ್ಕೆ ನೆರವಾಗಲು ಮುಂದೆ ಬಂದವು. ಕರ್ನಾಟಕದಲ್ಲೂ ಪೈರೆಸಿ ವಿರುದ್ಧ ಗೂಂಡಾ ಕಾಯ್ದೆ ತರಲಾಯಿತು. ಆದರೆ ಅದರಿಂದ ಪೈರೆಸಿ, ನಿಯಂತ್ರಣ ಆಯಿತೇ, ಚಿತ್ರೋದ್ಯಮಕ್ಕೆ ನೆರವಾಯಿತೇ ಎನ್ನುವುದನ್ನು ಉದ್ಯಮದ ಮಂದಿ ಹೇಳಬೇಕು. ಯಾವುದೇ ಚಿತ್ರದ ಅನಽಕೃತ ಡಿವಿಡಿಗಳು ಮಾರುಕಟ್ಟೆಯಲ್ಲಿ ಲಭ್ಯ; ಗೂಂಡಾ ಕಾಯ್ದೆ ಕೇವಲ ನಾಮ್ ಕಾ ವಾಸ್ತೆ ಇದೆ ಎನ್ನುವವರಿದ್ದಾರೆ. ಸರ್ಕಾರ ಚಾಪೆಯಡಿಗೆ ನುಗ್ಗಿದರೆ, ಪೈರೆಸಿ ಮಾಡುವವರು ರಂಗೋಲಿಯ ಕೆಳಗೆ ತೂರುತ್ತಾರೆನ್ನಿ.

ಕೇಂದ್ರ ಸರ್ಕಾರ ಸಿನೆಮಾಟೊಗ್ರಫಿ ಕಾಯಿದೆ ತಂದಿರುವ ತಿದ್ದುಪಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಳು ನಕಲಿ ಮತ್ತು ನಕಲನ್ನು ತಡೆಯುವ ಕಾನೂನನ್ನು ಹೊಂದಿವೆ ಎನ್ನುವುದೇನೋ ನಿಜ. ಆದರೆ ಅದು ಎಷ್ಟರ ಮಟ್ಟಿಗೆ ಜಾರಿಗೊಳಿಸಲು ಸಾಧ್ಯ ಎನ್ನುವುದೇ ಯಕ್ಷಪ್ರಶ್ನೆ.

ಅದಕ್ಕೆ ಉದಾಹರಣೆ ಎಂದರೆ, ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ. ಅದನ್ನೂ ಈಗಲೂ ಸಾಮಾಜಿಕ ತಾಣಗಳಲ್ಲಿ ನೋಡಬಹುದಾಗಿದೆ. ನಿಯಮದ ಪ್ರಕಾರ ಸಂಬಂಧಪಟ್ಟವರಿಗೆ ಹೇಳಿ ಅದನ್ನು 36 ಗಂಟೆಗಳಲ್ಲಿ ಜಾಲತಾಣಗಳಿಂದ ತೆಗೆದು ಹಾಕಿರಬೇಕಾಗಿತ್ತು. ಆದರೆ ಅದಿನ್ನೂ ಸಾಮಾಜಿಕ ತಾಣಗಳಲ್ಲಿ ಇದೆ. ಇದು ಒಂದು ಉದಾಹರಣೆ ಮಾತ್ರ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ