Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಬಾ.ನಾ.ಸುಬ್ರಹ್ಮಣ್ಯ ವಾರದ ಅಂಕಣ: ಚಿತ್ರೋತ್ಸವದಲ್ಲಿ ‘ಶೋಲೆ’ ಐವತ್ತರ ನೆನಪು, ಬೆಂಗಳೂರಲ್ಲೂ ಪ್ರದರ್ಶನ 

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ 56ನೇ ಆವೃತ್ತಿಯ ಚಿತ್ರಗಳ ಪ್ರದರ್ಶನ ನಡೆಯುವ ಪಣಜಿಯ ಐನಾಕ್ಸ್ ಹೊರಾಂಗಣ. ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ಆಯೋಜಿಸಲಾಗಿತ್ತು. ಪಕ್ಕದಲ್ಲಿ ‘ಶೋಲೆ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಬಳಸಿದ ಮೋಟಾರ್ ಸೈಕಲನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕರ್ನಾಟಕ ಸರ್ಕಾರ ಇದರ ವ್ಯವಸ್ಥೆ ಮಾಡಿತ್ತು. ಅದಕ್ಕೆ ಕಾರಣವೂ ಇತ್ತೆನ್ನಿ. ‘ಶೋಲೆ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ರಾಜ್ಯದ ರಾಮನಗರದಲ್ಲಿ ನಡೆದಿತ್ತು. ಹಾಗಾಗಿ ಅದರ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈ ಪ್ರದರ್ಶನ. ‘ಯೇದೋಸ್ತೀಹಮ್ ನಹೀ ಛೋಡೇಂಗೇ ’ ಎಂದು ಅಮಿತಾಭ್ ಜೊತೆ ಹಾಡಿ ನಲಿದಿದ್ದ ನಟ ಧರ್ಮೇಂದ್ರ ಅವರು ಇನ್ನಿಲ್ಲ ಎನ್ನುವ ಸುದ್ದಿಯೂ ಅಲ್ಲೇ ಬಂತು.

‘ಶೋಲೆ’ ಚಿತ್ರದಲ್ಲಿ ಬಳಸಿದ ಈ ಬೈಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ಅಧ್ಯಕ್ಷರಾಗಿರುವ ಎಲ್.ಕೆ.ಅತೀಕ್ ಅವರ ಸುಪರ್ದಿಯಲ್ಲಿತ್ತು. ಇದನ್ನು ಅಲ್ಲಿ ಪ್ರದರ್ಶನಕ್ಕೆ ಇಡುವ ಮೂಲಕ, ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲು ಬನ್ನಿ ಎಂದು ಪರೋಕ್ಷ ಕರೆ ನೀಡುವ ಕೆಲಸವೂ ಆಯಿತೆನ್ನಿ. ಚಿತ್ರೋತ್ಸವದಲ್ಲಿ ಪಾಲ್ಗೊಂಡ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ಅಲ್ಲಿ ಇದನು ಪ್ರಸ್ತಾಪಿಸಿದರು. ಚಿತ್ರೋತ್ಸವಕ್ಕೆ ಬರುವ ಉದ್ಯಮದ ಮಂದಿ, ನಿರ್ದೇಶಕರು ಕರ್ನಾಟಕದಲ್ಲಿ ಬಂದು ಚಿತ್ರೀಕರಣ ಮಾಡಲಿ ಎನ್ನುವುದನ್ನು ಈ ಮೂಲಕ ಹೇಳಿದ್ದೇವೆ ಎಂದು ಅವರು ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಪ್ರಸ್ತಾಪಿಸಿದರಲ್ಲದೆ, ಬೆಂಗಳೂರಲ್ಲೂ ಈ ಪ್ರದರ್ಶನದ ಸೂಚನೆ ನೀಡಿದರು.

ಚಿತ್ರೋದ್ಯಮದ ವ್ಯವಹಾರ, ತಾಂತ್ರಿಕ ಬೆಳವಣಿಗೆಗಳ ಪ್ರದರ್ಶನ, ಚರ್ಚೆ, ತಜ್ಞರ ಉಪನ್ಯಾಸ, ಬೇರೆ ಬೇರೆ ದೇಶಗಳು, ರಾಜ್ಯಗಳು ಉದ್ಯಮಕ್ಕೆ ನೀಡುತ್ತಿರುವ ಉತ್ತೇಜನವೇ ಮೊದಲಾಗಿ ವೇವ್ಸ್ ಫಿಲಂ ಬಜಾರ್‌ನ ವಿವಿಧ ಸ್ಟಾಲ್, ಸಭಾಂಗಣಗಳಲ್ಲಿ ಸಾಕ್ಷಿಯಾಗಬಹುದಾಗಿತ್ತು. ಉತ್ತರ ಭಾರತದ ಬಹುತೇಕ ರಾಜ್ಯಗಳ ಸ್ಟಾಲ್‌ಗಳಿದ್ದವು. ಅಲ್ಲಿ ಚಲನಚಿತ್ರ ಪ್ರವಾಸೋದ್ಯಮದ ಮೂಲಕ ಚಿತ್ರ ನಿರ್ಮಾಪಕರಿಗೆ ನೀಡುವ ಸೌಲಭ್ಯ, ಉತ್ತೇಜನಗಳ ಕುರಿತ ವಿವರಗಳು ಲಭ್ಯವಿದ್ದವು. ಬೇರೆ ದೇಶಗಳವು ಕೂಡ. ‘ಶೋಲೆ’ಯ ಬೈಕ್ ಹೊರತಾಗಿ ಅಲ್ಲಿ ಕರ್ನಾಟಕದ ಸ್ಟಾಲ್ ಇರಲಿಲ್ಲ.

ಕರ್ನಾಟಕದಲ್ಲೂ ಚಲನಚಿತ್ರ ಪ್ರವಾಸೋದ್ಯಮ ನೀತಿಯ ಪ್ರಸ್ತಾಪ ಇದೆ. ಅದರ ಕುರಿತಂತೆ ವಿಸ್ತೃತ ಪ್ರಚಾರ ಇದ್ದಂತಿಲ್ಲ. ರಾಜ್ಯದ ಹೊರಗೆ, ದೇಶದ ಹೊರಗೆ ಈ ಸೌಲಭ್ಯಗಳ ಕುರಿತು ಪ್ರಚಾರ ಆದಂತಿಲ್ಲ. ೨೦೧೮ರಲ್ಲಿ ಮೊದಲಚಲನಚಿತ್ರ ಪ್ರವಾಸೋದ್ಯಮ ನೀತಿ ಜಾರಿಗೆ ಬಂದಿತ್ತು. ಕಳೆದ ವರ್ಷ ಜಾರಿಗೆ ಬಂದ ಪ್ರವಾಸೋದ್ಯಮ ನೀತಿಯಲ್ಲಿ ಚಲನಚಿತ್ರ ಪ್ರವಾಸೋದ್ಯಮದ ಕುರಿತಂತೆ ಹೇಳಿದ್ದು, ಅದರ ವಿವರ ಬರಬೇಕಿದೆ. ಚಲನಚಿತ್ರ ಪ್ರವಾಸೋದ್ಯಮ ಮಾತ್ರವಲ್ಲ, ಕರ್ನಾಟಕ ಎವಿಜಿಸಿ ನೀತಿ ಜಾರಿಗೆ ತಂದ ಮೊದಲ ರಾಜ್ಯ. ಈ ಬಾರಿ ಎವಿಜಿಸಿ ಜೊತೆಗೆ ಎಕ್ಸ್‌ಆರ್ ಸೇರಿಸಲಾಗಿದೆ. ಅನಿಮೇಶನ್, ವರ್ಚುವಲ್ ಎಫೆಕ್ಟ್ , ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೈಂಡೆಡ್ ರಿಯಾಲಿಟಿ ನೀತಿ. ಅಂತಾರಾಷ್ಟ್ರೀಯ ಮಟ್ಟದ ಅನಿಮೇಶನ್ ಚಿತ್ರಗಳು, ವೆಬ್ ಸರಣಿಗಳು, ವಿಎಫ್‌ಎಕ್ಸ್ ಮುಂತಾದವಕ್ಕೆ ಸಾಕಷ್ಟು ಉತ್ತೇಜಕ ಮೊತ್ತವನ್ನು ಕೊಡುವ ವಿವರ ನೀತಿಯಲ್ಲಿದೆ. ಆದರೆ ಅದರ ಪ್ರಚಾರ ಕೂಡ ಸಾಕಷ್ಟು ಆದಂತಿಲ್ಲ. ವೇವ್ಸ್ ಫಿಲಂಬಜಾರ್, ಇಂತಹ ಪ್ರಚಾರಕ್ಕೆ ಹೇಳಿ ಮಾಡಿಸಿದ ಜಾಗ. ಅದನ್ನು ಹೆಚ್ಚಿನ ರಾಜ್ಯಗಳು ಬಳಸಿಕೊಂಡಿದ್ದವು.

ಇದನ್ನು ಓದಿ:  ಕೊಡಗಿನಲ್ಲಿ ಮಳೆಯಿಂದ ನೆಲಕ್ಕುರುಳಿದ ಕಾಫಿ ಬೆಳೆ 

ಕಳೆದ ನಾಲ್ಕು ವರ್ಷಗಳಿಂದ ಹೊಸದೊಂದು ವಿಭಾಗ ಚಿತ್ರೋತ್ಸವಕ್ಕೆ ಸೇರ್ಪಡೆ ಆಗಿದೆ. CMOT (Creative Minds Of Tomorrow). ಇದು ಸಿನಿಮಾ ವಿದ್ಯಾರ್ಥಿಗಳಿಗೆ, ಸಿನಿಮಾಸಕ್ತ ಯುವಕರಿಗೆ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡುವ ವೇದಿಕೆ. ಚಿತ್ರದ ವಿವಿಧ ವಿಭಾಗಗಳ ಸುಮಾರು ೧೨೫ ಮಂದಿಯನ್ನು ಈ ಬಾರಿ ಆಯ್ಕೆ ಮಾಡಲಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಬಂದ ಇವರನು  ಐದು ಗುಂಪುಗಳಾಗಿ ಮಾಡಿ, ೪೮ ಗಂಟೆಗಳಲ್ಲಿ ಕಿರು ಚಿತ್ರವೊಂದನ್ನು ನಿರ್ಮಿಸುವ ಸ್ಪರ್ಧೆ. ಈ ಐದು ಚಿತ್ರಗಳಲ್ಲಿ ಅತ್ಯುತ್ತಮ ಚಿತ್ರ, ರನ್ನರ್ ಅಪ್, ಅತ್ಯುತ್ತಮ ನಿರ್ದೇಶಕ, ಛಾಯಾಗ್ರಾಹಕ, ಚಿತ್ರಕಥಾ ಕರ್ತೃ, ನಟ, ನಟಿ ಹೀಗೆ ಆಯ್ಕೆ. ಅತ್ಯುತ್ತಮ ಚಿತ್ರಕ್ಕೆ ಐದು ಲಕ್ಷ ರೂ. ನಗದು ಮತ್ತು ಅದರಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ತಲಾ ಐವತ್ತು ಸಾವಿರರೂ.ಗಳ ಶಿಷ್ಯವೇತನ. ರನ್ನರ್ ಅಪ್ ಚಿತ್ರಕ್ಕೆ ಮೂರು ಲಕ್ಷ ರೂ. ನಗದು ಮತ್ತು ಆ ತಂಡದ ಎಲ್ಲರಿಗೂ ತಲಾ ಹತ್ತು ಸಾವಿರ ರೂ.ಗಳ ಶಿಷ್ಯ ವೇತನ.

CMOT ಮೊದಲ ತಂಡದಲ್ಲಿದ್ದ ವಿದ್ಯಾರ್ಥಿ, ನಂತರ ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ವಿವರ ಅಲ್ಲಿ ಪ್ರಕಟಿಸಲಾಯಿತು. ‘ಸೂರ್ಯಕಾಂತಿ ಹೂವಿಗೆ ಮೊದಲು ತಿಳಿದದ್ದು’ ಡಿಪ್ಲೊಮೊ ಚಿತ್ರ ನಿರ್ದೇಶಿಸಿದ್ದ ಡಾ.ಚಿದಾನಂದ ನಾಯಕ್ ಅವರು CMOT ನಲ್ಲಿ ಪಾಲ್ಗೊಂಡಿದ್ದರು. ಇಂತಹದೊಂದು ಉತ್ತೇಜಕ ವಿಭಾಗದ ಕುರಿತಂತೆ ಎಲ್ಲ ಕಡೆಯಿಂದಲೂ ಮುಕ್ತ ಪ್ರಶಂಸೆ ಇತ್ತು. ಬೆಂಗಳೂರು ಕೂಡಾ ಇಂತಹ ವಿಶಿಷ್ಟ ವಿಭಾಗದ ಮೂಲಕ ಹೊಸ ಪ್ರತಿಭೆಗಳನ್ನು ಉತ್ತೇಜಿಸುವತ್ತ ಗಮನಹರಿಸಬಹುದು. ಹಿಂದೆ ಚಿತ್ರಕಥೆಯ ರಚನೆಯ ಕುರಿತಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಮ್ಮಟ ಏರ್ಪಡಿಸಲಾಗಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ದಿನ ನಿಗದಿಯಾಗಿದೆ. ಮಾನ್ಯತೆ ಪಡೆದ ಚಿತ್ರೋತ್ಸವ ನಡೆಯುವ ದಿನಾಂಕಗಳನ್ನು ಮೊದಲೇ ನಿಗದಿ ಮಾಡಬೇಕು. ಇದೀಗ ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಗುರುವಾರ ಚಿತ್ರೋತ್ಸವ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತ ಆದೇಶ ಕಳೆದವಾರ ಹೊರಬಿದ್ದಿದೆ. ಅದರ ಪ್ರಕಾರ, ಚಿತ್ರೋತ್ಸವದ ೧೭ನೇ ಆವೃತ್ತಿ ೨೦೨೬ರ ಜನವರಿ ೨೯ರಿಂದ ಫೆಬ್ರವರಿ ೫ರ ವರೆಗೆ ನಡೆಯಲಿದೆ. ಮಾತ್ರವಲ್ಲ ಇದರ ಸಂಘಟನಾ ಸಮಿತಿ ಮತ್ತು ಕೋರ್ ಕಮಿಟಿಗಳ ಆದೇಶವೂ ಆಗಿದೆ.

ಇದನ್ನು ಓದಿ: ಪಡಿತರ ವಿತರಣೆಗೆ ಸರ್ವರ್ ಕಾಟ

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಉಪ ಮುಖ್ಯಮಂತ್ರಿಗಳು, ವಾರ್ತಾ ಮತು  ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳು, ಆಯಕ್ತರು, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧುಕೋಕಿಲ, ಡಾ.ಜಯಮಾಲ, ವಾಣಿಜ್ಯ ಮಂಡಳಿ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರು, ನಿರ್ಮಾಪಕ ಜಯಣ್ಣ, ಅರುಂಧತಿನಾಗ್, ಐವನ್ ಡಿಸಿಲ್ವಾ, ತರುಣ್ ಸುಧೀರ್, ರಾಕ್‌ಲೈನ್ ವೆಂಕಟೇಶ್, ಅನು ಪ್ರಭಾಕರ್, ಶರತ್ ಲೋಹಿತಾಶ್ವ, ನೀನಾಸಂ ಸತೀಶ್, ಶರಣ್ಯ ಶೆಟ್ಟಿ, ಮಹೇಂದ್ರಸಿಂಹ, ಹಿಂದಿನ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ಹೊಸ ಕಲಾತ್ಮಕ ನಿರ್ದೇಶಕ ಮುರಳಿ ಬಿ.ಪಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಲನಚಿತ್ರ ವಿಭಾಗದ ಜಂಟಿ ನಿರ್ದೇಶಕರು ಸದಸ್ಯರಾಗಿದ್ದು, ಅಕಾಡೆಮಿಯ ರಿಜಿಸ್ಟ್ರಾರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಮೂಲಗಳ ಪ್ರಕಾರ ಸಂಘಟನಾ ಸಮಿತಿಯ ಸಭೆ ಶುಕ್ರವಾರ ನಡೆಯಲಿದ್ದು, ಚಿತ್ರೋತ್ಸವ ನಡೆಯುವ ದಿನಾಂಕ ಮತ್ತಿತರ ವಿವರಗಳ ಅಧಿಕೃತ ಪ್ರಕಟಣೆ ನಾಳೆ ಆಗಲಿದೆ. ೧೯೭೫ರಲ್ಲಿ ತೆರೆಕಂಡ ‘ಶೋಲೆ’ಯ ಹಾಗೆಯೇ ಕನ್ನಡದಲ್ಲೂ ಮಹತ್ವದ ಚಿತ್ರಗಳು ತೆರೆ ಕಂಡ ವರ್ಷವದು. ‘ಸಂಸ್ಕಾರ’ದ ನಂತರ ಸ್ವರ್ಣ ಕಮಲ ಪಡೆದ ಎರಡನೇ ಕನ್ನಡ ಚಿತ್ರ ‘ಚೋಮನದುಡಿ’ ಆ ವರ್ಷ ತೆರೆ ಕಂಡಿತ್ತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ ಅದೇ ಹೆಸರಿನ ಕೃತಿಯನ್ನು ಆಧರಿಸಿ, ಬಿ.ವಿ.ಕಾರಂತರು ಆ ಚಿತ್ರವನ್ನು ನಿರ್ದೇಶಿಸಿದ್ದರು. ರಾಷ್ಟ್ರ ಮಟ್ಟದಲ್ಲಿ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಚೋಮನಾಗಿ ನಟಿಸಿದ ವಾಸುದೇವರಾವ್ ಪಡೆದರೆ, ಶಿವರಾಮ ಕಾರಂತರಿಗೆ ಅತ್ಯುತ್ತಮ ಕಥೆಗಾಗಿ ಪ್ರಶಸ್ತಿ ಸಂದಿತ್ತು. ಅದೇ ವರ್ಷ ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ ಕೂಡ ತೆರೆ ಕಂಡಿತ್ತು. ತರಾಸು ಅವರ ಕಾದಂಬರಿ ಆಧರಿಸಿದ ಆ ಚಿತ್ರಕ್ಕೂ ರಾಷ್ಟ್ರ ಮನ್ನಣೆ ಸಂದಿತ್ತು. ಅನಂತನಾಗ್ ಮುಖ್ಯ ಭೂಮಿಕೆ. ವಿಶೇಷ ಎಂದರೆ ಈ ಎರಡು ಚಿತ್ರಗಳೂತೆರೆಕಂಡು ಜನಮನ್ನಣೆ ಪಡೆದಿದ್ದವು. ಈಗಿನಂತೆ ವ್ಯವಹಾರ ರೀತಿ ಆಗಿರಲಿಲ್ಲ. ಹಂಚಿಕಾ ವ್ಯವಸ್ಥೆ ಎಲ್ಲ ರೀತಿಯ ಚಿತ್ರಗಳನ್ನೂ ಉತ್ತೇಜಿಸುವ ರೀತಿಯಲ್ಲಿತ್ತು. ರಾಜಕುಮಾರ್ ಅಭಿನಯದ ‘ಮಯೂರ’, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಮೊದಲ ಚಿತ್ರ ‘ತ್ರಿಮೂರ್ತಿ’ ಕೂಡಾ ಅದೇ ವರ್ಷ ತೆರೆಕಂಡ ಚಿತ್ರಗಳ ಸಾಲಲ್ಲಿವೆ. ಡಿಸೆಂಬರ್ ತಿಂಗಳಲ್ಲಿ ಜನಪ್ರಿಯ ನಾಯಕ ನಟರ ಚಿತ್ರಗಳ ಬಿಡುಗಡೆಯ ಭರಾಟೆ. ಅವು ನಿರೀಕ್ಷೆಯ ಚಿತ್ರಗಳು. ಆ ಕಾರಣದಿಂದಲೇ ಉಳಿದ ಚಿತ್ರಗಳು ತೆರೆಗೆ ಬರಲು ಸರದಿಯಲ್ಲಿ ಕಾದಿವೆ. ವಾರದಲ್ಲಿ ಏಳು, ಎಂಟು, ಒಂಬತ್ತು ಚಿತ್ರಗಳು ತೆರೆಗೆ! ಇದು ಚಿತ್ರೋದ್ಯಮವನ್ನು ಎತ್ತ ಒಯ್ಯಲಿದೆ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.

” ಚಿತ್ರೋದ್ಯಮದ ವ್ಯವಹಾರ, ತಾಂತ್ರಿಕ ಬೆಳವಣಿಗೆಗಳ ಪ್ರದರ್ಶನ, ಚರ್ಚೆ, ತಜ್ಞರ ಉಪನ್ಯಾಸ, ಬೇರೆ ಬೇರೆ ದೇಶಗಳು, ರಾಜ್ಯಗಳು ಉದ್ಯಮಕ್ಕೆ ನೀಡುತ್ತಿರುವಉತ್ತೇಜನವೇ ಮೊದಲಾಗಿ ವೇವ್ಸ್ ಫಿಲಂ ಬಜಾರ್‌ನ  ವಿವಿಧ ಸ್ಟಾಲ್, ಸಭಾಂಗಣಗಳಲ್ಲಿ ಸಾಕ್ಷಿಯಾಗಬಹುದಾಗಿತ್ತು.”

Tags:
error: Content is protected !!