Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕಾವೇರಿ ತಾಯಿ ಜನಿಸಿದ ತಾಣ

* ಅ.೧೭ರಂದು ಭೇಟಿ ನೀಡಿದರೆ ತೀರ್ಥೋದ್ಭವ ಕಣ್ತುಂಬಿಕೊಳ್ಳುವ ಅವಕಾಶ!

* ಭಕ್ತರ ಪವಿತ್ರ ಧಾರ್ಮಿಕ ಕೇಂದ್ರ ತೀರ್ಥಯಾತ್ರೆಗೆ ಇದು ಸಕಾಲ

ಕೊಡಗಿನ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಪವಿತ್ರ ತಾಣಗಳಲ್ಲಿ ತಲಕಾವೇರಿ ಕೂಡ ಒಂದು. ಅದರಲ್ಲೂ ಅಕ್ಟೋಬರ್ ನಲ್ಲಿ ನೀವು ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿದರೆ ತೀರ್ಥೋದ್ಭವದ ಕ್ಷಣಕ್ಕೂ ಸಾಕ್ಷಿಯಾಗಬಹುದು.

ಹೌದು. ಕನ್ನಡ ನಾಡಿನ ಜೀವನದಿ ತಾಯಿ ಕಾವೇರಿ ಪ್ರತಿವರ್ಷ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆ. ಆ ಕ್ಷಣಕ್ಕೆ ಸಾಕಷ್ಟು ಜನ ಸಾಕ್ಷಿಯಾಗುತ್ತಾರೆ. ಅಂತೆಯೇ, ಈ ಬಾರಿ ಅಕ್ಟೋಬರ್ ೧೭ರಂದು ಮಕರ ಲಗ್ನದಲ್ಲಿ ತಲಕಾವೇರಿಯಲ್ಲಿ ಮಧ್ಯಾಹ್ನ ೧.೪೪ ಗಂಟೆಗೆ ತೀರ್ಥೋದ್ಭವವಾಗಲಿದೆ. ಈ ಸಂದರ್ಭ ಅಲ್ಲಿ ಹಬ್ಬದ ವಾತಾವರಣ ಕಂಡುಬರುತ್ತದೆ. ಎಲ್ಲರೂ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುವ ಕಾವೇರಿಯ ದರ್ಶನ ಪಡೆದು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.

ಕಾವೇರಿ ಜಲವನ್ನು ತೀರ್ಥೋದ್ಭವದ ಸಂದರ್ಭದಲ್ಲಿ ಮಾತ್ರ ಸೇವಿಸದೆ ಇಡೀ ವರ್ಷ ಮನೆಗಳಲ್ಲಿ ಸಂಗ್ರಹಿಸಿಡುತ್ತಾರೆ. ಇದನ್ನು ಪವಿತ್ರ ಕಾರ್ಯಗಳಿಗೆ ಬಳಸುತ್ತಾರೆ. ಕಾಯಿಲೆ ಅಥವಾ ಇನ್ನಿತರ ಸಮಸ್ಯೆ ಕಂಡುಬಂದಾಗ ತೀರ್ಥ ಸೇವಿಸಿದರೆ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಅಲ್ಲದೆ, ಪ್ರಾಣ ಹೋಗುವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ಕುಡಿಸಿ ದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಇದನ್ನು ಓದಿ: ಕಾಂತಾರ ಚಾಪ್ಟರ್‌ 1 ಟ್ರೇಲರ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಕಾವೇರಿ ತೀರ್ಥೋದ್ಭವದ ಮಾರನೆಯ ದಿನ ಮನೆಮನೆಗಳಲ್ಲಿ ತೀರ್ಥವನ್ನಿಟ್ಟು ಪೂಜಿಸುತ್ತಾರೆ. ಭಾಗಮಂಡಲ ಸಮೀಪದ ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿರುವ ತಲಕಾವೇರಿ ಕ್ಷೇತ್ರ ಸಮುದ್ರ ಮಟ್ಟದಿಂದ ೧,೨೭೬ ಮೀಟರ್ ಎತ್ತರದಲ್ಲಿದೆ. ಈ ಪವಿತ್ರ ದೇವಾಲಯ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ೪೫ ಕಿಮೀ ದೂರದಲ್ಲಿದೆ. ಕಾಫಿ ತೋಟ ಹಾಗೂ ಕಾಡಿನ ಸುಂದರ ರಸ್ತೆಯ ಮೂಲಕ ಸಾಗಿದರೆ ಈ ಧಾರ್ಮಿಕ ಕೇಂದ್ರವನ್ನು ತಲುಪಬಹುದು. ಬ್ರಹ್ಮಗಿರಿ ಬೆಟ್ಟಗಳ ರುದ್ರರಮಣೀಯ ನೋಟ, ಇಲ್ಲಿನ ಸುಂದರ ಭೂದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇನ್ನು ತಲಕಾವೇರಿಗೆ ಹೋಗುವ ಮುನ್ನ ಸಿಗುವ ಭಗಂಡೇಶ್ವರ ದೇವಸ್ಥಾನ ಕೂಡ ಕೊಡಗಿನಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರ. ತಲಕಾವೇರಿಗೆ ಹೋಗುವವರು ಭಾಗಮಂಡಲದಲ್ಲಿ ಭಗಂಡೇಶ್ವರ ದೇವರ ದರ್ಶನ ಪಡೆದು ಬಳಿಕ ತಮ್ಮ ಪ್ರಯಾಣ ಮುಂದುವರಿಸುತ್ತಾರೆ. ಭಾಗಮಂಡಲದಿಂದ ತಲಕಾವೇರಿ ಸುಮಾರು ಎಂಟು ಕಿಲೋ ಮೀಟರ್ ದೂರದಲ್ಲಿದೆ. ಬಲು ಸುಂದರವಾಗಿರುವ ಈ ದೇವಸ್ಥಾನ ಮಡಿಕೇರಿಯಿಂದ ಸುಮಾರು ೩೩ ಕಿಮೀ ದೂರದಲ್ಲಿದೆ. ಕೇರಳ ಶೈಲಿಯ ವಾಸ್ತುಶಿಲ್ಪವನ್ನು ಇಲ್ಲಿ ಗಮನಿಸಬಹುದು. ಶಿವ, ಸುಬ್ರಹ್ಮಣ್ಯ, ಮಹಾವಿಷ್ಣು ಮತ್ತು ಗಣಪತಿಯ ಸನ್ನಿಧಿ ಇಲ್ಲಿದೆ.

ತಲಕಾವೇರಿಗೆ ಹೋಗುವ ಮುನ್ನ ಸಾಕಷ್ಟು ಯಾತ್ರಾರ್ಥಿಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಕಾವೇರಿ ಇಲ್ಲಿ ತನ್ನ ಎರಡು ಉಪನದಿಗಳಾದ ಕನ್ನಿಕೆ ಮತ್ತು ಪೌರಾಣಿಕ ಸುಜ್ಯೋತಿ ನದಿಯನ್ನು ಕೂಡುತ್ತದೆ. ಭಗಂಡೇಶ್ವರ ದೇವಾಲಯದ ಸನಿಹದಲ್ಲಿಯೇ ತ್ರಿವೇಣಿ ಸಂಗಮವನ್ನೂ ಭಕ್ತರು ನೋಡಬಹುದು.

ಪಾವಿತ್ರ್ಯತೆ ಕಾಪಾಡಲು ಮರೆಯದಿರಿ..!: ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳಾಗಿ ಗುರುತಿಸಿಕೊಂಡಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರು ಶುಚಿರ್ಭೂತರಾಗಿರುತ್ತಾರೆ. ಶ್ರೀಕ್ಷೇತ್ರಗಳಿಗೆ ತೆರಳುವುದಕ್ಕೂ ಮೊದಲು ಅನೇಕ ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ಸಾಂಪ್ರದಾಯಿಕ ವಸ್ತ್ರಗಳು ಅಥವಾ ಸಭ್ಯ ಬಟ್ಟೆಗಳನ್ನೇ ಧರಿಸಲಾಗುತ್ತದೆ. ಹೀಗಾಗಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪಿನೊಂದಿಗೆ ದೇವಾಲಯದ ಪಾವಿತ್ರ್ಯತೆ ಕಾಪಾಡಲು ಭಕ್ತರು ಮರೆಯಬಾರದು. ಇದು ಪ್ರವಾಸಿತಾಣವಲ್ಲ, ಬದಲಾಗಿ ಧಾರ್ಮಿಕ ಕೇಂದ್ರ ಎಂಬುದನ್ನು ಇಲ್ಲಿಗೆ ಭೇಟಿ ನೀಡುವಪ್ರತಿಯೊಬ್ಬರೂ  ಮನಗಾಣಬೇಕಿದೆ.

ಇದನ್ನು ಓದಿ : 2028ಕ್ಕೂ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶ್ವಾಸ

” ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಶ್ರೀಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜರುಗುವ ಪವಿತ್ರ ತೀಥೋದ್ಭವಕ್ಕೂ ಅದರದ್ದೇ ಆದ ಮಹತ್ವವಿದೆ. ನಂತರದ ಒಂದು ತಿಂಗಳು ತುಲಾ ಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲೂ ಕೊಡಗಿನವರು ಮಾತ್ರವಲ್ಲದೆ ಪಕ್ಕದ ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಹಾಗೂ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ತುಲಾ ಮಾಸದಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ತೀರ್ಥಸ್ನಾನ ಮಾಡಿದರೆಗಂಗಾ ನದಿಯಲ್ಲಿ ಸ್ನಾನ ಮಾಡಿದಷ್ಟೇ ಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇದರ ಜತೆಗೆ ವರ್ಷಪೂರ್ತಿ ನಡೆಯುವ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಶ್ರೀಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ”

” ಪ್ರಕೃತಿಯ ಮಧ್ಯೆ ಇರುವ ಭವ್ಯವಾದ ಸ್ಥಳ:  ತಲಕಾವೇರಿ ತೀರ್ಥಯಾತ್ರೆಯ ಸ್ಥಳ ಮಾತ್ರವಲ್ಲದೆ, ಹಸಿರು ಪ್ರಕೃತಿಯ ಮಧ್ಯೆ ಇರುವ ಒಂದು ಭವ್ಯವಾದ ಸ್ಥಳವಾಗಿದೆ. ಈ ದೇವಾಲಯವು ಬ್ರಹ್ಮಗಿರಿ ಬೆಟ್ಟಗಳ ಮಡಿಲಲ್ಲಿದೆ. ಹಸಿರು ಹುಲ್ಲುಗಾವಲುಗಳನ್ನು ಹೊಂದಿರುವ ಬೆಟ್ಟಗಳ ಅನಿಯಮಿತ ಪದರವು ನಿಜವಾಗಿಯೂ ಆಕರ್ಷಕವಾಗಿದೆ. ಪ್ರಕೃತಿ ಪ್ರಿಯರಿಗೆ ಹಬ್ಬವನ್ನು ನೀಡುವ ಬ್ರಹ್ಮಗಿರಿ ಬೆಟ್ಟದ ಶಿಖರದ ಸೌಂದರ್ಯ ವರ್ಣಿಸಲಸಾಧ್ಯ.”

-ನವೀನ್ ಡಿಸೋಜ

Tags:
error: Content is protected !!