Mysore
19
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪ್ರವಾಸೋದ್ಯಮಕ್ಕೆ ಮುಂಗಾರು ಹಂಗಾಮ 

Monsoon season for tourism

ಗಿರೀಶ್ ಹುಣಸೂರು

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ… ‘ಮುಂಗಾರು ಮಳೆ’ ಸಿನಿಮಾದ ಈ ಸಾಲುಗಳು ಮುಂಗಾರು ಮಳೆ ಸೊಬಗನ್ನು ಕಣ್ಣ ಮುಂದೆ ತರುತ್ತವೆ. ಸದ್ಯ ವಾರದ ಹಿಂದೆ ಬಿಟ್ಟೂ ಬಿಡದೆ ಸುರಿದ ಮಳೆ ಕೊಂಚ ಬಿಡುವು ನೀಡಿದೆ. ಆದರೆ, ವಾರಗಳ ಕಾಲ ಸುರಿದ ಮಳೆ ಕಳೆದ ಎರಡು ತಿಂಗಳ ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ರಾಜ್ಯದ ಜನ-ವನಗಳಿಗೆ ಜೀವಕಳೆ ತಂದಿದೆ. ಬೇಸಿಗೆ ಬಿಸಿಲಿಗೆ ಒಣಗಿ ನಿಂತಿದ್ದ ಬೆಟ್ಟ-ಗುಡ್ಡಗಳಲ್ಲಿನ ಮರ-ಗಿಡಗಳು ಮತ್ತೆ ಹಸಿರುಟ್ಟು ಕಂಗೊಳಿಸುತ್ತಿವೆ.

ಮುಂಗಾರಿನ (ಮಾನ್ಸೂನ್) ಸಮಯದಲ್ಲಿ ಪ್ರವಾಸೋದ್ಯಮದ ಹಂಗಾಮವೇ ಶುರುವಾಗಿದೆ. ಹಚ್ಚ ಹಸಿರಿನ ಪ್ರಕೃತಿ, ಮಂಜು ಮುಸುಕಿದ ಬೆಟ್ಟಗಳು, ದಟ್ಟ ಕಾನನಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಮೈದುಂಬಿ ಹರಿಯುವ ನದಿಗಳು, ಸುಂದರ ಕಡಲ ತೀರಗಳು, ಅಪರೂಪದ ಜೀವ ವೈವಿಧ್ಯ, ಸಸ್ಯಸಂಪತ್ತು ಒಳಗೊಂಡ ಸುಂದರ ತಾಣಗಳಿಗೆ ಕರ್ನಾಟಕ ಹೆಸರುವಾಸಿ.

ಈಗ ಯಾವುದೇ ಸಮಯದಲ್ಲಾಗಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕಾತರರಾಗಿರುತ್ತಾರೆ. ಅದರಲ್ಲೂ ಮಾನ್ಸೂನ್ ಸಮಯದಲ್ಲಿ ರಾಜ್ಯದ ಪಶ್ಚಿಮಘಟ್ಟ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣ. ಪಶ್ಚಿಮಘಟ್ಟದಲ್ಲಿನ ಅಗಾಧವಾದ ಹಸಿರು ಮತ್ತು ವಿಸ್ಮಯಕಾರಿ ಸೌಂದರ್ಯವು ಪ್ರವಾಸಿಗರಿಗೆ ಹೇಳಿಮಾಡಿಸಿದಂತಿದೆ.

ಪಶ್ಚಿಮಘಟ್ಟ ಶ್ರೇಣಿಯಲ್ಲಿ ಹಸಿರುಟ್ಟ ಕಾನನ, ವಿಶ್ವವಿಖ್ಯಾತ ಜೋಗ ಜಲಪಾತ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಇರುವ ನೂರಾರು ಜಲಪಾತಗಳು ಮೈದುಂಬಿಕೊಂಡು ನಯನ ಮನೋಹರ ದೃಶ್ಯಗಳನ್ನು ಸೃಷ್ಟಿಸುತ್ತಿವೆ. ಮೋಡ ಕವಿದ ವಾತಾವರಣದಲ್ಲಿ ಮುಗಿಲಿಗೆ ಮುತ್ತಿಕ್ಕುತ್ತಿದೆಯೇನೋ ಎಂಬಂತೆ ಕಾಣುವ ಬೆಟ್ಟಗುಡ್ಡಗಳು,ಎತ್ತರದ ಬಂಡೆ, ಬೆಟ್ಟಗಳ ತುದಿಯಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಧಾವಿಸುತ್ತದೆ.

ಮುಂಗಾರು ಮಳೆ ಸೃಷ್ಟಿಸುವ ಜಲಪಾತಗಳ ಝಲಕ್‌ಗೆ ಮನಸೋಲದವರಿಲ್ಲ. ಜಲಪಾತಗಳ ರೌದ್ರ ರಮಣೀಯ, ರೋಮಾಂಚನಕಾರಿ ಜಲಧಾರೆಯ ಒನಪು, ವೈಯ್ಯಾರ, ಜುಳುಜುಳು ನಿನಾದ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಒಂದೊಂದು ಜಲಪಾತಗಳದ್ದೂ ವಿಭಿನ್ನ ಸೊಬಗು. ಕೆಲವು ಜಲಪಾತಗಳಲ್ಲಿ ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲರಾಶಿ ಕಾನನದ ಹಸಿರು ಸಿರಿಯ ನಡುವೆ ಹಾಲ್ನೊರೆಯಂತೆ ಭಾಸವಾದರೆ ಮತ್ತೆ ಕೆಲವು ಜಲಪಾತಗಳು ಅಂಕು ಡೊಂಕಾಗಿ ವೈಯ್ಯಾರದಿಂದ ಹರಿದು ಕಂಗೊಳಿಸಿ, ಭೋರ್ಗರೆದು ಧುಮ್ಮುಕ್ಕುವಾಗ ದಟ್ಟ ಮಂಜು ಆವರಿಸಿಕೊಂಡು ಬೇರೆಯದೆ ಲೋಕದಲ್ಲಿರುವಂತೆ ಭಾಸವಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟ್, ಕೊಡಚಾದ್ರಿ, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್, ಚಂದ್ರದ್ರೋಣ ಪರ್ವತ ಶ್ರೇಣಿ, ಕುದುರೆಮುಖ, ಕೆಮ್ಮಣ್ಣುಗುಂಡಿ, ಕೊಡಗು ಜಿಲ್ಲೆಯ ಕಾಫಿ ತೋಟಗಳ ನಡುವೆ ಸಾಕಷ್ಟು ಜಲಪಾತಗಳು ಜೀವ ತಳೆದು ಕಂಗೊಳಿಸುತ್ತಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಮುಂಗಾರು ಮಳೆಗೆ ನದಿ, ತೊರೆ, ಝರಿ, ಹಳ್ಳಕೊಳ್ಳಗಳು ಮೈದುಂಬಿ ಅಲ್ಲಲ್ಲಿ ಜಲಪಾತಗಳನ್ನು ನಿರ್ಮಿಸಿ ಜಲವೈಭವವನ್ನು ಸೃಷ್ಟಿಸುತ್ತದೆ.

ಪಶ್ಚಿಮಘಟ್ಟ ಶ್ರೇಣಿಯಲ್ಲಿ ವ್ಯಾಪಕ ಮಳೆಯಾಗುವುದರಿಂದ ದಟ್ಟ ಕಾನನದ ನಡುವಿನಿಂದ ಹಾಲ್ನೊರೆಯಂತೆ ಬಳುಕುತ್ತಾ ಸಾಗುವ ಜಲಧಾರೆಗಳು ಪ್ರವಾಸಿಗರ ಮನಸೂರೆಗೊಳ್ಳುತ್ತವೆ. ಮಂಜು ಮುಸುಕಿದ ದಟ್ಟ ಕಾನನದ ನಡುವೆ ಆಗಾಗ್ಗೆ ಮಳೆ ಹನಿಗಳ ಸಿಂಚನದಿಂದಲೇ ಪುಳಕಗೊಳ್ಳುವ ಪ್ರವಾಸಿಗರನ್ನು ಕಾನನದ ನಡುವಿನಿಂದ ಎಲ್ಲೆಲ್ಲಿಂದಲೋ ಬರುವ ಜಲಧಾರೆಯ ವೈಭವಕ್ಕೆ ಸಾಟಿಯೇ ಇಲ್ಲವೇನೋ ಎನಿಸುತ್ತದೆ.

ಶಾಲಾ-ಕಾಲೇಜಿಗೆ ಬೇಸಿಗೆ ರಜೆ ಇದ್ದರೂ ನೆತ್ತಿ ಸುಡುವ ಬಿರು ಬೇಸಿಗೆಯ ತಾಪಕ್ಕೆ ಹೆದರಿ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತಿದ್ದವರನ್ನು ಮುಂಗಾರು ಮಳೆ ಸೃಷ್ಟಿಸಿರುವ ಜಲ ವೈಭವ ಕೈ ಬೀಸಿ ಕರೆಯುತ್ತಿದೆ. ಅಂತೆಯೇ ಇನ್ನೇಕೆ ತಡ ಎನ್ನುತ್ತಾ ರಜಾ ದಿನಗಳು, ವಾರಾಂತ್ಯದ ದಿನಗಳಲ್ಲಿ ಕುಟುಂಬ ಸಮೇತ ಜಲಪಾತಗಳತ್ತ ಧಾವಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬಿಸಿಲಿನ ಬೇಗೆಗೆ ಹೆದರಿ ಪ್ರವಾಸಕ್ಕೆ ಹೋಗದವರುಮತ್ತೆ ಮಳೆ ಆರಂಭವಾದಾಗ ಜಲ ವೈಭವವನ್ನು ಕಣ್ತುಂಬಿಕೊಳ್ಳಲು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಬಹುದು.

ಸ್ಥಳೀಯರ ಸಲಹೆ, ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸದಿರಿ ಜಲಪಾತಗಳ ಬಳಿ ಪೊಲೀಸರು ನಿಗಾ ವಹಿಸಿರುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿರುತ್ತಾರೆ. ಅವರು ನೀಡುವ ಮಾರ್ಗದರ್ಶನ ಹಾಗೂ ಎಚ್ಚರಿಕೆಯನ್ನು ಪ್ರವಾಸಿಗರು ಪಾಲಿಸುವುದು ಒಳಿತು. ಸ್ಥಳೀಯರಿಗೆ ಅಲ್ಲಿನ ಜಾಗಗಳ ಮಾಹಿತಿ ತಿಳಿದಿರುತ್ತದೆ. ಆದ್ದರಿಂದ ಅವರ ಸಲಹೆಗಳನ್ನು ಪ್ರವಾಸಿಗರು ಕೇಳುವುದು ಉತ್ತಮ.

ಮುನ್ನೆಚ್ಚರಿಕೆ ವಹಿಸಿ: ದಟ್ಟ ಕಾನನಗಳ ಹಸಿರ ಸಿರಿ, ಜಲಪಾತಗಳ ಸೌಂದರ್ಯ, ಆಗಾಗ್ಗೆ ಬೀಳುವ ತುಂತುರು ಮಳೆಯ ಮುತ್ತಿನ ಹನಿಗಳನ್ನು ಬೊಗಸೆಗಳಲ್ಲಿ ಹಿಡಿಯುವ ಕಾತರ, ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯಲ್ಲಿ ಮಿಂದೇಳುವ ಹುಮ್ಮಸ್ಸು ಇರುವವರು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ತೀರಾ ಅಗತ್ಯ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತಗಳ ಬಳಿ ಬಂಡೆಗಳು ಹಾಗೂ ನೆಲದಲ್ಲಿ ಪಾಚಿ ಕಟ್ಟಿ ಜಾರುತ್ತಿರುತ್ತದೆ.

ಎಚ್ಚರವಹಿಸದೆ ಜಲಧಾರೆಯ ನಡುವೆ ಮೋಜು-ಮಸ್ತಿಯಲ್ಲಿ ತೊಡಗುವುದು, ಸೆಲಿ ಗೀಳು, ರೀಲ್ಸ್ ಮಾಡುವ ಹುಚ್ಚಾಟಗಳು ಜೀವಕ್ಕೆ ಎರವಾಗಬಹುದು. ಕೊಂಚ ಯಾಮಾರಿದರೂ ಜಲಧಾರೆಯ ಸೌಂದರ್ಯ ಸವಿಯುವ ಬದಲು ಪ್ರಪಾತ ಸೇರಿ ಜೊತೆಯಲ್ಲಿ ಬಂದವರು ಕಣ್ಣೀರು ಹರಿಸುವಂತಾಗುತ್ತದೆ. ಹೀಗಾಗಿ ಅಪಾಯಕ್ಕೆ ಆಹ್ವಾನ ನೀಡದಂತೆ ದೂರದಿಂದಲೇ ಜಲ ವೈಭವವನ್ನು ಕಣ್ತುಂಬಿಕೊಂಡು ಆನಂದಿಸುವುದು ಒಳಿತು. ಜಲಪಾತಗಳ ಆಸುಪಾಸಿನಲ್ಲಿ ಜಿಗಣೆ ಕಾಟ ಸರ್ವೇ ಸಾಮಾನ್ಯ, ಈ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಿರಿ. ನಿಮ್ಮ ನಗರ- ಪಟ್ಟಣದಿಂದ ನೀವು ಹೋಗಬೇಕಿರುವ ಜಲಪಾತಗಳಿಗೆ ಇರುವ ದೂರ, ತಲುಪುವ ಮಾರ್ಗ, ಅಲ್ಲಿ ದೊರೆಯಬಹುದಾದ ನಾಗರಿಕ ಸೌಲಭ್ಯಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು ಪೂರ್ವ ತಯಾರಿಯೊಂದಿಗೆ ಹೋಗಿ ಬಂದರೆ ಪ್ರವಾಸ ಸುಖಕರ.

ಮುಂಗಾರು ಹಂಗಾಮ ಪ್ರಮುಖ ಜಲಪಾತಗಳು

* ಸಾಗರ-ಜೋಗ
* ತೀರ್ಥಹಳ್ಳಿ-ಬರ್ಕಣ ಫಾಲ್ಸ್
* ಚಿಕ್ಕಮಗಳೂರು-ಹೆಬ್ಬೆ ಫಾಲ್ಸ್, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ, ಕಲ್ಹತ್ತಿಗಿರಿ, ಶಾಂತಿ, ಆಗುಂಬೆಯ ಒನಕೆ ಅಬ್ಬಿ, ಜೋಗಿ ಗುಂಡಿ, ಕುದುರೆ ಮುಖದ ಸೂತನಬ್ಬಿ, ಕಡಾಂಬಿ, ಆಲೇಕಾನ್ ಫಾಲ್ಸ್
* ಶಿರಸಿ- ಉಂಚಳ್ಳಿ ಫಾಲ್ಸ್
*ಗೋಕಾಕ-ದಭೆ ಫಾಲ್ಸ್
* ಯಲ್ಲಾಪುರ-ಮಾಗೋಡು, ಶಿವಗಂಗೆ, ಲಾಲ್ಗುಳಿ, ದೇವಕಾರ ಜಲಪಾತ, ಸಾತೋಡಿ ಫಾಲ್ಸ್
* ಸಿದ್ದಾಪುರ-ಮಲೆಮನೆ, ಬುರಡೆ ಜೋಗ
* ದಾಂಡೇಲಿ-ಭಟ್ಟನ ಪಾಲ
* ಹಾವೇರಿ-ಮದಗ
* ಮಳವಳ್ಳಿ-ಶಿವನಸಮುದ್ರ
* ಕೊಡಗು-ಅಬ್ಬಿ ಫಾಲ್ಸ್, ಇರುಪ್ಪು
* ದಕ್ಷಿಣ ಕನ್ನಡ-ದೇವರಗುಂಡಿ
* ಧರ್ಮಸ್ಥಳ- ಅನಡ್ಕ ಅಬ್ಬೆ
* ಸುಬ್ರಹ್ಮಣ್ಯ-ಕುಮಾರಧಾರ
* ಶೃಂಗೇರಿ-ಸಿರಿಮನೆ ಫಾಲ್ಸ್
* ಸಾಲಿಗ್ರಾಮ-ಚುಂಚನಕಟ್ಟೆ

Tags:
error: Content is protected !!