
ಡಾ. ಬಿ.ಡಿ. ಸತ್ಯನಾರಾಯಣ.
ಚರ್ಮ ಮತ್ತುಲೈಂಗಿಕ ರೋಗಗಳ ತಜ್ಞರು ಮೈಸೂರು
ಚರ್ಮ ಮತ್ತುಲೈಂಗಿಕ ರೋಗಗಳ ತಜ್ಞರು ಮೈಸೂರು
ಭಾರತದಂತಹ ದೇಶಗಳಲ್ಲಿ ಇಂದಿಗೂ ಲೈಂಗಿಕ ಶಿಕ್ಷಣ ಮುಕ್ತವಾಗಿ ದೊರೆಯುತ್ತಿಲ್ಲ. ಅಂಜಿಕೆ, ನಾಚಿಕೆ, ಕಟ್ಟುಪಾಡುಗಳಿಗೆ ಸಿಲುಕಿ ಹಲವಾರು ಮಂದಿ ಲೈಂಗಿಕ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ. ಇದೇ ವೇಳೆ ಈಗೀಗ ಲೈಂಗಿಕ ಶಿಕ್ಷಣಕ್ಕೆ ತಕ್ಕಮಟ್ಟಿಗಿನ ಬೆಂಬಲ ಸಿಕ್ಕುತ್ತಿರುವುದು ಸಂತೋಷದ ವಿಚಾರ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ವಾರ ‘ಯೋಗಕ್ಷೇಮ’ ವಿಶೇಷ ಪುಟದಲ್ಲಿ ಲೈಂಗಿಕ ತಿಳವಳಿಕೆಯನ್ನು ಮೈಸೂರಿನ ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞರಾದ ಡಾ. ಬಿ.ಡಿ. ಸತ್ಯನಾರಾಯಣ ಅವರು ನೀಡಲಿದ್ದಾರೆ.
–
ಗಂಡು-ಹೆಣ್ಣಿನ ಪರಸ್ಪರ ಆಕರ್ಷಣೆ ಪ್ರಕೃತಿದತ್ತ ನಿಯಮ. ಬಾಲ್ಯಾವಸ್ಥೆಯಲ್ಲಿಯೇ ಈ ಆಕರ್ಷಣೆ ಶುರುವಾಗುತ್ತದೆ. ನಂತರ ಪ್ರಾಯದ ಹಂತ ತಲುಪುತ್ತಿದ್ದಂತೆ ಮಾನಸಿಕವಾಗಿ, ದೈಹಿಕವಾಗಿ ಲೈಂಗಿಕ ಅರಿವು ಹೆಚ್ಚಾಗುತ್ತದೆ. ಈ ರೀತಿಯ ಅರಿವಿನ ಹಂತದಲ್ಲಿ ಹಾರ್ಮೋನ್‌ಗಳ ಉತ್ಪಾದನೆ, ಜನನೇಂದ್ರಿಯಗಳ ಬಗೆಗಿನ ತಿಳವಳಿಕೆ ಮಹತ್ವಪೂರ್ಣವಾದದ್ದು.
ಮೂತ್ರನಾಳ (ಯುರೇತ್ರ), ಶಿಶ್ನ (ಪೆನ್ನಿಸ್), ಪ್ರಾಸ್ಟೇಟ್, ವೃಷಣ, ವೀರ್ಯನಾಳ (ಎಪಿಡೈಡಿಮಿಸ್), ವೀರ್ಯ ಕೋಶಗಳು (ಸಮೈನಲ್ ವೆಸಿಕಲ್ಸ್) ಪುರುಷ ಜನನೇಂದ್ರಿಯದ ಮುಖ್ಯ ಅಂಶಗಳು. ಮೂತ್ರ ನಾಳವು ಮೂತ್ರ ಕೋಶದಿಂದ ಪ್ರಾರಂಭವಾಗಿ ಸುಮಾರು ೨೦ ಸೆ.ಮೀ. ಉದ್ದವಿರುತ್ತದೆ. ಪ್ರಾಸ್ಟೇಸ್ ಗ್ರಂಥಿಯು ಮೂತ್ರ ಕೋಶದ ಕೆಳ ಭಾಗದಲ್ಲಿದ್ದು, ಇದರ ಮೂಲಕ ಮೂತ್ರನಾಳವು ಹಾಯ್ದು ಹೋಗುತ್ತದೆ. ಪ್ರಾಸ್ಟೇಟ್ ಗ್ರಂಥಿಯ ಹಿಂಭಾಗದ ಮೇಲುಗಡೆ ವೀರ್ಯ ಕೋಶಗಳಿದ್ದು, ವೃಷಣಗ
ಳಿಂದ ಉತ್ಪತ್ತಿಯಾದ ವೀರ್ಯ ವೀರ್ಯನಾಳಗಳ ಮೂಲಕ ಹರಿದು ವೀರ್ಯಕೋಶಗಳಲ್ಲಿ ಶೇಖರವಾಗುತ್ತದೆ. ಜನನಾಂಗವು ಸ್ನಾಯುಗಳು, ರಕ್ತ ನಾಳಗಳು ಮತ್ತು ನರ ತಂತುಗಳಿಂದ ಸುತ್ತುವರಿದಿರುತ್ತದೆ. ಇದನ್ನು ಶಿಶ್ನ ಎಂದೂ ಕರೆಯಲಾಗುತ್ತದೆ. ಇದರ ಮೇಲು ಭಾಗವನ್ನು ಕಾಂಡವೆಂದು, ತುದಿಯಲ್ಲಿ ಅಡಿಕೆಯ ಉಂಡೆಯಂತೆ ಕಾಣವು ಭಾಗವನ್ನು ಗ್ಲ್ಯಾನ್ಸ್ ಪೆನ್ನಿಸ್ (ಬಳ್ಳಿ) ಎಂದು ಕರೆಯುತ್ತೇವೆ.
ಪುರುಷತ್ವದ ಹಾರ್ಮೋನ್ ಮತ್ತು ವೀರ್ಯಾಣುವನ್ನು ಉತ್ಪಾದಿಸುವ ಎರಡು ವೃಷಣಗಳು ಶಿಶ್ನದ ತಳಭಾಗದಲ್ಲಿ ಚರ್ಮದಿಂದ ಆವೃತ್ತವಾದ ವೃಷಣದ ಚೀಲದಲ್ಲಿ ಸಂರಕ್ಷಿಸಲ್ಪಟ್ಟಿರುತ್ತವೆ. ವೀರ್ಯ ಮತ್ತು ಮೂತ್ರವು ಒಂದೇ ನಾಳದಿಂದ ಬೇರೆ ಬೇರೆ ಸಮಯದಲ್ಲಿ ಹೊರ ಬರುತ್ತವೆ. ಇವೆಲ್ಲವೂ ನಮ್ಮ ದೈಹಿಕ ಬದಲಾವಣೆ, ಹಾರ್ಮೋನುಗಳ ಉತ್ಪತ್ತಿಯಿಂದ ಒಂದು ಹಂತದ ವರೆಗೆ ನಿರಂತರವಾಗಿ ನಡೆಯುತ್ತಿರುತ್ತವೆ.