Light
Dark

ವನಿತೆ – ಮಮತೆ : ಸಾಧಿಸುವವರಿಗೆ ಸ್ಫೂರ್ತಿ ‘ರಶ್ಮಿ’

ಐಎಫ್‌ಎಸ್ ಪರೀಕ್ಷೆ ಪಾಸ್ ಮಾಡಿದ ಮೈಸೂರಿನ ರಶ್ಮಿ ಅವರ ಸಂದರ್ಶನ

ಸೌಮ್ಯ ಹೆಗ್ಗಡಹಳ್ಳಿ

ಸಾಧನೆ ಗಗನದ ಕುಸುಮವೇನಲ್ಲ. ಇಚ್ಛಾಶಕ್ತಿ ಇಟ್ಟುಕೊಂಡು ಗುರಿಯತ್ತ ತುಸು ಜಿಗಿದರೆ ಅದು ಒಲಿಯುತ್ತದೆ. ಇದಕ್ಕೆ ಚೆಂದದ ಉದಾಹರಣೆ ರಶ್ಮಿ ಜಿ. ೨೦೨೨ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿರುವ ಇವರು ಯುವ ಸಮುದಾಯಕ್ಕೆ ರೋಲ್ ಮಾಡೆಲ್.

ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಸರ್ಕಾರದಲ್ಲಿನ ಉನ್ನತ ಹುದ್ದೆಗೇರಿ ಸೇವೆ ಸಲ್ಲಿಸುವುದು ಹೆಚ್ಚಿನವರ ಕನಸು. ಆದರೆ ಎಲ್ಲರೂ ಇದನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದು. ಇದಕ್ಕೆ ಕಾರಣಗಳು ಅನೇಕ. ಆದರೆ ಗೆದ್ದವರು ತಮ್ಮ ಮಿತಿಗಳ ಸುಳಿಯೊಳಗೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಾಧನೆಯ ತುತ್ತತುದಿ ಏರಿರುತ್ತಾರೆ. ಮತ್ತೊಂದು ಕಡೆ ಕೆಲಸ ಮಾಡಿಕೊಂಡು ಯುಪಿಎಸ್‌ಸಿಯಂತಹ ಪರೀಕ್ಷೆ ಪಾಸ್ ಮಾಡುವುದು ಅಪ್ಪಟ ಸಾಧನೆ. ಅದನ್ನು ಮಾಡಿರುವ ಮೈಸೂರಿನ ರಶ್ಮಿ ಅವರ ಸಂದರ್ಶನ ಇಲ್ಲಿದೆ.

ರಶ್ಮಿ ಎಂಬ ನಿತ್ಯೋತ್ಸಾಹಿ
ಮೈಸೂರಿನಲ್ಲಿ ಜನಿಸಿದ ರಶ್ಮಿ ಅವರು ಬಿಇ ಸಿವಿಲ್ ಇಂಜಿನಿಯರಿಂಗ್ ಅನ್ನು ಜೆಸಿ ಕಾಲೇಜಿನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಪೂರೈಸಿದರು. ಇದಾದ ಬಳಿಕ ೨೦೧೫ರಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ನೇಮಕಗೊಂಡರು. ಅಷ್ಟಕ್ಕೆ ಲೈಫ್ ಒಂದು ಹಳಿಗೆ ಬಂತು ಎಂದು ಸುಮ್ಮನಾಗಬಹುದಿತ್ತು. ಆದರೆ ರಶ್ಮಿ ಅವರ ಓಟ ಅಲ್ಲಿಗೆ ನಿಲ್ಲಲಿಲ್ಲ. ೨೦೧೯ರಲ್ಲಿ ಕೆಎಎಸ್ ಪಾಸ್ ಮಾಡಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನೇಮಕಗೊಂಡರು. ಅದಾದ ಮೇಲೆ ೨೦೨೨ರಲ್ಲಿ ಯುಪಿಎಸ್‌ಸಿ ಪಾಸ್ ಮಾಡಿ ಸದ್ಯ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿದ್ದಾರೆ.
———–

* ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಹೇಗಿತ್ತು?

ಪರೀಕ್ಷೆಗೆ ವರ್ಷ ಮುಂಚೆಯೇ ಸಿದ್ಧತೆ ಮಾಡಿಕೊಂಡಿದ್ದೆ. ಮೊದಲಿಗೆ ಪರೀಕ್ಷೆ ಮಾದರಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಿಲಿಮ್ಸ್, ಮೇನ್ಸ್, ಸಂದರ್ಶನಗಳಿಗೆ ಪ್ರತ್ಯೇಕವಾಗಿ ತಯಾರಿ ಮಾಡಿಕೊಳ್ಳಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿಕೊಳ್ಳಬೇಕು. ಇದೆಲ್ಲವನ್ನೂ ನಾನು ನಿಯಮಿತವಾಗಿ ಮಾಡಿಕೊಂಡು ಬಂದೆ.


* ದಿನದಲ್ಲಿ ಎಷ್ಟು ಗಂಟೆ ಓದುತ್ತಿದ್ದಿರಿ?

೨೦೧೪ರಲ್ಲಿ ಇಂಜಿನಿಯರಿಂಗ್ ಮುಗಿಸಿದ ಬಳಿಕ ಹೆಚ್ಚು ಅಧ್ಯಯನದತ್ತ ತೊಡಗಿಕೊಂಡೆ. ೨೦೧೭ರಲ್ಲಿ ಕೆಎಎಸ್ ಪಾಸ್ ಮಾಡಿದೆ. ದಿನಕ್ಕೆ ೪ ರಿಂದ ೬ ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಅದರಲ್ಲಿ ೩೦ ನಿಮಿಷ ಪ್ರಚಲಿತ ಘಟನೆಗಳು, ಪತ್ರಿಕೆ, ರೇಡಿಯೋ ಕೇಳಲು ಮೀಸಲಿಡುತ್ತಿದೆ. ಮತ್ತೊಂದು ಕಡೆ ಕೆಲಸ ಮಾಡುತ್ತಿದ್ದರಿಂದ ನಿಗದಿತ ಸಮಯದಲ್ಲಿ ವ್ಯತ್ಯಾಸವಾಗುತ್ತಿತ್ತು. ಬಿಡುವು ಸಿಕ್ಕಾಗ ಇದನ್ನು ಸರಿದೂಗಿಸಿಕೊಳ್ಳುತ್ತಿದ್ದೆ. ವಾರಂತ್ಯದಲ್ಲಿ ಹೆಚ್ಚು ಓದುತ್ತಿದ್ದೆ.


* ಅಧಿಕಾರ ವಹಿಸಿಕೊಂಡ ಬಳಿಕ ನಿಮ್ಮ ಆದ್ಯತೆ ಏನಾಗಿರುತ್ತದೆ?

ಅರಣ್ಯ ಇಲಾಖೆಯಲ್ಲಿ ಬಹುಪಾಲು ಅಲೆಮಾರಿ ಜನಾಂಗದವರೇ ಹೆಚ್ಚಿದ್ದಾರೆ. ಇವರಿಗೆ ಆರೋಗ್ಯ ಮತ್ತು ಶಿಕ್ಷಣ ಪಡೆದುಕೊಳ್ಳುವುದೇ ದೊಡ್ಡ ಸವಾಲು. ಹೀಗಾಗಿ ನಾನು ಶಿಕ್ಷಣ ಮತ್ತು ಮಹಿಳೆಯರ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು ಎಂದುಕೊಂಡಿದ್ದೇನೆ.


ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ನೀವು ನೀಡುವ ಸಲಹೆ ಏನು?

ಪರೀಕ್ಷೆಗೆ ತಯಾರಾಗುವವರು ಮೊದಲಿಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು. ೬ ರಿಂದ ೮ನೇ ತರಗತಿಯ ಪುಸ್ತಕಗಳನ್ನು ಮೊದಲಿಗೆ ಅಧ್ಯಯನ ಮಾಡಬೇಕು. ಸಿಲಬಸ್‌ಗೆ ತಕ್ಕಂತೆ ಹಂತ ಹಂತವಾಗಿ ಅಧ್ಯಯನ ಮಾಡುತ್ತಾ ಹೋಗಬೇಕು. ಎಲ್ಲರೂ ತಿಳಿದಿರುವಹಾಗೆ ಯುಪಿಎಸ್‌ಸಿ ಕಠಿಣವಾದುದ್ದೇ. ಭಯಪಡದೇ ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಿಕೊಂಡು ಮುಂದೆ ಸಾಗಿದರೆ, ಗೆಲ್ಲಲೇಬೇಕು ಎನ್ನುವ ಛಲ ಇಟ್ಟುಕೊಂಡರೆ ಗೆಲುವು ಸಾಧ್ಯವಾಗುತ್ತದೆ.


* ಸಿವಿಲ್ ಇಂಜಿನಿಯರಿಂಗ್ ಮಾಡಿದ ನೀವು ಯುಪಿಎಸ್‌ಸಿ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಸಿವಿಲ್ ಇಂಜಿನಿಯರಿಂಗ್ ಸೇರುವ ಮೊದಲೇ ನನಗೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕೆಂಬ ಆಲೋಚನೆ ಇತ್ತು. ನನಗೆ ಮುಖ್ಯವಾಗಿ ಅಧಿಕಾರಿಗಳಾದ ಮಣಿವಣ್ಣನ್ ಸರ್ ಹಾಗೂ ಶಿಖಾ ಮೇಡಂ ಅವರು ಸ್ಫೂರ್ತಿಯಾಗಿದ್ದರು. ಅವರ ಹಾದಿಯಲ್ಲೇ ಸಾಗಿ ಉನ್ನತ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಒಂದು ಕಡೆ ಯುಪಿಎಸ್‌ಸಿ ಪಾಸ್ ಮಾಡುವೆನೇ ಎನ್ನುವ ಪ್ರಶ್ನೆ ನನ್ನೊಳಗೇ ಇತ್ತು. ಆದರೆ ಅದನ್ನು ಮೀರಿ ನಿಯಮಿತ ಪರಿಶ್ರಮ ಹಾಕಿದೆ.


* ಈ ಮೊದಲು ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಇತ್ತಾ?

ನನಗೆ ಸಾಹಿತ್ಯದ ಬಗ್ಗೆ ಹೆಚ್ಚು ಒಲವಿದೆ. ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’ ನನ್ನ ನೆಚ್ಚಿನ ಕಾದಂಬರಿ. ಅವರ ಸಾಹಿತ್ಯದಿಂದಲೇ ನಾನು ಪ್ರಕೃತಿ ಬಗ್ಗೆ ಒಲವು ಬೆಳೆಸಿಕೊಂಡೆ. ಜೊತೆಗೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿ ನನ್ನ ಮೇಲೆ ಪ್ರಭಾವ ಬೀರಿತು. ಹೀಗೆ ಓದು, ಒಡನಾಟದ ಮೂಲಕ ಪ್ರಕೃತಿ ನನಗೆ ಹತ್ತಿರವಾಗಿದೆ. ಮುಂದೆ ಅದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ