Mysore
24
scattered clouds

Social Media

ಮಂಗಳವಾರ, 18 ಮಾರ್ಚ್ 2025
Light
Dark

ರಂಗಾಯಣ ರಾಜಕಾರಣಕ್ಕೆ ಬಳಕೆಯಾಗಬಾರದು: ಜನ್ನಿ

ನಾಟಕ ಪ್ರದರ್ಶನಗಳ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ‘ರಾಜಕೀಯ ಪ್ರಹಸನ’ಗಳಿಂದಲೇ ಸುದ್ದಿಯಾಗುತ್ತಿರುವ ಮೈಸೂರಿನ ರಂಗಾಯಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ರಚಿಸಿರುವ ‘ಸಾಂಬಶಿವ ಪ್ರಹಸನ’ ನಾಟಕ ಪ್ರದರ್ಶನಕ್ಕೆ ಕೃತಿಕಾರರಿಂದ ಅನುಮತಿಯನ್ನೇ ಪಡೆಯದೆ ಅಸಹ್ಯಕರವಾಗಿ ತಿರುಚಿ, ವ್ಯಕ್ತಿಗತ ನಿಂದನೆಯನ್ನು ಸೇರಿಸಿ ಪ್ರದರ್ಶಿಸಿರುವ ಬಗ್ಗೆ ಸ್ವತಃ ಕಂಬಾರರು ವಿಷಾದ ವ್ಯಕ್ತಪಡಿಸಿರುವುದಲ್ಲದೆ, ಅನುಮತಿ ಪಡೆಯದೆ ತಮ್ಮ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿರುವುದರಿಂದ ರಂಗಾಯಣ ಮತ್ತೊಮ್ಮೆ ಸುದ್ದಿಯಲ್ಲಿದೆ.

ಈ ವಿಷಯದಲ್ಲಿ ರಂಗಾಯಣದ ತಪ್ಪು-ಒಪ್ಪುಗಳ ಬಗ್ಗೆ ರಂಗಾಯಣದ ಮಾಜಿ ನಿರ್ದೇಶಕರಾದ ಹಿರಿಯ ರಂಗಕರ್ಮಿ ಎಚ್.ಜನಾರ್ದನ (ಜನ್ನಿ) ಅವರು ಆಂದೋಲನ ಪ್ರತಿನಿಧಿ ಗಿರೀಶ್‌ ಹುಣಸೂರು ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

  • ಮೈಸೂರಿನ ರಂಗಾಯಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ತಿರುಚಿ ಪ್ರದರ್ಶನ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?

-ನಾಟಕದ ಕೇಂದ್ರ ವಸ್ತುವಿಗೆ ತಾಯಿಯ ಸ್ಥಾನವಿದೆ. ಅದಕ್ಕೆ ಧಕ್ಕೆ ತರಬಾರದು. ಚಂದ್ರಶೇಖರ ಕಂಬಾರರು ಸಾಂಬಶಿವ ಪ್ರಹಸನ ನಾಟಕ ಬರೆದು 25 ವರ್ಷಗಳಾಗಿದೆ. ಹೀಗಾಗಿ ಪ್ರಸ್ತತ ಸಂದರ್ಭಕ್ಕೆ ಅಳವಡಿಸುವಾಗ ವಿಸ್ತಾರವಾಗಬೇಕಾಗುತ್ತದೆ. ಆದರೆ, ಕುಬ್ಜಗೊಳಿಸಬಾರದು. ಸೃಜನಾತ್ಮಕ ಆಲೋಚನೆಯಿಂದ ಹೊಸ ಪರಿಕಲ್ಪನೆ ಬೆಳೆಸಬೇಕು. ಕೀಳುಮಟ್ಟದ ರಾಜಕೀಯಕ್ಕೆ ನಾಟಕವನ್ನು ಬಳಸಿಕೊಂಡು ದ್ವೇಷ ಬಿತ್ತುವ ಕೆಲಸ ಆಗಬಾರದು.

  • ಯಾವುದೇ ನಾಟಕ ಕೃತಿಗೆ ರಂಗರೂಪ ನೀಡುವಾಗ ಬದಲಿಸುವ ಸ್ವಾತಂತ್ರ್ಯ ನಿರ್ದೇಶಕರಿಗೆ ಇದೆಯೇ ?

-ಯಾವುದೇ ಕೃತಿಯನ್ನು ರಂಗರೂಪಕ್ಕೆ ಇಳಿಸಬೇಕಾದರೆ ಕೃತಿಕಾರರ ಅನುಮತಿ ಪಡೆಯಬೇಕಾದದ್ದು ರಂಗಭೂಮಿಯ ಎಥಿಕ್ಸ್. ಕಂಬಾರರಂತಹ ಹಿರಿಯ ಸಾಹಿತಿ ಆಧುನಿಕ ರಂಗಭೂಮಿಗೆ ಅಡಿಪಾಯ ಹಾಕಿದವರು. ಅವರಂತವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆಂದರೆ ರಂಗಾಯಣದ ಎಲ್ಲರೂ ಜವಾಬ್ದಾರರಾಗಬೇಕಾಗುತ್ತದೆ. ಇದು ಸಮಾಜದಲ್ಲಿ ರಂಗಾಯಣಕ್ಕೆ ಆದ ವಿದ್ರೋಹ. ಇದರಿಂದ ಸಮಾಜದ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಬೇಕು.

  • ನಾಟಕಗಳ ಮೂಲ ಉದ್ದೇಶವನ್ನು ಮರೆಮಾಚಿ, ಹಿಡನ್ ಅಜೆಂಡಾಕ್ಕೆ ಪೂರಕವಾಗಿ ಬದಲಾಯಿಸಿರುವಂತಹ ಘಟನೆಗಳು ಹಿಂದೆ ನಡೆದಿವೆಯೇ?

– ನಾಟಕದಲ್ಲಿ ಎಲ್ಲಿಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ರಂಗಾಯಣ ನಿರ್ದೇಶಕರು ಹೇಳುತ್ತಾರೆ. ಆದರೆ, ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯವನ್ನು ಉಲ್ಲೇಖಿಸುವುದು, ಕೇಡಿ ಎನ್ನುವುದೆಲ್ಲ ಏನು? ಇನ್ನೊಬ್ಬನನ್ನು ದಡ್ಡ ಎಂದು ತಿಳಿದುಕೊಳ್ಳುವವನು ಮಹಾನ್ ದಡ್ಡ. ರಂಗಾಯಣ ಈ ರೀತಿಯ ರಾಜಕಾರಣಕ್ಕೆ ಬಳಕೆಯಾಗಬಾರದು.

  •   ರಂಗಾಯಣ ನಿರ್ದೇಶಕರು ರಾಜಕೀಯ ಹೇಳಿಕೆಗಳನ್ನು ನೀಡಬಹುದೇ?

-ಬಿ.ವಿ.ಕಾರಂತರಿಂದ ಹಿಡಿದು ನನ್ನವರೆಗೆ ರಂಗಾಯಣದ ಯಾವೊಬ್ಬ ನಿರ್ದೇಶಕರೂ ರಾಜಕೀಯ ಪಕ್ಷದ ಮೌತ್‌ಪೀಸ್ ಆಗಿಲ್ಲ. ರಂಗಾಯಣಕ್ಕೆ ಸರ್ಕಾರ ಅನುದಾನ ಕೊಟ್ಟರೂ ಅದೊಂದು ಸ್ವಾಯತ್ತ ಸಂಸ್ಥೆ. ಅಲ್ಲಿನ ನಿರ್ದೇಶಕರಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು ವಿಕಾರವಾಗಿ ನಡೆದುಕೊಂಡರೆ, ಆಕಾರಕ್ಕೆ ಏನಾಗಬೇಕು? ರಂಗ ಸಮಾಜ ಏನು ಮಾಡುತ್ತಿದೆ? ಸರ್ಕಾರವೇಕೆ ಸುಮ್ಮನೆ ಕುಳಿತಿದೆ?

  • ರಂಗಾಯಣದ ಈಗಿನ ನಿರ್ದೇಶಕರು ಸರ್ಕಾರ ತಮ್ಮನ್ನು ಮುಂದುವರಿಸಿದೆ ಎನ್ನುತ್ತಾರಲ್ಲ?

– ಸರ್ಕಾರದ ಆದೇಶದಲ್ಲಿ ಸ್ಪಷ್ಟತೆ ಇಲ್ಲ ಎಂದು ರಂಗಾಯಣದ ನಿರ್ದೇಶಕರು ಅವಧಿ ಮುಗಿದ ನಂತರವೂ ಅಲ್ಲಿ ಮುಂದುವರಿಯುವುದು ಅಧಿಕಾರದಾಹಿ ನಡೆ. ಸಾಂಸ್ಕೃತಿಕ ಬೆಂಬಲದಿಂದ ಕೂರಬೇಕಾದ ಜವಾಬ್ದಾರಿಯುತ ಸ್ಥಾನವದು. ಕಲಾವಿದನಿಗೆ ಮಾನ, ಮರ್ಯಾದೆ, ಘನತೆ, ಗೌರವವೇ ಕಿರೀಟ. ಅದನ್ನು ಬಿಟ್ಟು ವಿರೋಧದ ನಡುವೆಯೂ ಅಲ್ಲೇ ಮುಂದುವರಿಯುವುದು ದಾರ್ಷ್ಟ್ಯ. ನಿರ್ದೇಶಕರಾದವರು ಆಡಂಬರ, ಅಹಂಕಾರ ಬಿಟ್ಟು, ಮೌನ-ಸ್ವೀಕಾರ ಗುಣ ಹೊಂದಬೇಕು.

  • ಮೈಸೂರು ರಂಗಾಯಣದಲ್ಲಿ ತಾವು ನಿರ್ದೇಶಕರಾಗಿದ್ದ ಅವಧಿಯ ಸ್ಥಿತಿ, ಈಗಿನ ಪರಿಸ್ಥಿತಿ ಬಗ್ಗೆ ಏನು ಹೇಳುತ್ತೀರಿ?

-ರಂಗ ಸಿದ್ಧಾಂತ ಎಂಬುದಿದೆ. ಪ್ರಸನ್ನ, ಬಸವಲಿಂಗಯ್ಯ ಸೇರಿದಂತೆ ನಾವೆಲ್ಲ ರಾಷ್ಟ್ರೀಯ ರಂಗಶಾಲೆಯಲ್ಲಿ ಕಲಿತು ಬಂದವರು. ಅಧ್ಯಯನ, ಪ್ರಯೋಗಶೀಲರು, ಪ್ರಬುದ್ಧತೆ ಇದ್ದಂತಹ ನಿರ್ದೇಶಕರು. ನಾಡಿನ ಉದ್ದಗಲಕ್ಕೂ ನಾಟಕಗಳ ಮೂಲಕ ಜನಪರ ಚಳವಳಿಯನ್ನು ಕಟ್ಟಿದವರು. ಆದರೆ, ಈಗಿನ ನಿರ್ದೇಶಕರ ಹಿನ್ನೆಲೆ ಏನಿದೆ? ಹತ್ತು ನಾಟಕ ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಸರ್ಕಾರದ ದುಡ್ಡಿನಲ್ಲಿ ಸುಳ್ಳುಗಳನ್ನು ಹೇಳುವ ರಾಜಕೀಯ ಪ್ರೇರಿತವಾಗಿ ಹೊರಟಿರುವುದು ಸರಿಯಲ್ಲ.

  • ಮೈಸೂರು ರಂಗಾಯಣದಲ್ಲಿ ಇತ್ತೀಚೆಗೆ ನಡೆದ ಬಹುರೂಪಿ ಸೇರಿದಂತೆ ಹಲವು ಬಗೆಯಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಏಕ ಧರ್ಮವನ್ನು ಹೇರುತ್ತಿರುವ ಆರೋಪಗಳಿವೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

-ರಂಗಾಯಣಕ್ಕೆ 32 ವರ್ಷಗಳ ಚರಿತ್ರೆ ಇದೆ. ಕನ್ನಡ ರಂಗಭೂಮಿಯನ್ನು ಕ್ರಿಯಾತ್ಮಕವಾಗಿ ಕಟ್ಟಲು, ಬಹುಮುಖಿ ಸಂಸ್ಕೃತಿಗಾಗಿ ರಂಗಾಯಣ ಕಟ್ಟಿದ್ದು, ಏಕ ಸಂಸ್ಕೃತಿ ಹೇರಲು ಅಲ್ಲ. ಕಾರಂತರಿಂದ ನನ್ನವರೆಗೆ ಸಮಿತಿಯ ನಿರ್ಧಾರವೇ ರಂಗಾಯಣದ ನಿರ್ಧಾರವಾಗಿರುತ್ತಿತ್ತು. ನಿರ್ದೇಶಕ ಅಲ್ಲಿ ಚಾಲನಾ ಶಕ್ತಿ ಮಾತ್ರ. ಈಗಿನ ನಿರ್ದೇಶಕರು ಎಲ್ಲರನ್ನೂ ಏಕವಚನದಲ್ಲಿ ದೂಷಣೆ ಮಾಡುತ್ತಾ ರಂಗಾಯಣವನ್ನು ಮಲಿನ ಗೊಳಿಸುತ್ತಿದ್ದಾರೆ.

  • ಜನರ ತೆರಿಗೆ ಹಣದಲ್ಲಿ ಅನುದಾನ ನೀಡುವ ಸರ್ಕಾರಕ್ಕೆ ರಂಗಾಯಣದ ಮೇಲೆ ನಿಯಂತ್ರಣ ಇರಬೇಕಲ್ಲವೆ?

-ರಂಗ ಸಮಾಜ ಪಾಲಿಸಿ ಮೇಕಿಂಗ್ ಬಾಡಿ. ಆದರೆ, ಈಗ ರಂಗಸಮಾಜ ಎಲ್ಲಿದೆ ಅಂತಾನೇ ಗೊತ್ತಾಗುತ್ತಿಲ್ಲ. ರಂಗಾಯಣದಲ್ಲಿ ಇಷ್ಟೆಲ್ಲ ಗೊಂದಲಗಳಾಗುತ್ತಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಒಂದು ದಿನವೂ ವಿಶ್ಲೇಷಣೆ ಮಾಡದಿರುವುದು ಜನರಿಗೆ ತೋರಿಸುವ ಅಗೌರವ. ಇಲ್ಲಿನ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ಮಾಡಬೇಕಿತ್ತು. ರಂಗ ಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಚರ್ಚೆಯಾಗಿ, ಅಂತಿಮವಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ