ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಕೆರೆ ತೊಣ್ಣೂರು ಗ್ರಾಮವು ಐತಿಹಾಸಿಕ, ಧಾರ್ಮಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣವಾಗಿದೆ.
ಈ ಕೆರೆಯು ೧೧ನೇ ಶತಮಾನದ ಶ್ರೀ ರಾಮಾನುಜಾಚಾರ್ಯರ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಈ ಕೆರೆ, ತನ್ನ ಸುತ್ತಲಿನ ಹಸಿರು ಬೆಟ್ಟಗಳು, ಕಾಡುಗಳು ಮತ್ತು ಪ್ರಾಚೀನ ದೇವಾಲಯಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇತಿಹಾಸದ ಇತರ ಆಯಾಮಗಳನ್ನು ಪರಿಶೀಲಿಸಿದರೆ, ಬಿಜಾಪುರದ ಸುಲ್ತಾನ ಆದಿಲ್ ಶಾ ಮತ್ತು ಮೊಘಲರ ಸುಬೇದಾರ ನಾಸಿರಜಂಗ್ ಈ ಕೆರೆಯನ್ನು ಮೋತಿ ತಲಾಬ್ (ಮುತ್ತಿನ ಕೊಳ) ಎಂದು ಕರೆದಿದ್ದರು. ಏಕೆಂದರೆ ಇದರ ನೀರು ಸ್ಛಟಿಕದಂತೆ ಶುದ್ಧವಾಗಿತ್ತು.
ಟಿಪ್ಪು ಸುಲ್ತಾನನು ಕೆರೆಯ ಕಟ್ಟೆಯನ್ನು ದುರಸ್ತಿಪಡಿಸಿ, ಗುಹೆಗಳನ್ನು ನಿರ್ಮಿಸಿದನೆಂಬ ಉಲ್ಲೇಖವೂ ಇದೆ. ಇವು ಟಿಪ್ಪು ಗುಹೆಗಳು ಎಂದು ಕರೆಯಲ್ಪಡುತ್ತವೆ. ಕೆರೆ ತೊಣ್ಣೂರು ಸುಮಾರು ೨,೧೫೦ ಎಕರೆ ವಿಸ್ತೀರ್ಣ, ೧೪೫ಮೀ. ಉದ್ದ ಮತ್ತು ೨೩೦ ಮೀ. ಎತ್ತರದ ಕಟ್ಟೆಯನ್ನು ಒಳಗೊಂಡಿದೆ. ಸುತ್ತಲಿನ ಬೆಟ್ಟಗಳಿಂದ
ಬರುವ ಮಳೆಯ ನೀರು ಮತ್ತು ನದಿಯಿಂದ ತುಂಬುತ್ತದೆ. ಕೆರೆಯ ಪರಿಸರವು ಪಿಕ್‌ನಿಕ್, ವಿಶ್ರಾಂತಿ ಮತ್ತು ಬೋಟಿಂಗ್‌ಗೆ ಉತ್ತಮ ವಾಗಿದೆ. ಇಲ್ಲಿರುವ ಶ್ರೀರಾಮಾನುಜಾಚಾರ್ಯರ ಪ್ರತಿಮೆ ಪ್ರಮುಖ ಆಕರ್ಷಣೆಯಾಗಿದೆ.





