ಗುರುವೊಬ್ಬ ಇರಬೇಕು;
ಭರವಸೆಗಳ ಬಿತ್ತಲು
ಗುರುವೊಬ್ಬ ಇರಬೇಕು;
ಆಲೋಚನೆಗಳ ಹದಗೊಳಿಸಲು
ಗುರುವೊಬ್ಬ ಇರಬೇಕು;
ಬದುಕ ಬದಲಿಸಲು:
ಯಾವ ಘಟ್ಟದಲ್ಲಾದರೂ
ಯಾವ ರೂಪದಲ್ಲಾದರೂ
ಬಂದು ಕದಲಿಸಬೇಕು
ಮನದ ನಿಂತ ನೀರು
ಹರಿವಿಗೊಡ್ಡಬೇಕು
ಮತ್ತೆ ಬದುಕ ತೇರು!
ಮೊದಲಿಗಿಂತ ಇಂದು ಗುರುವಿನ ಅರ್ಥ ಬಹಳ ವಿಶಾಲವಾಗಿದೆ, ಪಾತ್ರ ಹಿರಿದಾಗಿದೆ. ಯಾವುದೇ ಕ್ಷೇತ್ರದಲ್ಲಿ ಸ್ಛರ್ಧೆಯನ್ನು ಎದುರಿಸಿ ಗೆಲ್ಲಲು ಮಾರ್ಗದರ್ಶಕರ ಅನಿವಾರ್ಯತೆ ಉಂಟಾಗಿದೆ. ಹಾಗಾಗಿ, ವರ್ಣ(ಅಕ್ಷರ) ಕಲಿಸಿದವರು ಮಾತ್ರ ಗುರುವಲ್ಲ, ಬದುಕಿನ ಬಣ್ಣ (ವರ್ಣ)ಗಳತ್ತ ಕಣ್ತೆರೆಸಿದ ಎಲ್ಲರೂ ಗುರುವೇ. ಅಂದರೆ, ಶಾಲೆ, ಕಾಲೇಜಿನಲ್ಲಿ ಕಲಿಸಿದವರು ಮಾತ್ರವಲ್ಲ, ನಮ್ಮ ಜೀವನದ ಕೊನೆಯವರೆಗೂ ಇಂತಹ ಗುರುಗಳು ಅಗತ್ಯವಿರುತ್ತಾರೆ.
ಹಸುಗೂಸಿನ ತಾಯಿಯಿಂದ ಮುದುಕನ ಮೊಮ್ಮಗುವಿನವರೆಗೆ, ನೆರೆಮನೆಯ ಅಣ್ಣ ಅಕ್ಕ, ಮೆಚ್ಚಿನ ಸ್ನೇಹಿತರು, ಹಿತ ಬಯಸುವ ಬಂಧುಗಳು, ನಿಸ್ವಾರ್ಥ ಸಮಾಜ ಸೇವಕರು, ನಿರ್ಲಿಪ್ತ ಸಾಧಕರು, ಗಣ್ಯ ಮನಸ್ಸಿನ ಯಾವುದೇ ವ್ಯಕ್ತಿಗಳು ನಮ್ಮ ಜೀವನದ ಯಾವುದೇ ಘಟ್ಟದಲ್ಲಿ ನಮ್ಮನ್ನು ಪ್ರಭಾವಿಸಬಹುದು, ಗುರುವೆಂದು ನಾವು ಅವರನ್ನು ಸ್ವೀಕರಿಸಬಹುದು. ಅವರ ಹಾದಿಯನ್ನು ಅನುಸರಿಸಬಹುದು. ಆದರೆ, ಅದಕ್ಕೆ ಮನಸ್ಸು ಸಿದ್ಧವಾಗಿರಬೇಕಷ್ಟೇ.
ವಿಶೇಷವಾಗಿ ಬಾಲ್ಯದಿಂದಲೇ ನಮ್ಮೊಳಗಿನ ಪ್ರತಿಭೆಯನ್ನು, ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಕೆಲವೇ ಮಂದಿ ನಮ್ಮ ಜೊತೆಗಿರುತ್ತಾರೆ. ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಾಮರ್ಥ್ಯವನ್ನು ಅನುಮಾನಿಸುವವರು, ಅವಮಾನಿಸುವವರೂ ಇರುತ್ತಾರೆ. ಅವರಲ್ಲಿ ಯಾರನ್ನು ನಾವು ‘ಅವರೇ ಸರಿ’ ಎಂದು ಆರಿಸಿಕೊಳ್ಳತ್ತೇವೆಯೋ ನಮ್ಮ ಜೀವನ ಆ ಹಾದಿ ಹಿಡಿಯುತ್ತದೆ. ಹಾಗೆ ಬೆಳೆಸುವವರು ಶಾಲೆಯ ಗುರುವೂ ಆಗಿರಬಹುದು, ಮನೆಯೊಳಗಿನ ತಂದೆ ತಾಯಿ, ಹಿತೈಷಿಗಳು ಯಾರು ಬೇಕಾದರೂ ಆಗಿರಬಹುದು. ಅಂತಹ ವ್ಯಕ್ತಿತ್ವವುಳ್ಳವರು ಒಬ್ಬೊಬ್ಬರಿಗೆ ಬದುಕಿನ ಒಂದೊಂದು ಘಟ್ಟದಲ್ಲಿ ದೊರೆಯುತ್ತಾರೆ. ಕೆಲವರಿಗೆ ಪ್ರಾಥಮಿಕ ಶಾಲೆಯಲ್ಲೇ ತಮ್ಮನ್ನು ಪ್ರಭಾವಿಸಿ ತಿದ್ದುವ, ಬೆಳೆಸುವ ಗುರು ಸಿಗಬಹುದು. ಇನ್ನು ಕೆಲವರಿಗೆ ಕಾಲೇಜಿನಲ್ಲಿಯೂ ಸಿಗದಿರಬಹುದು! ಮುಂದೆ ಕೌಟುಂಬಿಕ ಜೀವನದ ಸಂದರ್ಭದಲ್ಲೋ ವೃತ್ತಿ ಜೀವನದ ಸಂದರ್ಭದಲ್ಲೋ ಅಂತಹ ವ್ಯಕ್ತಿತ್ವ ನಮಗೆ ದೊರೆಯಬಹುದು. ಇವರೆಲ್ಲರೂ ನಮ್ಮ ಪಾಲಿನ ಗುರುಗಳೇ. ನಾವು ಸರಿ ಎಂದು ಅನುಸರಿಸುತ್ತಿರುವ ಸಂಗತಿಗಳಲ್ಲಿರುವ ತಪ್ಪುಗಳನ್ನು ನಮಗೆ ಮನವರಿಕೆ ಮಾಡಿ ನಮ್ಮ ಆಲೋಚನೆಯನ್ನು ಆ ಮೂಲಕ ನಮ್ಮ ಜೀವನದ ಮಾರ್ಗವನ್ನು ಸರಿಪಡಿಸುವ ಶಕ್ತಿ ಅಂತಹವರಿಗೆ ಮಾತ್ರ ಇರುತ್ತದೆ. ನಮಗೆ ಇಷ್ಟವಾದುದನ್ನೇ ಹೇಳುವವರು ಎಂದಿಗೂ ನಮ್ಮ ಗುರುವಾಗಲು ಸಾಧ್ಯವಿಲ್ಲ. ಅಂತಹವರು ನಮ್ಮಿಂದ ಏನನ್ನೋ ನಿರೀಕ್ಷಿಸುವ ಸಮಯ ಸಾಧಕರಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
‘ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು’ ಎಂಬುದು ವಿಶೇಷವಾಗಿ ಯುವ ಜನಾಂಗವನ್ನು ಕುರಿತು ಹೇಳಿದ ಮಾತು. ಗುರಿ ತಲುಪಲು ಪ್ರತಿಭೆ ಮಾತ್ರ ಸಾಲದು, ಮಾರ್ಗದರ್ಶನ ಮಾಡುವ ಗುರುವೂ ಬೇಕು ಎಂಬುದನ್ನು ಈ ಮಾತು ಒತ್ತಿ ಹೇಳುತ್ತದೆ. ಇತ್ತೀಚಿನ ಯುವ ಜನಾಂಗ ಯಾವುದೇ ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸುವುದಕ್ಕಿಂತ ವಿನಾಕಾರಣವಾಗಿ ಅನುಕರಿಸಲು ಪ್ರಾರಂಭಿಸುತ್ತಾರೆ. ಅದು ವೇಷಭೂಷಣ, ಮಾತು, ನಡಿಗೆ, ಇವುಗಳಿಗಷ್ಟೇ ಸೀಮಿತವಾಗಿರುತ್ತದೆ. ಏಕೆಂದರೆ, ಅವರು ಅನುಕರಿಸುವ ಸಿನಿಮಾ ಮಂದಿಯಾಗಲಿ, ಕ್ರೀಡಾಪಟುಗಳಾಗಲಿ, ದೂರದರ್ಶನ, ಮೊಬೈಲ್ಗಳಲ್ಲಿ ಕಾಣುವ ಕಲಾವಿದರಾಗಲಿ ಇವರಿಗೆ ಹತ್ತಿರದಲ್ಲಿ ಸಿಗುವವರಲ್ಲ. ಪರದೆಯ ಮೇಲೆ ನೋಡಲು ಸಿಗುವ ಇವರಿಂದ ನಟನೆಯಲ್ಲಿ ನೋಡಿದ್ದು ಮಾತ್ರ ಕಲಿಯಲು ಸಾಧ್ಯ. ಅವರ ಪ್ರತಿಭೆಗಳಾಲಿ, ಮನೋಭಾವಗಳಾಗಲಿ, ಆದರ್ಶಗಳಾಗಲಿ, ಜೀವನಶೈಲಿಯಾಗಲಿ ನೋಡುವವರ ಅರಿವಿಗೇ ಬರುವುದಿಲ್ಲ. ಅಂತಹ ಒಳ್ಳೆಯ ಸಂಗತಿಗಳನ್ನು ಜನರ ಮುಂದಿಡಲು ಮಾಧ್ಯಮಗಳಿಗೆ ಸಮಯವೂ ಇಲ್ಲ, ಅದರ ಅಗತ್ಯವೂ ಅವರಿಗಿಲ್ಲ. ಇಂತಹ ಅಂಧಾನುಕರಣೆ ಕೇವಲ ಮೇಲುನೋಟದ ಹಂತಕ್ಕೆ ಸೀಮಿತವಾದುದು. ಹಾಗೆಯೇ ಯಾವಾಗ ಬೇಕಾದರೂ ಬದಲಾಗಬಹುದಾದುದು. ಇಂದು ಇವರು, ನಾಳೆ ಮತ್ತೊಬ್ಬರು. ಪರದೆಯ ಮೇಲೆ ಕಂಡ ಇವರೆಲ್ಲರೂ ಯಾವುದೇ ವ್ಯಕ್ತಿಯ ಮನಸ್ಸಿನಲ್ಲಿ ಗುರುವಾಗಿ, ಪ್ರೇರಣೆಯಾಗಿ ಉಳಿಯಲಾರರು. ಅದಕ್ಕೆ ಸಾಕಷ್ಟು ಸಮಯ ಮತ್ತು ಸಾಮೀಪ್ಯ ಅಗತ್ಯವಿರುತ್ತದೆ.
ಇಂದಿನ ಯುವ ತಲೆಮಾರಿನ ಜನರು ಗುರಿಯನ್ನು ನಿರ್ಧರಿಸುವಲ್ಲಿ ವಿಳಂಬ ಮಾಡುವುದು ಒಂದು ಸಮಸ್ಯೆಯಾದರೆ ಅದಕ್ಕೆ ಸೂಕ್ತ ಗುರುವೊಬ್ಬರನ್ನು ಕಂಡುಕೊಳ್ಳುವಲ್ಲಿ ಸೋಲುತ್ತಿರುವುದು ಮತ್ತೊಂದು ಸಮಸ್ಯೆ. ನಿಮ್ಮ ಶೈಕ್ಷಣಿಕ ಸಾಧನೆಗಿರಲಿ, ಉದ್ಯೋಗ ಸಂಬಂಧಿತ ಸಮಸ್ಯೆಗಳಿರಲಿ, ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಪಡೆದುಕೊಳ್ಳುವುದಾಗಿರಲಿ ಆ ಕೆಲಸವನ್ನು ಮುಂದೂಡಬೇಡಿ, ಕುಂಟು ನೆಪಗಳಿಗಾಗಿ ಆಲಸ್ಯ ಮಾಡಬೇಡಿ. ಏಕೆಂದರೆ ನಮಗಿಂತ ಜಗತ್ತು ಯಾವಾಗಲೂ ವೇಗವಾಗಿ ಸಾಗುತ್ತಿರುತ್ತದೆ. ಇಂದು ಕಾಲೇಜು ಓದುವ ಬಹಳಷ್ಟು ವಿದ್ಯಾರ್ಥಿಗಳನ್ನು ಮುಂದಿನ ಗುರಿ ಏನೆಂದು ಕೇಳಿದರೆ ಗೊಂದಲಕ್ಕೆ ಬೀಳುತ್ತಾರೆ. ಇನ್ನೂ ನಿರ್ಧಸಿರುವುದಿಲ್ಲ. ಉದ್ಯೋಗದ ವಿಷಯದಲ್ಲಿ ಬಹುಪಾಲು ಮಂದಿ ಸಮಸ್ಯೆಗೆ ಸಿಲುಕಲು ಇದು ಪ್ರಮುಖ ಕಾರಣ. ಪ್ರೌಢಶಾಲಾ ಹಂತದಲ್ಲಿಯೇ ನಮ್ಮ ಆಯ್ಕೆಯ ವಿಷಯ ನಿರ್ಧಾರವಾಗಬೇಕು. ಪದವಿಪೂರ್ವ ಕಾಲೇಜಿನಲ್ಲಿ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಪದವಿ ವಿದ್ಯಾರ್ಥಿಯಾದಾಗಲೇ ತನ್ನ ಕಾರ್ಯಕ್ಷೇತ್ರದ ಕನಸುಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು.
ಇಂದಿಗೂ ನಮ್ಮಲ್ಲಿ ತುಂಬಾ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಆರಂಭಿಸುವುದು ಪದವಿ ಮುಗಿದ ಮೇಲೆ. ಹಾಗಾಗಿ, ಉತ್ತರ ಭಾರತಕ್ಕೆ ಹೋಲಿಸಿದರೆ ನಮ್ಮ ದಕ್ಷಿಣ ಭಾರತದಲ್ಲಿ ಸ್ಛರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವವರ ಸಂಖ್ಯೆ ಕಡಿಮೆ. ಸಿದ್ಧತೆಯ ಬಗೆಗಿನ ಅರಿವೂ ಅಲ್ಲಿಂದ ಮುಂದೆ ಬರಬೇಕಾಗುತ್ತದೆ. ಇದಕ್ಕೆಲ್ಲಾ ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ಮಾಡುವ ಗುರು ಒಬ್ಬರ ಕೊರತೆಯೇ ಕಾರಣ ಎಂಬುದರಲ್ಲಿ ಅತಿಶಯವೇನಿಲ್ಲ. ವಿದ್ಯಾರ್ಥಿ ಜೀವನ, ಉದ್ಯೋಗ ಬೇಟೆಯ ದಿನಗಳಾಚೆಗೂ ಒಮ್ಮೊಮ್ಮೆ ಹೊಸದನ್ನು ಕಲಿಯಲು ಮನಸ್ಸು ಜಡವಾದಾಗ, ಬದಲಾವಣೆಯನ್ನು ಸ್ವೀಕರಿಸದಿದ್ದಾಗ ಬದುಕು ನಿಂತ ನೀರಂತೆ ಆಗುವುದುಂಟು. ನಾವು ಮಾಡಿದ್ದೇ ಸರಿ ಎಂಬ ಭ್ರಮೆಯಲ್ಲಿಯೇ ಜೀವನದ ಅಮೂಲ್ಯವಾದ ದಿನಗಳು ಕಳೆದು ಹೋಗುವುದುಂಟು. ಅಶಿಸ್ತಿನ ಜೀವನಶೈಲಿ ಇರಬಹುದು, ಕೆಟ್ಟ ಆಹಾರ ಪದ್ಧತಿ ಇರಬಹುದು, ನಕಾರಾತ್ಮಕ ಮನೋಭಾವನೆಯ ಸಮಸ್ಯೆಗಳಿರಬಹುದು, ಭಯಪೂರಿತವಾದ ಮೌಢ್ಯ ಆಚರಣೆಗಳ ದಾಸರಾಗಿರಬಹುದು ಅಂತಹ ಸಂದರ್ಭಗಳಲ್ಲಿ ಬಹಳ ಗಾಢವಾಗಿ ನಮ್ಮನ್ನು ಪ್ರಭಾವಿಸಿ ತಿದ್ದುವಂತಹ ವ್ಯಕ್ತಿಯೊಬ್ಬರು ನಮ್ಮ ಮನಸಿನೊಳಗೆ ಪ್ರವೇಶಿಸಬೇಕಾಗುತ್ತದೆ. ಅನವಶ್ಯ ಸಂಗತಿಗಳನ್ನು ಟಿವಿ ನೋಡಿಯೋ, ನೆರೆಹೊರೆಯಲ್ಲಿ ನೋಡಿಯೋ, ಮೊಬೈಲ್‌ನಲ್ಲಿ ಹುಡುಕಿಯೋ ಕಲಿಯುವ ಮನಸ್ಸು ತಿದ್ದಿಕೊಳ್ಳಬೇಕಾದ ಸಂಗತಿಗಳನ್ನು ಅಷ್ಟು ಸುಲಭವಾಗಿ ಮತ್ತೊಬ್ಬರನ್ನು ನೋಡಿದ ಮಾತ್ರಕ್ಕೆ ಕಲಿಯಲು ಸಿದ್ಧವಿರುವುದಿಲ್ಲ. ಅದಕ್ಕೆ ಸೂಕ್ತ ವ್ಯಕ್ತಿಯ ಪರಿಚಯವೇ ಆಗಬೇಕು. ಅಂತಹ ವ್ಯಕ್ತಿಗಳು ಕೆಲವೊಮ್ಮೆ ನಿರಾಯಾಸವಾಗಿ ನಮಗೆ ದೊರೆತುಬಿಡುತ್ತಾರೆ. ಆದರೆ, ಬಹುತೇಕರು ತಾವೇ ಕಂಡುಕೊಳ್ಳಬೇಕಾಗುತ್ತದೆ. ಏಕೆಂದರೆ, ಗುರುವಿಲ್ಲದೆ ಕಲಿತ ವಿದ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಅಪೂರ್ಣವೇ ಆಗಿರುತ್ತವೆ. ಗುರುವಿಲ್ಲದ ಗುರಿ ದೂರವೂ, ದುರ್ಗಮದ ಹಾದಿಯೂ ಆಗುತ್ತದೆ.
-ಡಾ. ನೀ.ಗೂ. ರಮೇಶ್



