Mysore
25
overcast clouds
Light
Dark

ಕಿಕ್ ಬಾಕ್ಸಿಂಗ್‌ ತಾರೆ ಪುಷ್ಪಲತಾ

• ಜಿ.ತಂಗಂ ಗೋಪಿನಾಥಂ

ಮೈಸೂರು ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ನಗರ. ಇಂತಹ ಮೈಸೂರು ವಿಶ್ವವಿದ್ಯಾನಿಲಯದ 20 ವರ್ಷದ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಅರುವನಹಳ್ಳಿ ಗ್ರಾಮದ ಎಚ್.ಎನ್.ಪುಷ್ಪಲತಾ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಅವರು ಕಿಕ್ ಬಾಕ್ಸಿಂಗ್ ನಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.

ನಂಜಪ್ಪ ಮತ್ತು ಕಲಾವತಿ ದಂಪತಿಯ ಪುತ್ರಿ ಎಚ್.ಎನ್.ಪುಷ್ಪಲತಾ, ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ದ್ವಿತೀಯ ಬಿಎ ವಾಸ್ಯಂಗ ಮಾಡುತ್ತಿದ್ದು, ಭವಿಷ್ಯದ ಕ್ರೀಡಾ ಪ್ರತಿಭೆಯಾಗಿ ಅರಳುತ್ತಿದ್ದಾರೆ. ಜಿಲ್ಲಾ, ವಲಯ ಹಾಗೂ ಅಂತರ ವಿವಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾದ ಪುಷ್ಪಲತಾ ಹಲವಾರು ಪದಕಗಳನ್ನು ಪಡೆದುಕೊಂಡಿದ್ದಾರೆ.

2024ರ ಮಾ.5 ರಿಂದ 9ರವರೆಗೆ ಉತ್ತರ ಪ್ರದೇಶದ ಮೀರತ್‌ನ ಸ್ವಾಮಿ ವಿವೇಕಾನಂದ ಸುಭರ್ತಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪುಷ್ಪಲತಾ ಅವರು ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ 70 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಮಿಂಚಿದ್ದಾರೆ. ಪಂದ್ಯದ ಅಂತಿಮ ಸುತ್ತಿನ ಸೆಣಸಾಟದಲ್ಲಿ ನೆಹರು ಟೆಕ್ನಾಲಜಿ ವಿಶ್ವವಿದ್ಯಾನಿಲಯದ ವಿರುದ್ಧ ಅಮೋಘ ಆಟ ಪ್ರದರ್ಶಿಸಿ ಜಯಿಸಿ ಚಿನ್ನದ ಪದಕವನ್ನು ಪಡೆದು ಮೈಸೂರಿಗೆ ಹೆಮ್ಮೆ ತಂದಿದ್ದಾರೆ.

ಪುಷ್ಪಲತಾ ಕರಾಟೆ ಪಟುವೂ ಹೌದು: ಎಚ್.ಎನ್.ಪುಷ್ಪಲತಾ ಅವರು ಮೂಲತಃ ಕರಾಟೆ ಪಟು. ಇವರು 10ನೇ ತರಗತಿ ಓದುವಾಗಲೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದರು. ಕರಾಟೆಯ ಜೊತೆಗೆ ಕಬಡ್ಡಿ, ಪ್ರೋಬಾಲ್, ಗುಂಡು ಎಸೆತ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಹಲವು ಪದಕಗಳನ್ನು ಗಳಿಸಿದ್ದಾರೆ.

ನಿತ್ಯ 2 ಗಂಟೆಗಳ ಕಾಲ ಅಭ್ಯಾಸ: ಎಚ್‌.ಎನ್.ಪುಷ್ಪಲತಾ ಅವರು ತಮ್ಮ ಓದಿನ ಜೊತೆಗೆ ಮೈಸೂರು ವಿವಿ ಯುವರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿನಿತ್ಯ 2 ಗಂಟೆಗಳ ಕಿಕ್ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾರೆ.

ಜಸಂತ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಎಚ್.ಎನ್.ಪುಷ್ಪಲತಾ ಪ್ರಾಥಮಿಕ ಶಿಕ್ಷಣವನ್ನು ತರೀಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಹಾಗೂ 10ನೇ ತರಗತಿಯನ್ನು ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತಿದ್ದು, ಪಿಯು ಶಿಕ್ಷಣವನ್ನು ತರೀಕೆರೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ, ಈಗ, ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ದ್ವಿತೀಯ ಬಿಎ ವಾಸ್ಯಂಗ ಮಾಡುತ್ತಿದ್ದಾರೆ.

ಸ್ವರಕ್ಷಣೆಯ ಕಲೆ ಪ್ರತಿಯೊಬ್ಬ ಮಹಿಳೆಗೂ ಅನಿವಾರ್ಯ ಎನ್ನುತ್ತಾರೆ ಪುಷ್ಪಲತಾ

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಸ್ವರಕ್ಷಣೆಯ ಕಲೆ ಪ್ರತಿಯೊಬ್ಬ ಮಹಿಳೆಗೂ ಅನಿವಾರ್ಯ. ಅದರಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ನಗರ ಭಾಗಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೇಗಾದರೂ ಬಹಿರಂಗವಾಗುತ್ತದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಹಾಗಲ್ಲ. ಈ ರೀತಿಯ ದೌರ್ಜನ್ಯಗಳಿಗೆ ತುತ್ತಾಗಿ ವಿರೋಧಿಸಲಾಗದೆ ಸುಮ್ಮನಾಗಿ ಬಿಡುತ್ತಾರೆ. ಇಂದು ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತಹ ವಿದ್ಯೆಯ ಅನಿವಾರ್ಯತೆಯಿದೆ. ಕಿಕ್ ಬಾಕ್ಸಿಂಗ್ ಕ್ರೀಡೆ ತರಬೇತಿ ಪಡೆಯುತ್ತಾ ಇದರಲ್ಲಿ ನನ್ನ ಆಸಕ್ತಿ ಹೆಚ್ಚಾಯಿತು. ನಾನು ಹಲವು ಕಡೆ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದೇನೆ. ಕ್ರೀಡೆ ಜತೆ ಓದಿನತ್ತಲೂ ಆಸಕ್ತಿ ವಹಿಸುವಂತೆ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡೆ ಜತೆಗೆ ಐಪಿಎಸ್ ಮಾಡುವ ಕನಸು ನನ್ನದು. ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಕಿಕ್ ಬಾಕ್ಸಿಂಗ್ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದಿದ್ದು ಸಂತೋಷ ತಂದಿದೆ.
-ಎಚ್.ಎನ್.ಪುಷ್ಪಲತಾ, ಕಿಕ್ ಬಾಕ್ಸಿಂಗ್ ಪಟು.

Tags: