ಸಾಲೋಮನ್
ಮೈಸೂರು ರೈಲ್ವೆ ವರ್ಕ್ ಶಾಪ್ ಇಂಜಿನಿಯರ್‌ಗಳ ಕೈಚಳಕ
ರೈಲ್ವೆ ಕೌಶಲ ವಿಕಾಸ ಯೋಜನೆ:
ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿಪಾಸಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ತಾಂತ್ರಿಕ ಕೌಶಲ ತರಬೇತಿ ನೀಡಲಾಗುತ್ತಿದೆ. ಇದು ೧೮ ದಿನಗಳ ತರಬೇತಿಯಾಗಿದ್ದು, ಈಗಾಗಲೇ ೩೦೦ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದುಕೊಂಡಿದ್ದಾರೆ.
ಜೈವಿಕ ವೈವಿಧ್ಯ ಸಂರಕ್ಷಣೆ:
ರೈಲ್ವೆ ವರ್ಕ್ ಶಾಪ್ ಹಿಂಭಾಗದಲ್ಲಿ ಮಳೆ ನೀರು ಸಂಗ್ರಹವಾಗುತ್ತಿತ್ತು. ಅದೇ ಸ್ಥಳದಲ್ಲಿ ಜೈವಿಕ ವೈವಿಧ್ಯ ಜೀವಿಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಅಭಿವೃದ್ಧಿ ಮಾಡಲಾಗಿದೆ. ಇಲ್ಲಿ ಸುಮಾರು ೭೦ ಲಕ್ಷ ಲೀಟರ್‌ಗೂ ಹೆಚ್ಚು ನೀರು ಸಂಗ್ರಹವಾಗುವ ಕೆರೆ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಅಪರೂಪದ ಪಕ್ಷಿಗಳು ಬರುತ್ತವೆ. ಕೆರೆಯ ಏರಿಯ ಮೇಲೆ ಕುಳಿತುಕೊಳ್ಳಲು ಬೆಂಚ್ ಹಾಗೂ ಶೆಲ್ಟರ್ ಕೂಡ ನಿರ್ಮಾಣ ಮಾಡಲಾಗಿದೆ.
ಇಂಗ್ಲಿಷ್‌ನಲ್ಲಿ ‘ಓಲ್ಡ್ ಈಸ್ ಗೋಲ್ಡ್’ ಎಂಬ ಮಾತಿದೆ. ಮೈಸೂರಿನ ರೈಲ್ವೆ ವರ್ಕ್‌ಶಾಪ್‌ನಲ್ಲಿ ಈ ಮಾತು ಅಕ್ಷರಶಃ ಅನುಷ್ಠಾನಗೊಂಡಿದೆ. ವರ್ಜ್ಯ ಎಂದು ಮೂಲೆಗೆ ಸೇರಿಸಿದ್ದ ರೈಲು ಬೋಗಿ ಸೇರಿದಂತೆ ಹತ್ತು ಹಲವು ವಸ್ತುಗಳಿಗೆ ಹೊಸ ರೀತಿಯ ಜೀವಕಳೆ ತುಂಬುವ ಮೂಲಕ ಕ್ರಿಯೇಟಿವಿಟಿ (ಸೃಜನಶೀಲತೆ)ಗೆ ಮಾದರಿಯಾಗಿದ್ದಾರೆ ರೈಲ್ವೆ ವರ್ಕ್ ಶಾಪ್‌ನ ಇಂಜಿನಿಯರ್‌ಗಳು. ಬೇಡವೆಂದು ಬಿಸಾಡಿದ್ದ ವಸ್ತುಗಳಿಂದ ದೊಡ್ಡ ಮೀಟಿಂಗ್ ಹಾಲ್! ಅಲ್ಲಿನ ದೊಡ್ಡ ಟೇಬಲ್, ಕುರ್ಚಿಗಳು ಮಾತ್ರವಲ್ಲದೆ ಡೆಸ್ಕ್, ಮೈಕ್‌ಗಳು, ಗ್ರಂಥಾಲಯ, ಪುಟಾಣಿ ಅಡುಗೆ ಮನೆ, ದೊಡ್ಡ ದೊಡ್ಡ ಲ್ಯಾಬ್‌ಗಳು, ಉದ್ಯಾನದಲ್ಲಿ ಅಲಂಕಾರಕ್ಕಾಗಿ ಮಾಡಿದ ಬೃಹತ್ ಕೊಡೆ ಹಾಗೂ ಅದರ ಕೆಳಗಿನ ಪಾಟ್‌ಗಳು, ಬೆಂಚ್‌ಗಳು ಅಲ್ಲಿ ಕಣ್ಣಿಗೆ ಕಾಣುವುದೆಲ್ಲವೂ ಬೇಡವೆಂದು ತ್ಯಜಿಸಿದ ವಸ್ತುಗಳಿಂದಲೇ ನಿರ್ಮಾಣವಾಗಿದ್ದು..! ನಂಬುವುದಕ್ಕೆ ಕಷ್ಟವಾದರೂ ಇದು ನಿಜ.
ತ್ಯಾಜ್ಯಗಳನ್ನು ಬಳಸಿ ಇಂಥ ಅಪರೂಪದ ಉಪಯುಕ್ತ ಮಾದರಿಗಳನ್ನು ತಯಾರಿಸಿರುವುದನ್ನು ಮೈಸೂರಿನ ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರದ ಮೂಲ ತರಬೇತಿ ಇನ್‌ಸ್ಟಿಟ್ಯೂಟ್‌ನಲ್ಲಿ ಕಾಣಬಹುದು. ರೈಲ್ವೆಯಲ್ಲಿ ಅನುಪಯುಕ್ತ ವಸ್ತುಗಳು ಸಾಕಷ್ಟು ಸಿಗುತ್ತವೆ. ಆದರೆ, ಇವುಗಳಿಂದ ಅಗತ್ಯ ವಸ್ತುಗಳನ್ನು ರೂಪಿಸುವ ಕ್ರಿಯೇಟಿವಿಟಿ ಇರುವುದು ಬಹಳ ಮುಖ್ಯ. ರೈಲ್ವೆಯಲ್ಲಿ ಉಪಯೋಗದ ನಂತರ ಬಿಸಾಡುವ ಪದಾರ್ಥಗಳಲ್ಲಿ ಶೇ.೯೦ ಕಬ್ಬಿಣದ ವಸ್ತುಗಳು. ಉಳಿದಂತೆ ಮರದ ಹಲಗೆಗಳು, ಸೀಟ್‌ಗಳು, ರೆಗ್ಜಿನ್ ಶೀಟ್‌ಗಳು, ಕಚೇರಿಯಲ್ಲಿ ಬಳಸಿದ್ದ ಹಳೇ ಟೇಬಲ್‌ಗಳು, ಕುರ್ಚಿಗಳು ಹಾಗೂ ಬೀರು(ಅಲ್ಮೆರಾ)ಗಳು ಮತ್ತು ಹಳೇ ಕಂಪ್ಯೂಟರ್‌ಗಳು, ಟಿವಿ ಮಾನಿಟರ್‌ಗಳು ಇನ್ನೂ ಏನೇನೋ ಇವೆ. ಯಾವುದನ್ನೂ ಬಿಸಾಡದೆ, ಅವುಗಳಿಂದ ಏನಾದರೊಂದು ಮಾದರಿ ತಯಾರು ಮಾಡಲಾಗಿದೆ.
ರೈಲು ಬೋಗಿ: ಹೆಚ್ಚಾಗಿ ಬಳಕೆಯಾದ ಬಳಿಕ ಮೂಲೆಗುಂಪಾಗುವ ರೈಲ್ವೆ ಬೋಗಿಗಳಿಗೆ ಯಾವ ಬಗೆಯ ಹೊಸ ರೂಪ ನೀಡಿರಬಹುದು ಎನ್ನುವುದು ಊಹೆಗೂ ನಿಲುಕುವುದಿಲ್ಲ. ಮೂಲೆ ಸೇರಿರುವ ಒಂದು ಬೋಗಿಯಲ್ಲಿರುವ ಮೀಟಿಂಗ್ ಹಾಲ್, ಕುರ್ಚಿಗಳು, ದೊಡ್ಡ ಟೇಬಲ್, ಮೈಕ್ ಸಿಸ್ಟಮ್ ಇವೆಲ್ಲವೂ ರೈಲ್ವೆ ಸಕ್ಯೆಪ್‌ಗೆ ಬಿಸಾಡಿದ್ದ ವಸ್ತುಗಳಿಂದ ಮೂಡಿಬಂದಿರುವುದು ಆಶ್ಚರ್ಯ ಹುಟ್ಟಿಸುತ್ತದೆ.
ಒಂದು ಬೋಗಿ ೬೫ ಅಡಿ ಉದ್ದವಿದ್ದು, ಬಾಗಿಲಿನ ಹತ್ತಿರ ಇರುವ ಸ್ಥಳದಲ್ಲಿ ಒಂದು ಪುಟ್ಟದಾದ ಓದುವ ಕೊಠಡಿ ಮಾಡಲಾಗಿದೆ. ಅಲ್ಲಿಂದ ಮುಂದೆ ಇರುವ ಶೌಚಾಲಯದ ಸ್ಥಳದಲ್ಲಿ ಪುಟ್ಟ ಸುಂದರ ವ್ಯವಸ್ಥಿತ ಕಿಚನ್ (ಕಾಫಿ, ಟೀ ಮಾಡಿಕೊಳ್ಳಲು) ನಿರ್ಮಾಣ ಮಾಡಲಾಗಿದೆ. ಒಂದು ಬೋಗಿಯಲ್ಲಿ ಈ ಎಲ್ಲ ವ್ಯವಸ್ಥೆ ಮಾಡಲು ತಂಡಕ್ಕೆ ೪೫ ದಿನಗಳ ಸಮಯಾವಕಾಶ ಹಿಡಿದಿದೆ.
ಪ್ರಯೋಗಾಲಯಗಳು ೮: ರೈಲುಗಳಲ್ಲಿರುವ ಎಸಿ ಕೋಚ್‌ಗಳ ಬಾಗಿಲುಗಳನ್ನು ಬಳಸಿ ಪ್ರಯೋಗಾಲಯಗಳಿಗೆ ಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಫಿಟ್ಟರ್, ವೆಲ್ಡರ್, ಮೆಕ್ಯಾನಿಕಲ್, ಟರ್ನರ್, ಪ್ಲಂಬರಿಂಗ್, ಕಾರ್ಪೆಂಟರ್ ಮತ್ತು ಕಂಪ್ಯೂಟರ್ ಲ್ಯಾಬ್‌ಗಳನ್ನು ನಿರ್ಮಾಣ ಮಾಡಿರುವುದಲ್ಲದೆ, ಪ್ರಯೋಗಾಲದಲ್ಲಿ ತರಬೇತಿಗೆ ಬಳಸುವ ಪ್ರತಿಯೊಂದು ವಸ್ತುಗಳನ್ನೂ ರಿಪೇರಿ ಮಾಡಿಕೊಂಡು ಉಪಯೋಗಿಸಲಾಗುತ್ತಿದೆ. ಹಳೆಲೇತ್ ಮೆಷಿನ್, ಡ್ರಿಲ್ಲಿಂಗ್ ಮೆಷಿನ್, ಪಂಚ್ ಮೆಷಿನ್, ಎಲೆಕ್ಟ್ರಿಕಲ್ ಸಿಸ್ಟಮ್, ಸಿಗ್ನಲ್ ಹೇಗೆ ಕೆಲಸ ಮಾಡುತ್ತವೆ. ಟ್ರ್ಯಾಕ್ ಸಿಸ್ಟಮ್, ಸಿಗ್ನಲ್ ಲೈಟ್ಸ್, ಒಂದು ಸ್ಟೇಷನ್‌ನಿಂದ ಇನ್ನೊಂದು ಸ್ಟೇಷನ್‌ಗೆ ಕಳುಹಿಸುವ ಸಂದೇಶ, ಬೋಗಿಗಳ ಮೇಲಿರುವ ವಾಟರ್ ಟ್ಯಾಂಕ್, ಪೈಪ್‌ಗಳನ್ನು ಅಳವಡಿಸಿರುವುದು, ಬ್ರೇಕ್ ಸಿಸ್ಟಮ್, ವ್ಹೀಲ್ ಲೈನ್ ಮೆಂಟ್… ಹೀಗೆ ಪ್ರತಿಯೊಂದು ಮೆಕ್ಯಾನಿಸಮ್ ಬಗ್ಗೆ ತರಬೇತಿ ನೀಡಲು ಬಳಸುವ ಎಲ್ಲ ಪರಿಕರಗಳನ್ನೂ ಸರ್ಕ್ಯೆಪ್‌ನಿಂದಲೇ ತಯಾರು ಮಾಡಿರುವುದು ವಿಶೇಷವಾಗಿದೆ.
ಉಪಯುಕ್ತವಾದ ಹಳೇ ಕಂಪ್ಯೂಟರ್: ಕಚೇರಿಗಳಲ್ಲಿ ಕೆಟ್ಟು ಹೋಗಿದ್ದ ಹಳೇ ಕಂಪ್ಯೂಟರ್‌ಗಳನ್ನು ತಂದು ಹಾಳಾಗಿರುವ ಭಾಗಗಳನ್ನು ತೆಗೆದು ಬೇರೆ ಕಂಪ್ಯೂಟರ್ಗಳಿಂದ ಆ ವಸ್ತುಗಳನ್ನು ತೆಗೆದುಕೊಂಡು ದುರಸ್ತಿಪಡಿಸಲಾಗಿದೆ. ಹೀಗೆ ೧೦ ಕೆಟ್ಟ ಹೋಗಿದ್ದ ಕಂಪ್ಯೂಟರ್‌ಗಳಲ್ಲಿ ೪ ಅನ್ನು ಉಪಯೋಗಕ್ಕೆ ಯೋಗ್ಯವಾಗುವ ಹಾಗೆ ರಿಪೇರಿ ಮಾಡಲಾಗಿದೆ. ಇವುಗಳನ್ನು ವಿದ್ಯಾರ್ಥಿಗಳಿಗಾಗಿ ಲ್ಯಾಬ್‌ನಲ್ಲಿ ಇಡಲಾಗಿದೆ. ಪ್ರಯೋಗಾಲಯದ ಪರಿಕರಗಳು ಕಂಪ್ಯೂಟರ್ ಮೂಲಕ ವೆಲ್ಡಿಂಗ್ ತರಬೇತಿ ಪಡೆಯುವ ವಿದ್ಯಾರ್ಥಿಗಳು, ಕಲಿತ ನಂತರ ನೈಜ ವೆಲ್ಡಿಂಗ್ ಗನ್ ಹಿಡಿದು ಅಭ್ಯಾಸ ಮಾಡುತ್ತಾರೆ. ಹೀಗೆ ಮೆಕ್ಯಾನಿಕಲ್ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ, ಪ್ಲಂಬರಿಂಗ್, ಎಲೆಕ್ಟ್ರಿಕಲ್ ಇತ್ಯಾದಿ ಪ್ರಯೋಗಾಲಯದಲ್ಲಿ ಬಳಸುವ ಎಲ್ಲ ಪರಿಕರಗಳಿಂದ ರೈಲ್ವೆ ಇಂಜಿನ್ ಹಾಗೂ ಬೋಗಿಗಳ ದುರಸ್ತಿಗೆ ಅಗತ್ಯವಿರುವ ತರಬೇತಿಗೆ ಮಾದರಿಗಳನ್ನು ಮಾಡಲಾ ಗಿದ್ದು, ಆ ಮೂಲಕ ಶಿಕ್ಷಣ ನೀಡಲಾಗುತ್ತಿದೆ.
ಸರ್ಕಾರಕ್ಕೆ ಹಣ ಉಳಿತಾಯ: ಬಿಸಾಡಲ್ಪಟ್ಟ ವಸ್ತುಗಳಿಂದ ಇಷ್ಟೆಲ್ಲ ಉಪಯುಕ್ತ ವಸ್ತುಗಳನ್ನು ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ವರ್ಕ್ ಶಾಪ್‌ನ ಮುಖ್ಯ ವ್ಯಸ್ಥಾಪಕ ಓ.ಪಿ.ಶಾ ಹಾಗೂ ಉಪ ಮುಖ್ಯ ವ್ಯವಸ್ಥಾಪಕ ಬಿ.ಆಂಜನೇಯಲು ಅವರ ಮಾರ್ಗದರ್ಶನದಲ್ಲಿ ಹಿರಿಯ ಸೆಕ್ಷನ್ ಇಂಜಿನಿಯರ್ ಆರ್.ಬಸವಲಿಂಗಪ್ಪ ಹಾಗೂ ಅವರ ತಂಡದವರ ಕ್ರಿಯಾಶೀಲತೆಯಿಂದ ಸಿದ್ಧವಾಗಿದೆ. ನೈಋತ್ಯ ರೈಲ್ವೆಯಿಂದ ಈ ಕಾರ್ಯಾಗಾರಕ್ಕೆ ‘ಬೆಸ್ಟ್ ವರ್ಕ್ ಶಾಪ್’ ಎಂಬ ಪ್ರಶಸ್ತಿಯೂ ಲಭ್ಯವಾಗಿದೆ.
ಕಳೆದ ಒಂದು ವರ್ಷದಲ್ಲಿ ವೇಸ್ಟ್ ಆಗಿರುವ ವಸ್ತುಗಳಿಂದ ರೈಲ್ವೇ ಕೋಚ್ ಒಳಗೆ ಮೀಟಿಂಗ್ ಹಾಲ್, ೮ ಲ್ಯಾಬ್‌ಗಳು ಹಾಗೂ ಎಲೆಕ್ಟ್ರಿಕಲ್, ಪ್ಲಂಬರಿಂಗ್, ಬ್ರೇಕ್ ಸಿಸ್ಟಮ್ ಹಾಗೂ ಮೆಕ್ಯಾನಿಕಲ್ ತರಬೇತಿಗಾಗಿ ನಿರ್ಮಾಣ ಮಾಡಿ ರುವ ಮಾಡೆಲ್. ಇವೆಲ್ಲವುಗಳನ್ನೂ ನಾವು ಬಿಸಾಡಿದ ವಸ್ತುಗಳಿಂದಲೇ ಮಾಡಿ ರುವುದರಿಂದ ಸರ್ಕಾರಕ್ಕೆ ಅಂದಾಜು ೪೦ರಿಂದ ೫೦ ಲಕ್ಷ ರೂ. ಉಳಿತಾಯ ಆಗಿರಬಹುದು. ಈ ಕಾರ್ಯದಲ್ಲಿ ಇಡೀ ತಂಡದ ಶ್ರಮ ಇದೆ. ಇದು ಒಬ್ಬರಿಂದ ಮಾಡುವ ಕೆಲಸ ಅಲ್ಲ.
– ಆರ್.ಬಸವಲಿಂಗಪ್ಪ, ಹಿರಿಯ ಸೆಕ್ಷನ್ ಇಂಜಿನಿಯರ್, ರೈಲ್ವೆ ವರ್ಕ್‌ಶಾಪ್, ಮೈಸೂರು





