Mysore
20
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮುಳ್ಳಯ್ಯನಗಿರಿಯ ಮೋಹಕತೆ 

ಗಿರೀಶ್ ಹುಣಸೂರು

ಪಶ್ಚಿಮಘಟ್ಟಗಳ ಚಂದ್ರ ದ್ರೋಣ ಪರ್ವತ ಸಾಲಿನಲ್ಲಿ ಬರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ರಮಣೀಯ ಗಿರಿಧಾಮದಲ್ಲಿರುವ ಸಮುದ್ರಮಟ್ಟಕ್ಕಿಂತ ೧,೯೩೦ ಮೀಟರ್ (೬,೩೧೭ ಅಡಿ) ಎತ್ತರವಿರುವ ಕರ್ನಾಟಕದ ಸರ್ವಋತು ಚಾರಣ ಕೇಂದ್ರ ಅತ್ಯುನ್ನತ ಶಿಖರ ಮುಳ್ಳಯ್ಯನಗಿರಿ ಮುಂಗಾರು ಹಂಗಾಮಿನಲ್ಲಿ ಅಚ್ಚ ಹಸಿರು ಹೊದ್ದು ಪರಿಸರ ಪ್ರೇಮಿ ಪ್ರವಾಸಿಗರು ಹಾಗೂ ಚಾರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಮುಳ್ಳಯ್ಯನಗಿರಿ ತುತ್ತ ತುದಿ (೨೫ ಕಿ.ಮೀ): ಮುಳ್ಳಯ್ಯನಗಿರಿ ಶಿಖರವು ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಯ ನಡುವಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲ್ಪಟ್ಟಿದ್ದು, ಕರ್ನಾಟಕದ ಅತ್ಯುತ್ತಮ ಚಾರಣ (ಟ್ರಕ್ಕಿಂಗ್) ತಾಣಗಳಲ್ಲಿ ಒಂದಾಗಿದೆ. ಶಿಖರದ ಮೇಲಿನ ಸಣ್ಣ ಗುಡಿಯಿಂದ ಗಿರಿಗೆ ಈ ಹೆಸರು ಬಂದಿದ್ದು, ಮುಳ್ಳಪ್ಪಸ್ವಾಮಿ ಎಂಬ ಋಷಿ ಮುನಿ ಶಿಖರದ ಬಳಿಯ ಗುಹೆಯಲ್ಲಿ ಧ್ಯಾನ ಮಾಡಿದ್ದರೆಂಬ ಪ್ರತೀತಿ ಇದೆ.

ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವೆನಿಸಿದು , ಕರ್ನಾಟಕದ ದಕ್ಷಿಣ ಭಾಗದಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಹೆಚ್ಚಿನ ಚಾರಣವಿಲ್ಲದೇ ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ವಾಹನ ನಿಲುಗಡೆ ಸ್ಥಳದಿಂದ ೫೦೦ ಮೆಟ್ಟಿಲುಗಳನ್ನು ಒಳಗೊಂಡ ಸಣ್ಣ ಚಾರಣದ ಮೂಲಕ ಮುಳ್ಳಯ್ಯನಗಿರಿ ಶಿಖರವನ್ನು ತಲುಪಬಹುದು.

ಹಸಿರು ಹೊದ್ದ ಸಾಲು ಸಾಲು ಪರ್ವತ ಶ್ರೇಣಿಗಳು, ತಣ್ಣನೆಯ ಕುಳಿರ್ಗಾಳಿ, ಮೈನವಿರೇಳಿಸುವ ಸೂರ್ಯಾಸ್ತವನ್ನು ಇಲ್ಲಿಂದ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:-ಐತಿಹಾಸಿಕ ಮಡಿಕೇರಿ ದಸರಾಗೆ ಅದ್ಧೂರಿ ತೆರೆ

ಸರ್ವಋತು ಪ್ರವಾಸಿ ತಾಣ:  ಮುಳ್ಳಯ್ಯನಗಿರಿ ಶಿಖರಕ್ಕೆ ವರ್ಷದ ಎಲ್ಲಾ ದಿನಗಳಲ್ಲೂ ಭೇಟಿ ನೀಡಬಹುದು. ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಶಿವನ ಸಣ್ಣ ದೇವಾಲಯವಿದೆ. ಗಿರಿಗೆ ಹೋಗುವ ದಾರಿಯಲ್ಲಿ ಸೀತಾಳಯ್ಯನ ಬೆಟ್ಟ ಮತ್ತು ದೇವಸ್ಥಾನವಿದೆ. ಮುಳ್ಳಯ್ಯನಗಿರಿಯಿಂದ ೨೬ ಕಿ ಮೀ ದೂರದಲ್ಲಿರುವ ಬಾಬಾಬುಡನ್‌ಗಿರಿ ಮತ್ತು ಮಾಣಿಕ್ಯಧಾರಾ ಜಲಪಾತಗಳು ನೋಡಲೇಬೇಕಾದ ತಾಣಗಳಾಗಿವೆ. ಮುಳ್ಳಯ್ಯನಗಿರಿಗೆ ಹೋಗುವ ಪ್ರವಾಸಿಗರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬೇಕು. ನಿತ್ಯ ೬೦೦ ವಾಹನಗಳಿಗೆ ಮಾತ್ರ ಅವಕಾಶ ನೀಡುವ ಯೋಜನೆಯನ್ನು ರೂಪಿಸಲಾಗಿದ್ದು, ಸೆಪ್ಟೆಂಬರ್ ೧ರಿಂದ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿ ದಿನಾಂಕ ಮತ್ತು ಸಮಯದ ಸ್ಲಾಟ್ ನಿಗದಿಪಡಿಸಿಕೊಂಡು ಭೇಟಿ ನೀಡಬಹುದಾಗಿದೆ.

ವಸತಿ ಸೌಲಭ್ಯ:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಕೈಗೆಟುಕುವ ದರದಲ್ಲಿ ಹೋಂ ಸ್ಟೇಗಳು, ಚಿಕ್ಕಮಗಳೂರು ಪಟ್ಟಣದಲ್ಲಿ ಹೋಟೆಲ್, ವಸತಿ ಗೃಹಗಳು ಲಭ್ಯವಿವೆ.

ತಲುಪುವುದು ಹೇಗೆ ?:  ಮುಳ್ಳಯ್ಯನಗಿರಿಯಿಂದ ೬೦ ಕಿ.ಮೀ ದೂರದಲ್ಲಿರುವ ಕಡೂರು ಜಂಕ್ಷನ್ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಚಿಕ್ಕಮಗಳೂರಿನಿಂದ ಬಸ್‌ಗಳು, ಟ್ಯಾಕ್ಸಿಗಳೂ ಇವೆ. ಚಿಕ್ಕಮಗಳೂರು ಅಥವಾ ಕಡೂರಿನಿಂದ ಟ್ಯಾಕ್ಸಿ ಬಾಡಿಗೆಗೆ ಪಡೆದು ಮುಳ್ಳಯ್ಯನಗಿರಿ ಶಿಖರವನ್ನು ತಲುಪಬಹುದು. ಕೊನೆಯ ಕೆಲವು ಕಿ.ಮೀ ರಸ್ತೆ ಅತ್ಯಂತ ಕಿರಿದಾಗಿದ್ದು, ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.

ಪ್ಲಾಸ್ಟಿಕ್ ನಿಷೇಧ:  ಚಿಕ್ಕಮಗಳೂರು ತಾಲ್ಲೂಕು ಮುಳ್ಳಯ್ಯನಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ಉಪಯೋಗಿಸಿ ಎಸೆಯುವಂತಹ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಚಿಪ್ಸ್ ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ಗುಟ್ಕಾ ಪ್ಯಾಕೆಟ್‌ಗಳು ಹಾಗೂ ಇದೇ ರೀತಿಯ ತಿನ್ನಲು ಯೋಗ್ಯವೆಂದು ಪ್ಯಾಕ್ ಮಾಡಿರುವಂತಹ ಇತರೆ ಪ್ಲಾಸ್ಟಿಕ್ ಪ್ಯಾಕೆಟ್‌ಗಳ ಕೊಂಡೊಯ್ಯುವಿಕೆ ಬಳಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ೨೦೨೫ರ ಅಕ್ಟೋಬರ್ ೨೦ ಅಥವಾ ಮುಂದಿನ ಆದೇಶ ಆದೇಶದವರೆಗೆ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

ಬಾಬಾ ಬುಡನ್‌ಗಿರಿ:  ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಬಾಬಾ ಬುಡನ್‌ಗಿರಿ ಕೂಡ ಒಂದು. ಟ್ರಕ್ಕಿಂಗ್ ಪ್ರಿಯರಿಗೆ ಇದೊಂದು ಸ್ವರ್ಗ. ಮುಳ್ಳಯ್ಯನಗಿರಿಗೆ ಹೋದಾಗ ತಪ್ಪದೇ ಭೇಟಿ ನೀಡಲೇ ಬೇಕಾದ ಸ್ಥಳವಿದು. ಹಿಂದೂ-ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವೂ ಹೌದು. ಸ್ನೇಹಿತರೊಂದಿಗೆ ಸಾಹಸಮಯ ಪ್ರವಾಸ ಮಾಡಲು ಬಯಸುವವರು ಬಾಬಾಬುಡನ್‌ಗಿರಿಗೆ ತಪ್ಪದೇ ಭೇಟಿ ನೀಡುತ್ತಾರೆ.

ಮಾಣಿಕ್ಯಧಾರಾ ಜಲಪಾತ:  ಮುಳ್ಳಯ್ಯನಗಿರಿ ಶಿಖರಕ್ಕೆ ಹೋದಾಗ ತಪ್ಪದೇ ಭೇಟಿ ನೀಡಬೇಕಾದ ಮತ್ತೊಂದು ಪ್ರಮುಖ ತಾಣ ಮಾಣಿಕ್ಯಧಾರಾ. ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುವ ಈ ಜಲಪಾತವನ್ನು ನೆಲ್ಲಿಕಾಯಿ ತೀರ್ಥ ಎಂದೂ ಕರೆಯಲಾಗುತ್ತದೆ. ಪಿಕ್ನಿಕ್ ಮತ್ತು ಛಾಯಾಗ್ರಹಣಕ್ಕೆ ಈ ಸ್ಥಳ ಹೇಳಿ ಮಾಡಿಸಿದಂತಿದೆ.

ರಾಕ್ ಗಾರ್ಡನ್:  ಮುಳ್ಳಯ್ಯನಗಿರಿ ಶಿಖರಕ್ಕೆ ಪ್ರವಾಸ ಹೊರಟವರ ಪಟ್ಟಿಯಲ್ಲಿ ರಾಕ್ ಗಾರ್ಡನ್ ಇರಲೇಬೇಕು. ಪರಿಸರ ಪ್ರೇಮಿಗಳಿಗೆ ಇಂದು ಪಿಕ್ನಿಕ್ ತಾಣವಾಗಿದೆ. ಹಲವಾರು ಬಗೆಯ ಹೂವುಗಳಿರುವ ಈ ಉದ್ಯಾನವನ್ನು ಕಲ್ಲಿನ ಮಾರ್ಗಗಳಿಂದ ಅಲಂಕರಿಸಿರುವುದರಿಂದ ರಾಕ್ ಗಾರ್ಡನ್ ಎಂದು ಕರೆಯಲಾಗಿದೆ. ಮುಳ್ಳಯ್ಯನಗಿರಿ ಶಿಖರದಲ್ಲಿ ಸಂಜೆಯನ್ನು ಕಳೆಯುತ್ತಾ ವಿರಮಿಸಲು ಹೇಳಿ ಮಾಡಿಸಿದ ತಾಣವಿದು.

ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ:  ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಗೆ ಭೇಟಿ ನೀಡುವ ಪ್ರವಾಸಿಗರು, ಚಾರಣ ಪ್ರಿಯರು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡು ಹೋಗಬೇಕು. ಸೆಪ್ಟೆಂಬರ್ ೧ರಿಂದ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ಬಂದಿದೆ. ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರಾ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದರಿಂದ ವಾಹನ ಮತ್ತು ವಾಸಿಗರ ದಟ್ಟಣೆಯನ್ನು ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು, ಮುಳ್ಳಯ್ಯನಗಿರಿ ಶಿಖರ ಮತ್ತು ಇನಾಮ್ ದತ್ತಾತ್ರೇಯ ಪೀಠ ಆನ್‌ಲೈನ್ ಟೋಲ್ ಬುಕ್ಕಿಂಗ್ ಪೋರ್ಟಲ್‌ನಲ್ಲಿ ಹೆಸರು, ಮೊಬೈಲ್ ನಂಬರ್, ಸ್ಥಳ, ದಿನಾಂಕ, ವಾಹನ ಮಾದರಿ (ಕಾರು, ತೂ-ನ್, ಟೆಂಪೋ ಟ್ರಾವೆಲರ್, ಬೈಕ್), ವಾಹನ ಸಂಖ್ಯೆ, ಸಮಯ ಸ್ಲಾಟ್ ಆಯ್ಕೆ ಮಾಡಿ ಶುಲ್ಕ ಪಾವತಿಸಿದರೆ ಲಭ್ಯವಿರುವ ಸ್ಲಾಟ್‌ಗಳಲ್ಲಿ ಪ್ರವೇಶಾವಕಾಶ ದೊರೆಯಲಿದೆ. ಚಿಕ್ಕಮಗಳೂರು ಜಿಲ್ಲಾಡಳಿತದ ವೆಬ್‌ಸೈಟ್ ಲಿಂಕ್… https://chikkamagaluru.nic.in/en/tourism ಬಳಸಿ ಶುಲ್ಕ ಪಾವತಿಸಿ, ದಿನಾಂಕ ಮತ್ತು ಸಮಯವನ್ನು ಮೊದಲೇ ನಿಗದಿಪಡಿಸಿಕೊಂಡು ತೆರಳಬೇಕು. ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಮೊದಲಾರ್ಧ ಹಾಗೂ ಮಧ್ಯಾಹ್ನ ೧ ರಿಂದ ಸಂಜೆ ೬ ಗಂಟೆವರೆಗೆ ದ್ವಿತೀಯಾರ್ಧದಲ್ಲಿ ಪ್ರವೇಶಾವಕಾಶ ನೀಡಲಾಗುತ್ತದೆ.

Tags:
error: Content is protected !!