ಪ್ರವಾಸೋದ್ಯಮದ ಭೂಪಟದಲ್ಲಿ ಹೆಸರಾಗಿರುವ ಹೆಗ್ಗಡದೇವನಕೋಟೆಯ ಒಳಹೊಕ್ಕಿದರೆ ಸಾಕು ಪ್ರವಾಸಿಗರಿಗೆ ವನ್ಯಜೀವಿಗಳ ಅರಣ್ಯಪರ್ವ ತನ್ನಿಂತಾನೆ ತೆರೆದುಕೊಳ್ಳುತ್ತದೆ. ದಟ್ಟ, ದುರ್ಗಮ ಕಾನನದ ಚೆಲುವಿನೊಡನೆ ಅತ್ಯಂತ ಸಮೀಪದಿಂದ ವನ್ಯಜೀವಿಗಳನ್ನು ನೋಡಬಹುದಾದ ಅಪೂರ್ವ ತಾಣ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ.
ಮಳೆಗಾಲ ಶುರುವಾಗಿ, ಮಕ್ಕಳಿಗೆ ಶಾಲೆ ಆರಂಭವಾಗುವ ಮುನ್ನ ಒಂದೆರಡು ದಿನಗಳ ಮಟ್ಟಿಗೆ ಕುಟುಂಬ ಸಮೇತ ಪ್ರವಾಸ ಹೋಗಿ ಬರಬೇಕು ಎನ್ನುವವರಿಗೆ ವನ್ಯಜೀವಿ, ಪರಿಸರ ಪ್ರವಾಸ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಹೆಗ್ಗಡೆದೇವನ ಕೋಟೆ ತಾಲ್ಲೂಕು. ನಾಗರ ಹೊಳೆ ಹುಲಿ ಸಂರಕ್ಷಿತ ಅರಣ್ಯವನ್ನು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ಸೊಬಗು. ಅದರಲ್ಲೂ ದೂರದ ಪ್ರವಾಸಿಗರು ಎಚ್.ಡಿ.ಕೋಟೆ ತಾಲ್ಲೂಕಿನ ಸುತ್ತಮುತ್ತ ಇರುವ ಸ್ಥಳಗಳನ್ನು ನೋಡಿ ಆನಂದಿಸಲು ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದು ಸಾಮಾನ್ಯ. ಹಾಗಾದರೆ ಈ ಅಭಯಾರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬಿಟ್ಟರೆ ಬೇರೇನು ಇದೆ ಎಂಬುದನ್ನು ತಿಳಿಯುವ ಕುತೂಹಲ ಇದ್ದರೆ ಒಮ್ಮೆ ಭೇಟಿ ಕೊಟ್ಟು ವೀಕ್ಷಿಸಿದರೆ ಜೀವನ ಸಾರ್ಥಕ ಅನ್ನಿಸುವಷ್ಟರ ಮಟ್ಟಿಗೆ ದಿನ ಕಳೆಯುವುದು ಗ್ಯಾರಂಟಿ.
ಜಿಲ್ಲಾ ಕೇಂದ್ರದಿಂದ ೫೨ ಕಿ.ಮೀ: ಮೈಸೂರು ನಗರದಿಂದ ಹೆಗ್ಗಡದೇವನಕೋಟೆಗೆ ೫೨ ಕಿ.ಮೀ. ಬೆಂಗಳೂರಿನಿಂದ ೧೯೨ ಕಿ.ಮೀ. ದೂರವಿದ್ದು ಇಲ್ಲಿಗೆ ಖಾಸಗಿ ಬಸ್ಸುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಆದರೆ,ಹೆಗ್ಗಡದೇವನಕೋಟೆಯ ಅರಣ್ಯಗರ್ಭದಲ್ಲಿನ ಸುಮಾರು ೨೦-೩೦ ಕಿ.ಮೀ. ಸುತ್ತಳತೆಯಲ್ಲಿರುವ ವಿವಿಧ ಪ್ರವಾಸಿ ತಾಣಗಳನ್ನು ನೋಡಲು ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ.
ಒಂದು ದಿನದ ಪ್ರವಾಸಕ್ಕೆ ಹೋಗಿ ಬರುವವರಾದರೆ ಜೊತೆಯಲ್ಲಿ ಊಟ-ತಿಂಡಿ ತೆಗೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಈ ಕಾಡಿನೊಳಗೆ ಹಸಿವಾದರೆ ತಿನ್ನಲು ಯಾವುದೇ ಆಹಾರ ಪದಾರ್ಥಗಳು ಸಿಗಲ್ಲ. ಸಿಕ್ಕರೂ ತುಂಬಾ ದುಬಾರಿಯಾಗಿ ಕೈಸುಡಲಿದೆ.
ಏನೇನು ವ್ಯವಸ್ಥೆ?: ವಸತಿಗಾಗಿ ಇಲ್ಲಿ ಸರ್ಕಾರಿ ಸ್ವಾಮ್ಯದ ಕಾರಾಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸೇರಿದಂತೆ ಕಪಿಲ ವೈಲ್ಡರ್‌ನೆಷ್ ರಿಟ್ರೇಟ್, ಬುಷ್‌ಬೆಟ್ಟ ಹಾಲಿಡೇ ವೈಲ್ಡ್ ಲೈಫ್, ಕಬಿನಿ ರಿವರ್ ಲಾಡ್ಜ್, ವಾಟರ್‌ವುಡ್ಸ್, ಸೋಗಳ್ಳಿಯ ಕಬಿನಿ ಲೇಕ್ ವ್ಯೂ ರೆಸಾರ್ಟ್, ವೀರನಹೊಸಹಳ್ಳಿಯ ದಿ ಕಿಂಗ್ ಸ್ಯಾಕ್ಚುರಿ ಮುಂತಾದ ಜಂಗಲ್ ರೆಸಾರ್ಟ್ಸ್‌ಗಳಿವೆ. ಅರಣ್ಯ ಇಲಾಖೆಯ ವಸತಿ ಗೃಹಗಳು ಹಾಗೂ ಡಾರ್ಮೆಂಟರಿಗಳೂ ಉಂಟು. ಇವುಗಳಲ್ಲಿ ದಿನವೊಂದಕ್ಕೆ ಒಬ್ಬರಿಗೆ ಊಟ-ತಿಂಡಿ, ವಸತಿ, ವನ್ಯಜೀವಿ ವೀಕ್ಷಣೆಯ ಜೀಪ್ ಸಫಾರಿ, ಆನೆ ಸವಾರಿ, ದೋಣಿ ವಿಹಾರ ಎಲ್ಲವೂ ಸೇರಿ ಕನಿಷ್ಠ ಐದಾರು ಸಾವಿರರೂ.ಗಳಿರುತ್ತದೆ. ದಿನವೊಂದಕ್ಕೆ ೨,೦೦೦ ರೂ.ಗಳ ಬಾಡಿಗೆಯುಳ್ಳ ಸುಂಕದಕಟ್ಟೆ ಗೆಸ್ಟ್‌ಹೌಸ್‌ನಂತಹ ಜಂಗಲ್ ರೆಸಾರ್ಟ್‌ಗಳು, ಟೆಂಟ್‌ಹೌಸ್‌ಗಳು, ಕಾಟೇಜ್‌ಗಳೂ ದೊರೆಯುವುದುಂಟು.
ಅರಣ್ಯ ಸಿರಿ, ವನ್ಯಜೀವಿಗಳ ತಾಣ: ಇಡೀ ಏಷ್ಯಾ ಖಂಡದಲ್ಲಿಯೇ ಹೆಚ್ಚು ಆನೆಗಳನ್ನು ಹೊಂದಿರುವ ಮತ್ತು ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಹಂದಿ, ಮುಳ್ಳುಹಂದಿ, ಮೊಸಳೆ, ಜಿಂಕೆ, ನವಿಲು, ಸಾರಂಗ ಮುಂತಾದ ವನ್ಯಜೀವಿಗಳಿಂದ ಸಮೃದ್ಧವಾಗಿದೆ. ತೇಗ, ಶ್ರೀಗಂಧ, ಬೀಟೆ, ಹೊನ್ನೆ, ಬಿಲ್ವಾರ ಮುಂತಾದ ಬೆಲೆಬಾಳುವ ಸಸ್ಯ ಸಂಪತ್ತಿದೆ. ಒಂದೆಡೆ ಕಬಿನಿ, ನುಗು, ಹೆಬ್ಬಾಳ, ತಾರಕ ಜಲಾಶಯಗಳ ಜಲರಾಶಿ, ಮತ್ತೊಂದೆಡೆ ದಟ್ಟಡವಿಯಿಂದ ಕೂಡಿದೆ. ವರನಟ ಡಾ.ರಾಜ್‌ಕುಮಾರ್ ಮತ್ತು ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೋಡಿ ಅಭಿನಯದ ‘ಗಂಧದಗುಡಿ’ ಚಲನಚಿತ್ರವೊಂದನ್ನು ನೋಡಿದರೆ ಸಾಕು ಹೆಗ್ಗಡದೇವನ ಕೋಟೆಯ ಅರಣ್ಯದ ಸಿರಿಯನ್ನು ಅರಿಯಬಹುದು.ಇಂಥ ಅದೆಷ್ಟೋ ವಿವಿಧ ಭಾಷೆಗಳ ಚಲನಚಿತ್ರಗಳು, ಕಥೆ-ಕಾದಂಬರಿಗಳು, ನಾಟಕ- ರೂಪಕಗಳು ಹೆಗ್ಗಡದೇವನಕೋಟೆಯ ಅಭಯಾರಣ್ಯದಲ್ಲಿ ಅರಳಿವೆ.
ಆನೆಗಳ ಪಳಗಿಸುವ ಖೆಡ್ಡಾ: ಮಹಾರಾಜರ ಕಾಲದಲ್ಲಿ ಹಾಗೂ ಆನಂತರ ೧೯೭೨ರವರೆವಿಗೂ ಆನೆಗಳನ್ನು ಕೆಡಹಿ ಖೆಡ್ಡಾಕ್ಕೆ ಮೂಲಕ ಪಳಗಿಸುವ ಕಾರ್ಯಾಚರಣೆಗೆ ಹೆಸರಾಗಿದ್ದ ‘ಕಾಕನಕೋಟೆ’ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪಳಗಿದ ಆನೆಗಳನ್ನು ಕರೆತರುವ ಕಾಡಿನ ಹಾಡಿ ‘ಬಳ್ಳೆ’ ಯಾಗಿದೆ.
ಪುರಾತನ ಕಾಲದ ಶ್ರೀ ವರದರಾಜಸ್ವಾಮಿ ದೇವಸ್ಥಾನ, ಶ್ರೀರಾಮಾನುಜಾಚಾರ್ಯರು ಕಟ್ಟಿಸಿದರೆಂಬ ಪ್ರತೀತಿಯುಳ್ಳ ಕೆ.ಬೆಳತ್ತೂರಿನ ಶ್ರೀ ಲಕ್ಷಿ ನಾರಾಯಣ ದೇವಾಲಯ, ಕಪಿಲಾ ನದಿದಂಡೆಯ ಮೇಲಿರುವ ರಾಜರಾಜ ಚೋಳ ನಿರ್ಮಿಸಿದನೆಂದು ಹೇಳಲಾಗುವ ಶ್ರೀರಾಮಲಿಂಗೇಶ್ವರ ದೇಗುಲ, ಶ್ರೀ ಮಹದೇಶ್ವರಸ್ವಾಮಿ ನೆಲೆಸಿರುವ ಸುಪ್ರಸಿದ್ಧ ದ್ವೀಪ ಕ್ಷೇತ್ರವಾದ ‘ಭೀಮನಕೊಲ್ಲಿ ಕ್ಷೇತ್ರ, ಚಿಕ್ಕದೇವಮ್ಮನ ಬೆಟ್ಟ ಈ ವ್ಯಾಪ್ತಿಯಲ್ಲಿದೆ.
ಮೈಸೂರು ಮಹಾರಾಜರು ಶಿಕಾರಿಗೆ ಬಂದಾಗ ಉಳಿದುಕೊಳ್ಳಲೆಂದೇ ಆ ಕಾಲದಲ್ಲಿ ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಿಸಲಾದ ಈಗ ‘ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್’ ಆಗಿರುವ ಕಾರಾಪುರದ ‘ಮಹಾರಾಜ ಬಂಗಲೆ’, ಈ ಬಂಗಲೆಯ ಬಳಿಯೇ ವನ್ಯ ಮೃಗಗಳನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ಕೆರೆಯೊಂದರ ಸಹಿತ ಕಟ್ಟಿರುವ ವೀಕ್ಷಣಾಗೋಪುರ, ಬೀಚನಹಳ್ಳಿ ಡ್ಯಾಂ ಎಂದೇ ಸ್ಥಳೀಯರಲ್ಲಿ ಜನಜನಿತವಾಗಿರುವ ೧೯೭೫ರಲ್ಲಿ ನಿರ್ಮಿಸಲ್ಪಟ್ಟಿರುವ ನಯನ ಮನೋಹರ ‘ಕಬಿನಿ ಜಲಾಶಯ’, ೧೯೫೭ರಲ್ಲಿ ಬೀರ‍್ವಾಳುವಿನಲ್ಲಿ ನುಗು ಹೊಳೆಗೆ ಬೆಟ್ಟ ಹೊಂದಿಕೊಂಡಂತೆ ನಿರ್ಮಾಣಗೊಂಡಿರುವ ಕಣ್ಮನ ಸೆಳೆವ ‘ನುಗು ಜಲಾಶಯ’ ಮತ್ತು ತಾರಕದಲ್ಲಿರುವ ‘ತಾರಕ ಜಲಾಶಯ’ ಹಾಗೂ ಹೆಬ್ಬಳ್ಳದಲ್ಲಿರುವ ‘ಹೆಬ್ಬಳ್ಳ ಜಲಾಶಯ’ ಮುಂತಾದ ಕುತೂಹಲಕಾರಿ, ಸಾಹಸಮಯ, ಮನಮೋಹಕ, ಭಕ್ತಿ ಪ್ರಧಾನ ಸ್ಥಳಗಳು ಹೆಗ್ಗಡದೇವನಕೋಟೆಯ ಕಾಡಿನ ಗರ್ಭದೊಳಗಿವೆ.
ದಸರಾ ಆನೆಗಳ ಬೀಡು: ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಬಹಳಷ್ಟು ಪಳಗಿದ ಆನೆಗಳಿಗೆ ಆಶ್ರಯ ತಾಣವಾಗಿರುವ ಹುಣಸೂರು ತಾಲ್ಲೂಕಿನ ‘ವೀರನಹೊಸಹಳ್ಳಿ’ ಮತ್ತು ಹೆಗ್ಗಡ ದೇವನಕೋಟೆ ಕಾಡಿಗೆ ಅಂಟಿಕೊಂಡಂತೆಯೇ ದಕ್ಷಿಣ ಭಾಗದಲ್ಲಿ ‘ಬಂಡೀಪುರ ಅಭಯಾರಣ್ಯ’ ಹಾಗೂ ಪಶ್ಚಿಮ ಭಾಗದಲ್ಲಿ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ಗಳೂ ಸಮೀಪದಲ್ಲೇ ಇರುವುದರಿಂದ ಹೆಗ್ಗಡದೇವನಕೋಟೆಗೆ ಪ್ರವೇಶಿಸುವ ಪ್ರವಾಸಿಗರು ಹೆಚ್ಚೆಚ್ಚು ಸ್ಥಳಗಳನ್ನು ಮಳೆಗಾಲದಲ್ಲಿ ವೀಕ್ಷಿಸಿ ಸಂಭ್ರಮಿಸಬಹುದಾಗಿದೆ. ಮೋಡಮುಸುಕಿದ ವಾತಾವರಣ, ತುಂತುರು ಮಳೆಯ ಹನಿಗಳ ನಡುವೆ ಕಾಡಿನಲ್ಲಿ ವಿಹರಿಸಿದಾಗ ಸಿಗುವ ಆನಂದಕ್ಕೆ ಸರಿಸಾಟಿಯೇ ಇಲ್ಲ.
ರಾತ್ರಿ ವೇಳೆ ಸಂಚಾರ ನಿಷಿದ್ಧ: ಹೆಗ್ಗಡದೇವನಕೋಟೆ ಅರಣ್ಯ ವಲಯ ಅಪಾಯಕಾರಿಯಾಗಿದ್ದು, ವನ್ಯಮೃಗಗಳಿಂದ ಕೂಡಿರುವುದರಿಂದ ಪ್ರವಾಸದ ವೇಳೆ ಬಹಳ ಎಚ್ಚರಿಕೆಯಿಂದ ಇರುವುದು ಅವಶ್ಯ. ರಾತ್ರಿ ವೇಳೆಯ ಸಂಚಾರ ಅಪಾಯಕಾರಿ ಯಾದ್ದರಿಂದ ಮತ್ತು ವನ್ಯಜೀವಿಗಳ ಹಿತದೃಷ್ಟಿಯಿಂದ ರಾತ್ರಿ ಸಂಚಾರ ನಿಷಿದ್ಧವಾಗಿದೆ. ಏನಿದ್ದರೂ ಸಂಜೆ ೫ ಗಂಟೆಯೊಳಗೆ ಸ್ಥಳೀಯ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡುವುದು ಸೂಕ್ತ.
– ಕೆ.ಬಿ. ರಮೇಶನಾಯಕ





