ಸಧ್ಯ ಮೈಸೂರು ಅರಮನೆಯ ಹಿಂದಿನ ಆನೆ ಬಿಡಾರವೊಂದರ ವಾಸಿಯಾಗಿರುವ ದೋಬಿ ಎಂಬ ಈ ಜೇನುಕುರುಬರ ಹಿರಿಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರದ ಬಳಿಯ ದುಬಾರೆ ಆನೆಕ್ಯಾಂಪಿನ ಕಾವೇರಿ ಎಂಬ ಆನೆಯ ಮಾವುತರಾಗಿರುವವರು. ಕಾಡಾನೆಗಳ ಕುರಿತೂ, ಜೇನು ನೊಣಗಳ ಕುರಿತೂ, ನಾಶವಾಗುತ್ತಿರುವ ಆದಿವಾಸಿಗಳ ಬದುಕಿನ ಕುರಿತು ಹಾಡೂ ಹಾಡಬಲ್ಲ, ಕಥೆಯೂ ಹೇಳಬಲ್ಲ, ಭಾಷಣವನ್ನೂ ಮಾಡಬಲ್ಲ ದೋಬಿ ಹಠದ ಮನುಷ್ಯ. ತಮ್ಮ ಆನೆ ಕಾವೇರಿ ಎಂಬ ಕುಮ್ಕಿ ಆನೆ ಮತ್ತು ಹೆಂಡತಿ, ಮಕ್ಕಳು ಮೊಮ್ಮಕ್ಕಳ ಜೊತೆಗೆ ಕಳೆದ ಹಲವು ವರ್ಷಗಳಿಂದ ಮೈಸೂರು ಅರಮನೆಗೆ ದಸರಾದ ಹೊತ್ತಿಗೆ ಬಂದು ವಿಜಯದಶಮಿ ಮುಗಿಸಿ ದುಬಾರೆಗೆ ಹಿಂತಿರುಗುವ ದೋಬಿ ಬಾಯಿ ಬಿಟ್ಟರೆ ಜೇನುಕುರುಬ ಜನಾಂಗದ ತಲೆತಲಾಂತರಗಳ ಕಥೆಯನ್ನು ಹೇಳಬಲ್ಲವರು. ಜೊತೆಗೆ ಜೇನುಕುರುಬ ಮಕ್ಕಳ ಈಗಿನ ಅತಂತ್ರ ಸ್ಥಿತಿಯನ್ನು ಕಲ್ಲೂ ನೀರೂ ಕರಗುವ ಹಾಗೆ ವಿವರಿಸಬಲ್ಲವರು.
ಯಾವಾಗಲೂ ಜೊತೆಯಲ್ಲಿ ಮಡದಿಯನ್ನೂ, ಮೊಮ್ಮಕ್ಕಳನ್ನೂ ಕರೆದುಕೊಂಡು ಮೈಸೂರು ಅರಮನೆಗೆ ಬರುವ ದೋಬಿಯವರು ಈ ಸಲದ ದಸರೆಗೆ ಏಕಾಂಗಿಯಾಗಿ ಬಂದಿರುವರು. ಕಾರಣ ಇವರ ಮೊಮ್ಮಗಳು ಅವಳಿ ಮಕ್ಕಳನ್ನು ಹೆತ್ತಿರುವಳು. ಅವಧಿ ಪೂರ್ಣವಾಗುವ ಮೊದಲೇ ಅಕಾಲಿಕವಾಗಿ ಜನಿಸಿದ ಆ ಅವಳಿ ಹಸುಗೂಸುಗಳು ಮಡಿಕೇರಿಯ ಸರಕಾರೀ ಆಸ್ಪತ್ರೆಯ ಇನ್‌ಕ್ಯುಬೇಟರಿನಲ್ಲಿ ಹಲವು ದಿನಗಳಿಂದ ಮಲಗಿರುವವು. ಆ ಚಿಂತೆಯಲ್ಲಿ ದುಬಾರೆಯಲ್ಲೇ ಉಳಿದಿರುವ ಮಡದಿ ಮಕ್ಕಳನ್ನು ನೆನೆದುಕೊಂಡು ದೋಬಿಯವರು ಮೈಸೂರಿನಲ್ಲಿ ಕಾವೇರಿ ಆನೆಯ ಜೊತೆ ತಮ್ಮ ಕಷ್ಟಸುಖಗಳನ್ನು ಮಾತಾಡಿಕೊಂಡು ದಿನ ದೂಡುತ್ತಿರುವರು.
ಇದು ದೋಬಿ ಎಂಬ ಒಬ್ಬ ಮಾವುತನ ಕಥೆ. ಮೈಸೂರು ಸುತ್ತಲಿನ ಹಲವು ಆನೆ ಕ್ಯಾಂಪುಗಳಿಂದ ಆನೆಯ ಸಮೇತ ಮೈಸೂರಿಗೆ ಬಂದಿರುವ ಎಲ್ಲ ಮಾವುತ ಕಾವಾಡಿಯರದ್ದೂ ಹೀಗೆ ಒಂದೊಂದು ಚಿಂತೆಯ ಕಥೆಗಳು. ಮೈಸೂರಿನ ಅರಮನೆಯ ಹಿಂದಿನ ಆನೆ ಬಿಡಾರಗಳಲ್ಲಿ ಇರುವಷ್ಟು ದಿನ ಅಷ್ಟಿಷ್ಟು ಸಂತೋಷದಲ್ಲಿ ಇರುವ ಇವರೆಲ್ಲ ವಾಪಾಸು ಹೋದ ಮೇಲೆ ಅವರದ್ದೂ ಇದೇ ಬದುಕು, ಇದೇ ಕಥೆ ಮತ್ತು ನಮಗೆ ಯಾರಿಗೂ ಅರಿವೇ ಆಗದ ನೂರಾರು ಖಾಸಗೀ ವ್ಯಥೆಗಳು!