Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಭಾರತದ ಬಾನಲ್ಲೂ ಮಸ್ಕನ ಅಂತರ್ಜಾಲ

ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಸ್ಯಾಟಲೈಟ್ ಇಂಟರ್‌ನೆಟ್ ಸೇವೆ ನೀಡುತ್ತಿರುವ ಎಲಾನ್‌ಮಸ್ಕ್ ಒಡೆತನದ ಸ್ಟಾರ್ ಲಿಂಕ್‌ಗೆ ಭಾರತೀಯ ದೂರಸಂಪರ್ಕ ಇಲಾಖೆಯು ಭಾರತದಲ್ಲಿ ಸ್ಯಾಟಲೈಟ್ ಇಂಟರ್‌ನೆಟ್ ಸೇವೆ ಆರಂಭಿಸಲು ಪರವಾನಗಿ ನೀಡಿದೆ. ಜತೆಗೆ ಟ್ರಯಲ್ ಸ್ಪೆಕ್ಟ್ರಂ ಅನ್ನೂ ನೀಡಲಾಗುತ್ತದೆ. ಈ ಟ್ರಯಲ್‌ನಲ್ಲಿ ಸ್ಟಾರ್‌ಲಿಂಕ್ ಎಲ್ಲಾ ನಿಯಮಗಳಿಗೆ ಬದ್ಧವಾಗಿದ್ದರೆ ಮಾತ್ರ ವಾಣಿಜ್ಯ ಕಾರ್ಯಾಚರಣೆಗೆ ಅನುಮತಿ ದೊರೆಯಲಿದೆ.

ಈ ಮೂಲಕ ಸ್ಯಾಟಲೈಟ್ ಇಂಟರ್‌ನೆಟ್ ಸೇವೆ ಒದಗಿಸಲು ಜಿಎಂಪಿಸಿಎಸ್ ಪರವಾನಗಿ ಪಡೆದ ಮೂರನೇ ಕಂಪೆನಿ ಇದಾಗಿದೆ. ಯೂಟೆಲ್ ಸ್ಯಾಟ್‌ನ ಒನ್ ವೆಬ್ ಮತ್ತು ರಿಲಯನ್ಸ್ ಜಿಯೋಗೆ ಈ ಪರವಾನಗಿಯನ್ನು ನೀಡಲಾಗಿದೆ. ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ಗೆ ಈ ಪರವಾನಗಿ ದೊರೆತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಭಾರತದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ. ದೂರ ಸಂವಹನ ಇಲಾಖೆಯು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯೂನಿಕೇಶನ್ (ಜಿಎಂಪಿಸಿಎಸ್) ಪರವಾನಗಿಯನ್ನು ಸ್ಟಾರ್‌ಲಿಂಕ್‌ಗೆ ನೀಡಿದೆ. ಅಲ್ಲದೇ ಟ್ರಯಲ್ ಸ್ಪೆಕ್ಟ್ರಂ ಅನ್ನೂ ಕೂಡ ನೀಡಲಿದೆ ಎಂದು ಸುದ್ದಿಯಾಗಿದೆ.

ಟ್ರಯಲ್ ಸ್ಪೆಕ್ಟ್ರಂಗೆ ಸ್ಟಾರ್‌ಲಿಂಕ್ ಅರ್ಜಿ ಸಲ್ಲಿಸಬೇಕು. ಅದಾಗಿ ಮೂರ‍್ನಾಲ್ಕು ವಾರಗಳಲ್ಲಿ ಸ್ಪೆಕ್ಟ್ರಂ ನೀಡಲಾಗುತ್ತದೆ. ಆ ನಂತರ ಸರ್ಕಾರದ ಭದ್ರತಾ ಷರತ್ತುಗಳನ್ನು ಒಳಗೊಂಡಂತೆ ಎಲ್ಲಾ ನಿಯಮ, ನಿಬಂಧನೆಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಕೇಂದ್ರ ಸರ್ಕಾರ ಅನುಮತಿ ನೀಡಲಿದೆ. ಆ ನಂತರವಷ್ಟೇ ಸ್ಟಾರ್‌ಲಿಂಕ್ ಸಂಸ್ಥೆ ತನ್ನ ಸ್ಯಾಟಲೈಟ್ ಇಂಟರ್‌ನೆಟ್ ಸೇವೆಯನ್ನು ಕಮರ್ಷಿಯಲ್ ಆಗಿ ಆರಂಭಿಸಲು ಸಾಧ್ಯವಾಗಲಿದೆ.

ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ ಈಗಾಗಲೇ ಸ್ಟಾರ್ ಲಿಂಕ್ ತನ್ನ ಸೇವೆ ಆರಂಭಿಸಿದೆ. ಭಾರತದಲ್ಲೂ ಈ ಸೇವೆ ಮುಂದಿನ ಒಂದೆರಡು ತಿಂಗಳುಗಳಲ್ಲಿ ಆರಂಭವಾಗಬಹುದು. ಸ್ಟಾರ್‌ಲಿಂಕ್ ಸಂಸ್ಥೆ ಭಾರತದಲ್ಲಿ ಬಹಳ ಕಡಿಮೆ ಬೆಲೆಗೆ ಇಂಟರ್‌ನೆಟ್ ಸೇವೆಯ ಆಫರ್ ನೀಡಬಹುದು ಎಂದು ಹೇಳಲಾಗುತ್ತಿದೆ.

Tags:
error: Content is protected !!