ತಲುಪಿದ್ದಾರೆ ಮಾನಸಿಕವಾಗಿ ಯುವ ಜನತೆ ಚಂದ್ರಲೋಕಕೆ ಮೌನವಾಗಿ; ಅಡುಗೆ ಮನೆಗೂ ಹೋಗದಾಗಿದ್ದಾರೆ ಮುಳುಗಿ ಮೊಬೈಲ್‌ನೊಳಗೆ ಮೂಕರಾಗಿ! ಇಂದು ಯುವಜನರನ್ನು ಆವರಿಸಿರುವ ಕೆಟ್ಟ ಆಲಸ್ಯ ಆತಂಕಕಾರಿಯಾಗಿದೆ. ಇದೊಂದು ದೌರ್ಬಲ್ಯದಿಂದಾಗಿ ಇರುವ ಪ್ರತಿಭೆಗಳೆಲ್ಲವೂ ವ್ಯರ್ಥವಾಗಿ ಮೂಲೆಗುಂಪಾಗಿವೆ.
ವಿವೇಕಾನಂದರ ದೃಷ್ಟಿಯಲ್ಲಿ ಯುವ ಜನರೆಂದರೆ ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಮಂಡಲ, ವಿದ್ಯುತ್‌ನಂತಹ ಆಲೋಚನಾ ಶಕ್ತಿಯುಳ್ಳವರು. ಆದರೆ, ಇಂದಿನ ಬಹುತೇಕ ಯುವಜನರಲ್ಲಿ ಆ ಶಕ್ತಿ ಕಾಣದಾಗಿದೆ. ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸದಷ್ಟು ನಿರ್ಲಿಪ್ತರಾಗಿದ್ದಾರೆ. ನೂರು ಮೀಟರ್ ನಡೆಯಲೂ ನಾಲ್ಕಾರು ಬಾರಿ ಯೋಚಿಸುವಷ್ಟು ಸೋಮಾರಿಗಳಾಗಿದ್ದಾರೆ.
ಆಟೋಟಗಳತ್ತ ಆಸಕ್ತಿ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಸ್ವಯಂ ಪ್ರೇರಣೆಯಿಂದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲೂ ಮನಸ್ಸಿಲ್ಲದವರಾಗಿದ್ದಾರೆ. ಇವೆಲ್ಲವನ್ನೂ ಕಿತ್ತುಕೊಂಡ ಅಪಕೀರ್ತಿ ಮೊಬೈಲ್‌ಗೇ ಸಲ್ಲಬೇಕು! ಮನೆ ಮುಂಭಾಗ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕಾರ್ಯಕ್ರಮಗಳು ಹೀಗೆ ಎಲ್ಲಿ ಕುಳಿತರೂ ಒಂಟಿಯಾಗಿರಲು ಇಷ್ಟಪಡುವ ಯುವ ಜನರ ಸಂಗಾತಿಯಾಗಿರುವುದು ಮೊಬೈಲ್ ಎಂಬ ನಿರ್ಜೀವ ವಸ್ತು! ಮೊಬೈಲ್ ಮಾತ್ರವಲ್ಲ, ಯಂತ್ರಗಳೇ ಮಾನವನನ್ನು ನಿಯಂತ್ರಿಸುತ್ತಿರುವ ಕಾಲ ಇದು.
ಯಾವುದೇ ಜೀವಿಯ ಆರೋಗ್ಯದ, ಆಯಸ್ಸಿನ ಪ್ರಮಾಣ ನಿರ್ಧಾರವಾಗುವುದು ಆಹಾರ ದಿಂದಲೋ, ಗಾತ್ರದಿಂದಲೋ, ಜೀನ್ಸ್ ಗಳಿಂದಲೋ ಮಾತ್ರವಲ್ಲ. ಅದರ ಜೀವನಶೈಲಿ, ಕ್ರಿಯಾಶೀಲತೆ ಹಾಗೂ ಚಟುವಟಿಕೆಗಳ ಸ್ವರೂಪದಿಂದಲೂ ಅದರ ಜೀವಿತಾವಧಿ ನಿರ್ಧಾರವಾಗುತ್ತಿರುತ್ತದೆ. ಜೀವಿ ಗಳಂತೆಯೇ ಮಾನವರಲ್ಲಿಯೂ ಸದಾ ಕ್ರಿಯಾಶೀಲವಾಗಿರುವವರ ದೇಹ ಹಾಗೂ ಮನಸ್ಸುಗಳು ಬಹುತೇಕ ಆರೋಗ್ಯಕರವಾಗಿಯೇ ಇರುತ್ತವೆ.
ದೈಹಿಕ ಚಟುವಟಿಕೆ ನಮ್ಮ ಆರೋಗ್ಯದಲ್ಲಿ ಆಹಾರದಷ್ಟೇ ಮಹತ್ವದ ಪಾತ್ರ ವಹಿಸುತ್ತದೆ. ದೈಹಿಕ ಚಟುವಟಿಕೆ ಎಂದರೆ ಜಿಮ್, ಏರೋ ಬಿಕ್, ಕುಸ್ತಿ, ಗರಡಿ ಮನೆಯ ಕಸರತ್ತುಗಳೇ ಆಗ ಬೇಕಿಲ್ಲ. ನಮ್ಮ ಮನೆ, ಹೊಲ, ಕೈತೋಟಗಳಲ್ಲಿ ಮಾಡುವ ಕೆಲಸಗಳೂ ಉತ್ತಮ ದೈಹಿಕ ಚಟುವಟಿಕೆಗಳೇ. ಪ್ರಸಿದ್ಧ ಪ್ರಕೃತಿ ಚಿಕಿತ್ಸಾ ತಜ್ಞರಾದ ಶ್ರೀ ಪಾಸಿಟಿವ್ ತಮ್ಮಯ್ಯ ಅವರು ಹೇಳುವಂತೆ ‘ನಮ್ಮ ಹಲವು ಯುವ ಪೀಳಿಗೆಯವರು ಭಾವಿಸಿರುವಂತೆ ವ್ಯಾಯಾಮ ಎಂದರೆ, ಕಡಿಮೆ ಅವಧಿಯಲ್ಲಿ ಹೇಗಾದರೂ ಮಾಡಿ, ಏನಾದರೂ ತಿಂದು ಟಗರು, ಕೋಣಗಳು ಕೊಬ್ಬಿದಂತೆ ದೇಹದಲ್ಲಿ ಮಾಂಸಖಂಡಗಳನ್ನು ಬೆಳೆಸಿಕೊಳ್ಳುವುದಲ್ಲ. ಮೈಯಲ್ಲಿ ಮಾಂಸ ಖಂಡ ಬೆಳೆದಷ್ಟೂ ಕಾಯಿಲೆಗಳು ಹೆಚ್ಚು ಹಾಗೂ ಅಂಗಾಂಗಗಳು ವಿಕಾರಗೊಳ್ಳು ತ್ತವೆ. ಅನಗತ್ಯ ಕಠಿಣ ಕಸರತ್ತುಗಳು ದೇಹಕ್ಕೆ ಅಪಾಯಕಾರಿ. ಇದರಿಂದ ದೇಹದ ಆಕಾರ ಕೆಡು ತ್ತದೆ.
ರಕ್ತನಾಳಗಳ ಮೇಲಿನ ಒತ್ತಡ ಜಾಸ್ತಿಯಾಗುತ್ತದೆ. ಕೃತಕವಾಗಿ ಮಾಂಸಖಂಡಗಳು ಬೆಳೆಯುತ್ತವೆ. ಇವೆಲ್ಲ ಯಾವ ರೀತಿಯಲ್ಲೂ ಆರೋಗ್ಯಕರ ವ್ಯಾಯಾಮಗಳಲ್ಲ.” ವ್ಯಾಯಾಮವೂ ಸಹಜ ವಾದ ರೀತಿಯಲ್ಲೇ ಇರಬೇಕು ಎಂಬುದನ್ನು ನಮ್ಮ ವಿವಿಧ ಆರೋಗ್ಯಶಾಸ್ತ್ರಗಳು ಹಿಂದಿನಿಂದಲೂ ಪ್ರತಿಪಾದಿಸಿವೆ.
ನಮ್ಮ ಬಹುತೇಕ ಯುವಜನರಲ್ಲಿ ಇರುವ ತಪ್ಪು ಅಭಿಪ್ರಾಯವೆಂದರೆ, ಸುಖವಾಗಿರುವುದೆಂದರೆ ಬಾಯಿರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿಂದು, ಮೊಬೈಲ್ ನೋಡುತ್ತ, ಮಲಗಿ ಕಾಲ ಕಳೆಯುವುದಾಗಿದೆ. ‘ಕೂತುಂಡರೆ ಕುಡಿಕೆ ಹೊನ್ನು ಸಾಲದು’ಎಂಬ ಗಾದೆಯನ್ನು ಇನ್ನೊಂದು ರೀತಿಯಲ್ಲಿ ಈ ಕಾಲಕ್ಕೆ ಅರ್ಥೈಸಬೇಕೆಂದರೆ, ‘ಕೂತುಂಡರೆ ಕೂಡಿಟ್ಟ ಆಸ್ತಿ ಆಸ್ಪತ್ರೆಗೂ ಸಾಲುವುದಿಲ್ಲ’ ಎಂದು ಹೇಳಬಹುದಾ ಗಿದೆ. ಕೆಲಸ ಮಾಡದೆ ಕೂರುವುದೇ ಸುಖವಲ್ಲ, ಅದು ರೋಗಗಳಿಗೆ ಆಹ್ವಾನ. ದುಡಿದವರು ಮನೆ ಯಲ್ಲಿರುತ್ತಾರೆ, ಕೂತು ಉಂಡವರು ಆಸ್ಪತ್ರೆಗೆ ಸೇರುತ್ತಾರೆ.
ಏಕೆಂದರೆ, ದೇಹದ ತುಂಬಾ ವಿದ್ಯುತ್ ಬ್ಯಾಟರಿ ಇದೆ. ಅದನ್ನು ನಮ್ಮ ಚಟುವಟಿಕೆಯಿಂದ ಆಗಾಗ ಚಾರ್ಜ್ ಮಾಡಬೇಕು ಎಂದು ನಮ್ಮ ಹಿರಿಯರು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಲೇ ಬಂದಿದ್ದಾರೆ.
ಎಲ್ಲ ಸಾಧನೆಗಳಿಗೂ ಅಡಿಪಾಯ ನಮ್ಮ ಆರೋಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವ ಗುಟ್ಟು ಸದಾ ಕ್ರಿಯಾಶೀಲವಾಗಿರುವುದು. ತುಂಬಾ ಜನರು ವ್ಯಾಯಾಮ ಮಾಡಲು ಹೊಸ ವರ್ಷದಂದೇ ಪ್ರಾರಂಭಿಸುತ್ತಾರೆ. ಬಹುತೇಕ ಅದೇ ವಾರದಲ್ಲಿ ಅಥವಾ ಅದೇ ತಿಂಗಳಲ್ಲಿ ಅದು ಕೊನೆ ಗೊಳ್ಳುತ್ತದೆ! ಕಾರಣ ಇಚ್ಛಾಶಕ್ತಿಯ ಕೊರತೆ. ಪ್ರಕೃತಿಯಲ್ಲಿರುವ ಯಾವ ಜೀವಿಯೂ ಸೋಮಾರಿಯಾಗಿಲ್ಲ. ಮೂಲತಃ ಮಾನವನೂ ಸೋಮಾರಿಯಲ್ಲ, ಇತ್ತೀಚೆಗೆ ಆವರಿಸಿರುವ ಈ ಸೋಮಾರಿತನವನ್ನು ಮೀರಿ ಕ್ರಿಯಾಶೀಲವಾಗುವುದು ಯಾರಿಗೂ ಅಸಾಧ್ಯವೇನಲ್ಲ. ಆಲಸ್ಯವನ್ನು ಹೊರಹಾಕಿ, ಆನಂದಕ್ಕಾಗಿ ಹೊರ ನಡೆಯಿರಿ, ದಾರಿ ದೂರ ಇದೆ
ದೇಹಾರೋಗ್ಯಕ್ಕಾಗಿ ಕೆಲವು ನಿರ್ಣಯಗಳು:
೧ ಅನಗತ್ಯವಾಗಿ ವಾಹನ ಬಳಸದಿರುವ ನಿರ್ಣಯ ಮಾಡಿ. ಜೀವನವಿಡೀ ನಿಮ್ಮ ನಿಜ ಸಂಗಾತಿಯಾದ ದೇಹದ ಉಳಿವಿಗಾಗಿ ಅವಕಾಶವಾದಾಗಲೆಲ್ಲ ನಡೆಯಿರಿ.
೨. ವ್ಯಾಯಾಮ ಎಂದರೆ ಹಣ ಖರ್ಚು ಮಾಡಿಕೊಂಡು ಎಲ್ಲೋ ಹೋಗಿ ಬೆವರಿಳಿ ಸುವುದಲ್ಲ. ನಾವು ಇರುವ ಸನ್ನಿವೇಶದಲ್ಲಿಸಾಧ್ಯವಾದ ಎಲ್ಲ ಬಗೆಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ವ್ಯಾಯಾಮವಾಗಿದೆ.
೩. ದೇಹಕ್ಕೆ ಉತ್ತಮ ವ್ಯಾಯಾಮವೆಂದರೆ ನಮ್ಮ ಮನೆಯ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು. ಹೊಲ, ಕೈತೋಟಗಳಲ್ಲಿ ಕೆಲಸಗಳನ್ನು ಹುಡುಕಿಕೊಂಡು ಮಾಡಿ. ಸದಾ ಕ್ರಿಯಾಶೀಲರಾಗಿರಿ.
೪. ಅವಕಾಶ ಸಿಕ್ಕಾಗಲೆಲ್ಲಾ ಆಟವಾಡುವುದು ದೇಹ ಮನಸ್ಸು ಎರಡಕ್ಕೂ ಒಳಿತು.
೫ .ಇಂದು ಮನೆ ಕೆಲಸದವರು, ಕೂಲಿ ಮಾಡುವವರು, ದಿನವಿಡೀ ಕಠಿಣ ಕೆಲಸಗಳಲ್ಲಿ ದುಡಿಯುತ್ತಿರುವವರು ಆರೋಗ್ಯ ವಾಗಿದ್ದಾರೆ, ಮನೆ ಯಜಮಾನರು ಆಸ್ಪತ್ರೆಗೆ ಅಲೆಯುತ್ತಿದ್ದಾರೆ ಎಂಬುದನ್ನು ಸದಾ ನೆನಪಿಡಿ.
೬. ವಾಕ್ ಅಥವಾ ವ್ಯಾಯಾಮದ ನಂತರ ೧೦ ನಿಮಿಷ ಶಾಂತಿ ಆಸನದಲ್ಲಿ ಮಲಗಿ ವಿರಮಿಸಿ.
೭. ಬರಿಗಾಲು ಮತ್ತು ಹುಲ್ಲಿನ ಮೇಲಿನ ನಡಿಗೆ ಅತ್ಯಂತ ಪರಿಣಾಮಕಾರಿ ಥೆರಪಿ.
೮.ವಾಕ್ ಜೊತೆಗೆ ಕೆಲವು ಯೋಗಾಸನಗಳನ್ನೂ ಮಾಡಿ. ಅವಕಾಶವಿದ್ದಾಗ ನೃತ್ಯ ಮಾಡಿ.
೯. ಸಮಯ ಮಾಡಿಕೊಂಡು ಪ್ರಾಣಾಯಾಮವನ್ನೂ ಅಭ್ಯಾಸ ಮಾಡಿ.
-ಡಾ. ನೀಗೂ ರಮೇಶ್





