ಹೀಗೆ ಏನಾದರೊಂದನ್ನು ಬರೆಯುವುದು ಸುಲಭ. ಅಂತೆಯೇ ಹೀಗೆ ಏನಾದರೊಂದನ್ನು ಬರೆಯುವುದು ಕಷ್ಟ. ತಟ್ಟೆಯಲ್ಲಿರುವ ತಿನಿಸುಗಳಲ್ಲಿ ಬಹಳ ಇಷ್ಟವಾದ ಆ ಒಂದು ತಿನಿಸನ್ನು ಕಡೆಯಲ್ಲಿ ತಿನ್ನಲು ಉಳಿಸುವಂತೆ ಕೆಲವೊಮ್ಮೆ ಬರಹಕ್ಕೆ ಕೈಹಾಕುವ ಮುನ್ನ ಇತರೆ ಕೆಲಸಗಳನ್ನು ಮುಗಿಸಿಬಿಡಬೇಕೆಂದು ಮನಸಾಗುತ್ತದೆ. ಆ ವೇಳೆಗಾಗಲೆ ಸಂಗೀತದಷ್ಟು, ಬರಹದಷ್ಟು ಸೊಗಸಲ್ಲದ ನೂರಾರು ಸಂಗತಿಗಳು ನಾ ಮುಂದು, ತಾ ಮುಂದೆಂದು ನುಗ್ಗಿ ಬರುತ್ತವೆ.
ಸಣ್ಣವರಿರುವಾಗ ನಾವು ತಣ್ಣೀರುಬಾವಿ ಕಡಲ ಕಿನಾರೆಗೆ ಹೋಗಿ ಆಡತೊಡಗಿ, ಪಾಯವಿಲ್ಲದ, ಗೋಡೆಯಿಲ್ಲದ, ಕಂಬವಿಲ್ಲದ ಮರಳ ಮನೆಯೊಂದನ್ನು ಕಟ್ಟಿ, ಕತ್ತಲಾಗುವವರೆಗೂ ಅದನ್ನು ಕಾದು, ಮನೆಗೆ ತೆರಳುವ ಹೊತ್ತಿಗೆ ಅದನ್ನು ಬಿಟ್ಟು ತೆರಳುವಾಗ ಆಗುತ್ತಿದ್ದ ಸಂಕಟದಂಥಾ ಭಾವವೊಂದು ಆಗಾಗ ಕಾಡಿ, ಅದೇನೋ ಹೆದರಿಕೆಯಾದಂತಾಗಿ, ಸೊಗಸಲ್ಲದ ಸಂಗತಿಗಳನ್ನು ಬದಿಗೊತ್ತಿ ಒಂದಷ್ಟು ಹೊತ್ತು ಬರೆಯಲೇಬೇಕೆಂದು ಕೂತಾಗ ಅರಿವಾಗುತ್ತದೆ.
ಹೀಗೆ ಹೇಗೋ, ಎಲ್ಲಂದರಲ್ಲಿ ಗುನುಗಿಬಿಡುವ ಯಾವುದೋ ರಾಗದ ಛಾಯೆಯೊಂದು ಮರೆಯಾಗದೆ ಹಾಗೇ ಉಳಿದು ಮುಂದೊಂದು ದಿನ ಒಂದು ಹಾಡಾಗಿಬಿಡುವಂತೆ, ಯಾವುದೋ ಲಹರಿಯಲ್ಲಿ ಹೊಳೆದ ಸಾಲೊಂದು ಕಾದಂಬರಿಯೇ ಆಗಿಬಿಡಬಹುದು. ಆಗದೆಯೂ ಇರಬಹುದು. ಅಂತಹದೊಂದು ಲಹರಿಯ ನೆನಕೆಗೆ ಮುಂದಾಗಿ ಆ ಸಾಲೇ ನೆನಪಾಗದೆ ಹೋದಾಗ, ಶಾಲೆಯ ಪರೀಕ್ಷೆ ನೆನಪಾಗುತ್ತದೆ. ಪ್ರಶ್ನೆ ಪತ್ರಿಕೆಯೆದುರು ಕೂತು, ಇದನ್ನು ಓದಬೇಕಿತ್ತೆಂಬ ಅರಿವಾಗುತ್ತದೆ.
ಇತರೆ ತಿಂಡಿಗಳನ್ನೆಲ್ಲ ಹೇಗೋ ಗಬಗಬನೆ ಮುಗಿಸಿ, ಸವಿದು ತಿನ್ನಲು ತಟ್ಟೆಯ ಮೂಲೆಯಲ್ಲಿರಿಸಿದ್ದ ಆ ಇಷ್ಟದ ತಿನಿಸನ್ನು ತಿನ್ನುವ ಹೊತ್ತಿಗೆ ಹೊಟ್ಟೆ ತುಂಬಿದಂತಾಗಿ, ಹಳೆಯ ಉತ್ಕಟತೆ ಉಳಿದಿರುವುದಿಲ್ಲ. ನಿರಾಶೆಯಾಗುತ್ತದೆ.
ಕೆಲವೊಂದು ಕ್ರಿಯೆಗಳೇ ಹೀಗೆ. ಸಂಗೀತದ ಹಾಗೆ. ಬರಹದ ಹಾಗೆ. ಪ್ರೀತಿಯ ಹಾಗೆ. ಅದರಲ್ಲಿ ಮುಳುಗದೆ ಅದು ದಕ್ಕುವುದಿಲ್ಲ.
ಕಡಲ ನೀರಲ್ಲಿ ಆಡುವ ತವಕ ಆಗಲೂ ಇರಲಿಲ್ಲ. ಸುಖಾಸುಮ್ಮನೆ ಮರಳಲ್ಲಿ ಕೂತು ಕಡಲ ನೋಡುವ ಹಪಹಪಿಕೆ ಈಗಲೂ ಇದೆ. ಅಂತಹದೊಂದು ಮರಳ ದಂಡೆಯ ಮೇಲೆ ಕೂತು ಮತ್ತೊಂದು ರಾಗವ ಗುನುಗಿದಾಗಲೋ, ಸಾಲೊಂದು ಹೊಳೆದಾಗಲೋ ಮಿಂಚುವ ಖುಷಿಯನ್ನು ನಾನು ಎದುರು ನೋಡುತ್ತೇನೆ ಮತ್ತು ಅಂತಹ ತಹತಹದ ಹಾಡಾಗಲಿ, ಬರಹವಾಗಲಿ ದಕ್ಕುವವರೆಗು ನಾನು ಅವೆರಡನ್ನೂ ಮಾಡದೆ ಸುಮ್ಮನಿರಲು ಬುಂಸುತ್ತೇನೆ.