ಫೆ.5 ರಂದು ಭಾನುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ‘ರಂಗನಾಯಕಿ’ ಏಕವ್ಯಕ್ತಿ ನಾಟಕ ಪ್ರದರ್ಶನವಿದೆ.
ಬೆಂಗಳೂರಿನ ‘ಕ್ಯಾನ್ಸ್ ರಿವರಿ’ ತಂಡದಿಂದ ಈ ನಾಟಕ ಪ್ರದರ್ಶನವಿದೆ. ರಂಗಕಲಾವಿದೆ ಅಪೂರ್ವ ನಾಗರಾಜ್ ಅವರು ನಾಟಕವನ್ನು ಅಭಿನಯಿಸಲಿದ್ದು, ಅವರೇ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ನಾಟಕ ರಚನೆ ಅನಘಾ ನರಸಿಂಹ ಅವರದು, ವೇದ ವೆಂಕಟೇಶ್ ಹಾಗೂ ರೂಪಕ್ ಕಲ್ಲೂಲ್ಕರ್ ಅವರು ಸಂಗೀತ ನೀಡಿದ್ದಾರೆ. ರಂಗನಾಯಕಿ ತನ್ನ ಯೌವನದ ದಿನಗಳಲ್ಲಿ ಯಶಸ್ಸಿನ ಉತ್ತುಂಗ ಹಾಗೂ ಬೇಡಿಕೆ ಹೊಂದಿದ್ದು, ಮುಪ್ಪು ಆವರಿಸಿದಾಗ ಆಕೆ ಅನುಭವಿಸುವ ಮಾನಸಿಕ ತಲ್ಲಣಗಳನ್ನು ಈ ನಾಟಕ ಅಭಿವ್ಯಕ್ತಪಡಿಸುತ್ತದೆ. ಕೊನೆಗೆ ‘ಇದ್ದದ್ದೇ ಮಾಯೆ, ಇಲ್ಲದ್ದೇ ಬದುಕು’ ಎಂಬ ಭಾವನೆ ಆಕೆಗೆ ಬರುತ್ತದೆ. ಇದನ್ನು ಅಪೂರ್ವ ನಾಗರಾಜ್ ಕಲಾಮಂದಿರದ ಕಿರುರಂಗಮಂದಿರದಲ್ಲಿ ಏಕಾಭಿನಯದ ಮೂಲಕ ಸಾದರಪಡಿಸಲಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ರಂಗಾಸಕ್ತರು ವೀಕ್ಷಿಸಬಹುದು.