Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಜಾಲತಾಣಗಳ ಗುಲಾಮರಾಗುತ್ತಿರುವ ಯುವ ಪೀಳಿಗೆ

ರಶ್ಮಿ ಕೆ.ವಿಶ್ವನಾಥ್, ಮೈಸೂರು

ನೈತಿಕ ಮೌಲ್ಯಗಳ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ದಟ್ಟವಾಗುತ್ತಿದೆ. ಹೌದು, ಹಿಂದಿನ ದಿನಗಳ ಮತ್ತು ಇವೊತ್ತಿನ ವರ್ತನೆಯನ್ನು ತುಲನೆ ಮಾಡಿದರೆ ಆ ವ್ಯತ್ಯಾಸಗಳು ವೇದ್ಯವಾಗುತ್ತವೆ.

ಹೆಣ್ಣುಮಕ್ಕಳು ೧೧ -೧೨ ವರ್ಷಗಳಿಗೇ ಋತುಮತಿಯಾಗುವುದು, ಡೆಲಿವರಿ ದಿನಾಂಕಕ್ಕೆ ೧೫- ೨೦ ದಿನಗಳ ಮುಂಚೆಯೇ ಮಗು ಆಗುವುದು, ಮೆನೋಪಾಸ್‌ಗೆ ೧೦-೧೨ ವರ್ಷಗಳ ಮುಂಚೆಯೇ ಋತುಸ್ರಾವ(ಮುಟ್ಟು) ನಿಲ್ಲುವುದು, ಇನ್ನು ಹುಡುಗರ ವಿಷಯಕ್ಕೆ ಬಂದರೆ, ಡಿಗ್ರಿಗೆ ಬರಬೇಕಾಗಿದ್ದ ಗಡ್ಡ- ಮೀಸೆ, ಹೈಸ್ಕೂಲು ಪಿಯುಸಿ ವೇಳೆಗೆ ಬಂದುಬಿಡುವುದು, ೪-೫ ವರ್ಷಕ್ಕೇನೇ ಬಿಪಿ, ಶುಗರ್, ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳುವುದು ಇವೆಲ್ಲವೂ ಇವಾಗಿನ ಆಹಾರ ಮತ್ತು ಜೀವನ ಕ್ರಮದಿಂದಾದ ಬದಲಾವಣೆಗಳು ಎಂದಿಟ್ಟುಕೊಳ್ಳೋಣ.

ಆದರೆ ಮಕ್ಕಳೆಂದರೆ ಮುಗ್ಧರು. ಅವರು ದೇವರಿಗೆ ಸಮಾನ. ಅವರು ಸತ್ಯವನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ, ಹೇಳುವುದಕ್ಕೆ ತಿಳಿಯುವುದೂ ಇಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕೆಲವು ಮಕ್ಕಳ ಉದ್ಧಟತನದ ಮಾತುಗಳನ್ನೂ ವರ್ತನೆಗಳನ್ನೂ ನೋಡಿದಾಗ ಆಶ್ಚರ್ಯವಾಗುತ್ತದೆ. ಅರೇ ಹೀಗೂ ಹೇಳಬಹುದೇ? ದೊಡ್ಡವರಾದ ನಾವೇ ಇಷ್ಟು ಹದ್ದುಮೀರಿ ಮಾತನಾಡುವುದಿಲ್ಲವಲ್ಲ ಎನಿಸುತ್ತದೆ. ಅದ್ಯಾರಿಂದ ಇವರು ಹೀಗೆ ಮಾತನಾಡುವುದನ್ನು ಕಲಿತರು, ಅದ್ಯಾರಿಂದ ಇವರು ಡ್ರಗ್ಸ್ ತೆಗೆದುಕೊಳ್ಳುವುದು ಕಲಿತರು, ಅದ್ಯಾರಿಂದ ಇವರು ಗರ್ಲ್ ಫ್ರೆಂಡ್ಸ್/ ಬಾಯ್ ಫ್ರೆಂಡ್ಸ್ ಜೊತೆಯಾಗುವುದನ್ನು ಕಲಿತರು ಇವೇ ಮುಂತಾದ ಪ್ರಶ್ನೆಗಳು ನಮ್ಮನ್ನು ಕಾಡಹತ್ತಿದಾಗ, ಒಂದೊಂದೇ ತರಂಗಗಳು ತೆರೆದುಕೊಳ್ಳತೊಡಗುತ್ತವೆ.

ಈ ಹಿಂದಿನ ತಲೆಮಾರಿನಲ್ಲಿ ಸಿಟಿಯಲ್ಲಿ ಅಲ್ಲೊಂದು ಇಲ್ಲೊಂದು ಟಿವಿಗಳಾದರೂ ಇದ್ದವೇನೋ, ಆದರೆ ಹಳ್ಳಿಗಳಲ್ಲಿ, ಇಡೀ ಹಳ್ಳಿಗೆ ೧-೨ ಟಿವಿಗಳಿದ್ದರೆ ಅದೇ ದೊಡ್ಡ ವಿಷಯ. ಇನ್ನು ಫೋನು ಕನಸೇ ಬಿಡಿ. ಅದು ಆಮೇಲೆ ಬಂದದ್ದು ಕೀಪ್ಯಾಡು ಫೋನ್, ಅದನ್ನು ಆಪರೇಟ್ ಮಾಡಲೂ ಸರಿಯಾಗಿ ಬರುತ್ತಿದ್ದದ್ದಿಲ್ಲ. ಇನ್ನು ಹೇಗೆ ತಾನೆ ಮಕ್ಕಳು ಕೆಟ್ಟಾರು?!

ಈಗಿನ ದಿನಗಳಲ್ಲಿ ಟಿವಿಯಲ್ಲೇ ರಾಜಾರೋಷವಾಗಿ ಧೂಮಪಾನ, ಮದ್ಯಪಾನ ಮಾಡೋದು, ಧೈರ್ಯವಾಗಿ – ಸ್ಟೈಲ್ ಆಗಿ ಸಿಗರೇಟ್ ಸೇದೋದನ್ನು (ಸ್ಮೋಕ್) ತೋರಿಸ್ತಾರೆ, ಹುಡುಗ – ಹುಡುಗಿ ಮುದ್ದಾಡೋದರಿಂದ (ರೊಮ್ಯಾನ್ಸ್) ಹಿಡಿದು, ಆಸಿಡ್ ಹಾಕೋದರವರೆಗೆ, ಹೊಲಸು ಪದಗಳನ್ನು ಬಳಸಿ ಮಾತನಾಡೋದು, ಡ್ರಗ್ಸ್ ಬೆಳೆಯೋದು, ತರಿಸಿಕೊಳ್ಳೋದು, ಬಳಸೋದು ಎಲ್ಲವನ್ನೂ ತೋರಿಸ್ತಾರೆ.

ದೂರದರ್ಶನ ಎಂಬುದು ಈವಾಗಿನ ದಿನಗಳಲ್ಲಿ ತೀರಾ ಬೇಸಿಕ್. ಅದಕ್ಕೂ ಮೀರಿದ ದೊಡ್ಡಪ್ಪಗಳು ತುಂಬಾ ಇವೆ. ಆಂಡ್ರಾಯ್ಡ್ ಟಚ್ ಸ್ಕ್ರೀನ್ ಮೊಬೈಲ್ಗಳನ್ನು ಟಚ್ ಮಾಡಿದರೆ ಸಾಕು, ಬೇಕಾದ್ದೆಲ್ಲ ಬೆರಳ ತುದಿಯಲ್ಲೇ ಲಭಿಸಲಿದೆ.

ಸಿಕ್ಕ ಸಿಕ್ಕ ಹುಡುಗ ಹುಡುಗಿಯರ ಜೊತೆ, ಮಾತು ಕತೆ, ಲಲ್ಲಾಟ ಚೆಲ್ಲಾಟ ಎಲ್ಲವೂ… ವಾಟ್ಸಾಪ್‌ನಲ್ಲಿ, ಇತರರಿಗೆ ಸಾಕ್ಷಿ ಉಳಿಯಬಾರದೆಂದರೆ, ಇನ್‌ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ಟೆಲಿಗ್ರಾಂ, ಫೇಸ್ಬುಕ್… ಹೀಗೆ ಇನ್ನು ಏನೇನು ಇವೆಯೋ ಬಲ್ಲವರಾರು. ಆ ತರಹದ ವಿಷಯಗಳಲ್ಲಿ ಅವರು ಪಿಎಚ್.ಡಿ.ಯನ್ನೇ ಮಾಡಿಬಿಟ್ಟಿರುತ್ತಾರೆ.

ಪೋಷಕರನ್ನು ಕಾಡಿ ಬೇಡಿ ತೆಗೆಸಿಕೊಂಡ ಮೊಬೈಲ್, ಸ್ಕೂಟರ್, ಬೈಕ್ ಇವು ಇದ್ದ ಮೇಲೆ ಬೇರೇನು ಬೇಕು? ‘ಅಂಗೈಲೆ ಪ್ರಪಂಚ’ ಒಬ್ಬರಿಗೆ ಉಪಾಯ ಹೇಳಿಕೊಡಲು ಒಂದು ಫ್ರೆಂಡ್, ಮತ್ತೊಬ್ಬರಿಗೆ ಐಡಿಯಾ ಹೇಳಿಕೊಡಲು ಮತ್ತೊಂದು  ಫ್ರೆಂಡ್. ಆಯ್ತಲ್ಲ ಅಲ್ಲಿಗೆ ‘ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ’.

ಇರುವುದೊಂದೋ ಎರಡೋ ಮಕ್ಕಳು. ಗಂಡ ಹೆಂಡತಿ ಇಬ್ಬರೂ ದುಡಿಯುವುದು ಮಕ್ಕಳ ಐಷಾರಾಮಿ ಜೀವನಕ್ಕೆ. ಕಷ್ಟದ ಸಂಕಷ್ಟ ಗೊತ್ತಿಲ್ಲ, ನಿಜವಾದ ಸುಖದ ಅರ್ಥವೂ ತಿಳಿದಿಲ್ಲ. ಕ್ಷಣಿಕ ಆಕರ್ಷಣೆಯ ಗುಂಗಿಗೆ ಗುಲಾಮರಾದ ಮಕ್ಕಳಿಗೆ ಬೇರೆ ಪ್ರಪಂಚ ಎಲ್ಲಿ ಕಾಣಿಸೀತು. ಮತ್ತೊಂದು ಮುಖ್ಯ ವಿಷಯವೆಂದರೆ, ಇವಾಗ ಹಣದ ಬವಣೆಯೂ ಇಲ್ಲ. ಈಗೆಂದರೆ ಈಗ ದುಡಿದು ನಾಲ್ಕು ಕಾಸು ಸಂಪಾದನೆ ಮಾಡಿ ಸದ್ಯದ ಬವಣೆ ತೀರುವಷ್ಟು ಹಣ ಸಂಪಾದಿಸುವ ನೂರಾರು ದಾರಿಗಳಿವೆ. ಕಂಪ್ಯೂಟರ್ ಅಥವಾ ಫೋನಿನ ಮೇಲೆ ಜಸ್ಟ್ ಟಚ್ ಮಾಡಿದರೆ ಸಾಕು, ತಮಗೆ ಬೇಕಾದ ಎಲ್ಲಾ ಮಾಹಿತಿ, ದಾರಿಗಳು ಸಿಗಬೇಕಾದರೆ, ಅವನ್ನೆಲ್ಲ ದಕ್ಕಿಸಿಕೊಳ್ಳಬಲ್ಲ ಅವರು ಇನ್ನಾವ ಶಿಕ್ಷಕರಿಗೆ, ಪೋಷಕರಿಗೆ ಅಥವಾ ಸಮಾಜಕ್ಕೆ ಹೆದರಿಯಾರು? ಕೆಟ್ಟುಹೋದ ಒಂದೇ ಒಂದು ಟೊಮ್ಯಾಟೋ ಜೊತೆ ಇದ್ದ ಉಳಿದ ಟೊಮ್ಯಾಟೋಗಳೂ ಕೆಡುತ್ತಾ ಹೋಗುವಂತೆ, ಸ್ನೇಹಿತರನ್ನೂ ಕೆಡಿಸುತ್ತಾ ಹೋಗುತ್ತಾರೆ.

ನೈತಿಕ ಮೌಲ್ಯವೇ? ಹಾಗೆಂದರೇನು ಎಂದು ಕೇಳುವಂತೆ ಈ ಸಾಮಾಜಿಕ ಜಾಲತಾಣಗಳು ಯುವ ಪೀಳಿಗೆಯನ್ನು ಕೆಡಿಸಿ, ತಮ್ಮ ಗುಲಾಮರನ್ನಾಗಿ ಮಾಡಿಕೊಂಡು ಬಿಟ್ಟಿವೆ ಎಂಬುದೇ ಶೋಚನೀಯ ಸಂಗತಿ.

Tags:
error: Content is protected !!