Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

ವನಿತೆ-ಮಮತೆ : ಹೆಣ್ಣೇ ಚಂದನವನದ ಕಣ್ಣು

ಸ್ಯಾಂಡಲ್‌ವುಡ್‌ನ ಮೇರು ನಟ ಡಾ.ರಾಜ್‌ಕುಮಾರ್ ಅವರ ಜೊತೆ ಪಾರ್ವತಮ್ಮ ರಾಜ್‌ಕುಮಾರ್ ಅವರ ನಗುಮುಖವನ್ನು ನೋಡುವುದೇ ಚೆಂದ. ರಾಜ್‌ಕುಮಾರ್ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಂತು, ಅವರ ಏಳಿಗೆಗೆ ಕಾರಣವಾದ ಪಾರ್ವತಮ್ಮ ನಿಜಕ್ಕೂ ಚಂದನವನದ ನಿಜವಾದ ನಾಯಕಿ. ಇದೇ ರೀತಿ ಹಲವಾರು ಪ್ರಸಿದ್ಧ ನಟರ ಹಿಂದಿನ ಶಕ್ತಿಯಾಗಿ ಅವರ ಹೆಂಡತಿಯರು ನಿಂತಿದ್ದಾರೆ. ಕೆಲವರು ಸ್ವತಃ ತಾವೂ ಬಣ್ಣ ಹಚ್ಚಿದ್ದಾರೆ. ಕುಟುಂಬವನ್ನೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಂತಹ ಪ್ರಸಿದ್ಧ ನಟರ ಹಿಂದಿನ ಶಕ್ತಿಗಳ ಬಗೆಗಿನ ಕ್ವಿಕ್ ಲುಕ್ ಇಲ್ಲಿದೆ.

 

ರಾಜ್ ಎಂಬ ಪರ್ವತದ ಹಿಂದೆ ‘ಪಾರ್ವತಿ’

ಜೂನ್ ೨೫, ೧೯೫೩ರಲ್ಲಿ ಪಾರ್ವತಮ್ಮ ಅವರು ರಾಜ್‌ಕುಮಾರ್ ಕೈ ಹಿಡಿದು ಪಾರ್ವತಮ್ಮ ರಾಜ್‌ಕುಮಾರ್ ಆದರು. ಆಗಿನ್ನು ರಾಜ್‌ಕುಮಾರ್ ಒಂದೊಂದೇ ಸಾಧನೆಯ ಮೆಟ್ಟಿಲುಗಳನ್ನು ಹತ್ತುತ್ತಲಿದ್ದರು. ಆಗ ಜೊತೆಯಾದ ಪಾರ್ವತಮ್ಮ ಅವರು ಚೆನ್ನೈನಲ್ಲಿಯೇ ಪ್ರಾರಂಭದ ದಿನಗಳನ್ನು ಕಳೆದು ಪತಿಯ ಹಿಂದಿನ ಶಕ್ತಿಯಾಗಿ ನಿಂತರು. ನಂತರ ಮಹತ್ತರ ಘಟ್ಟದಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ ಅವರು ಕನ್ನಡ ಚಿತ್ರರಂಗಕ್ಕೆ ಮಹತ್ತರ ಎನ್ನಿಸುವ ಚಿತ್ರಗಳನ್ನು ನಿರ್ಮಿಸಿದರು. ಒಂದು ಹಂತದಲ್ಲಿ ಇಡೀ ಸ್ಯಾಂಡಲ್‌ವುಡ್‌ಅನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವಲ್ಲಿಯೂ ಪಾರ್ವತಮ್ಮ ಅವರದ್ದು ದೊಡ್ಡ ಪಾತ್ರವೇ ಸೈ.

———–

ಭಾರತಿ ಬಂದ ಬಾಳಿನಲ್ಲಿ ‘ಸಂಪತ್ತು’

ಸಂಪತ್‌ಕುಮಾರ್ ಆಗಿದ್ದವರು ವಿಷ್ಣುವರ್ಧನ್ ಆಗಿ, ಅಂದಿನ ಕಾಲಕ್ಕೇ ಆ್ಯಂಗ್ರಿ ಎಂಗ್ ಮ್ಯಾನ್ ಆಗಿ ಘರ್ಜಿಸುತ್ತಿದ್ದ ವಿಷ್ಣುವರ್ಧನ್ ಅವರ ಬಾಳಲ್ಲಿ ಸಹನಟಿ ಭಾರತಿ ಎಂಟ್ರಿ ಕೊಟ್ಟರು. ೧೯೭೫ರಲ್ಲಿ ಸತಿಪತಿಗಳಾದ ಈ ಜೋಡಿ ಒಬ್ಬರಿಗೊಬ್ಬರು ಪೂರಕವಾಗಿ ಚಿತ್ರರಂಗದಲ್ಲಿ ಮುಂದುವರೆದರು. ಚಿತ್ರದ ಆಯ್ಕೆ, ಕತೆ, ಚಿತ್ರಕತೆಗಳ ವಿಚಾರದಲ್ಲಿ ಒಂದಾಗಿ ಚರ್ಚೆ ಮಾಡಿಕೊಂಡು ಬಂದ ಈ ಜೋಡಿ ಸ್ಯಾಂಡಲ್‌ವುಡ್‌ಗೆ ಕೊಟ್ಟ ಕೊಡುಗೆ ಅಪಾರ.

————

ಅಂಬರೀಶ್ ಜೊತೆಯಾದ ಸುಮಲತಾ

ಮಂಡ್ಯದ ಗಂಡು ಎಂದೇ ಖ್ಯಾತರಾಗಿ, ಮಂಡ್ಯ ಜನರ ಮನೆಯ ಮಗನೆಂದು ಹೆಸರು ಮಾಡಿದ್ದ ಅಂಬರೀಶ್ ಪಾಲಿಗೆ ಹೆಂಡತಿಯಾಗಿ, ಮಂಡ್ಯಕ್ಕೆ ಸೊಸೆಯಾಗಿ ಬಂದವರು ಸುಮಲತಾ ಅಂಬರೀಶ್. ಚೆನ್ನೈನಲ್ಲಿ ಹುಟ್ಟಿ, ತೆಲುಗು, ಮಲಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಸುಮಲತಾ ಕನ್ನಡಕ್ಕೂ ಎಂಟ್ರಿ ಕೊಟ್ಟು ತಮ್ಮ ಅಭಿನಯದಿಂದಲೇ ಎಲ್ಲರ ಮನ ಗೆದ್ದವರು. ಅಂಬರೀಶ್ ಅವರಿಗೆ ಪ್ರತಿ ಹಂತದಲ್ಲಿಯೂ ಜೊತೆಯಾಗಿ, ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.

————

ರವಿಚಂದ್ರನ್- ಸುಮತಿ

ಹಾಡುಗಳಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆದುಕೊಂಡ ನಾಯಕ ನಟ ರವಿಚಂದ್ರನ್. ಇವರ ಪತ್ನಿ ಸುಮತಿ. ಹೊರಗೆ ಹೆಚೇನೂ ಕಾಣಿಸಿಕೊಳ್ಳದ, ಮನೆ, ಮಕ್ಕಳನ್ನು ಸಲುಹಿಕೊಂಡು ಬಂದ ಸುಮತಿ ರವಿಚಂದ್ರನ್ ಹಿಂದಿನ ಸ್ಫೂರ್ತಿ. ಸಿನಿಮಾ ಸಂಬಂಧ ಹೆಚ್ಚೇನು ಸಲಹೆ, ಸೂಚನೆ ನೀಡದ ಸುಮತಿ ಅವರು ಇಡೀ ಕುಟುಂಬವನ್ನು ಸಿನಿಮಾಸಕ್ತಿಯ ಹಿನ್ನೆಲೆಯಲ್ಲಿಯೇ ಪೋಷಣೆ ಮಾಡಿಕೊಂಡು ಬಂದದ್ದು ವಿಶೇಷ.

————

ರಮೇಶ್ ಅರವಿಂದ್- ಅರ್ಚನಾ ಅರವಿಂದ್

ರಮೇಶ್ ಅರವಿಂದ್ ಒಳ್ಳೆಯ ಮಾತುಗಾರರೂ ಹೌದು, ನಟರೂ ಹೌದು. ಯಾವುದೇ ವಿಷಯ ಕೊಟ್ಟರೂ ಅದಕ್ಕೊಂದು ಪೂರ್ಣತೆ ತರುವ ತಾಕತ್ತು ಅವರಿಗಿದೆ. ಈ ಪೂರ್ಣತೆಯ ಹಿಂದೆ ಮಡದಿ ಅರ್ಚನಾ ಅವರ ಪಾಲೂ ಇದೆ. ತೆರೆಯ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಇವರು, ಪತಿಯ ಪಾಲಿನ ಪ್ರಪಂಚ. ಚೊಕ್ಕಟವಾಗಿ ಕುಟುಂಬ ನಿರ್ವಹಣೆ ಮಾಡುವ ಅರ್ಚನಾ ಈಗಷ್ಟೇ ಮಗಳ ಮದುವೆಯನ್ನೂ ಮಾಡಿ ಮುಗಿಸಿದರು.

——–

ಸುದೀಪ್- ಪ್ರಿಯಾ ಸುದೀಪ್

ಈಗ ಬೇಡಿಯಲ್ಲಿ ಇರುವ ನಟ ಕಿಚ್ಚ ಸುದೀಪ್. ಈ ಕಿಚ್ಚನ ಹಿಂದಿರುವ ಬೆಚ್ಚಗಿನ ಕಿಚ್ಚು ಪ್ರಿಯಾ. ಒಮ್ಮೆ ‘ಪೈಲ್ವಾನ್’ ಸಿನಿಮಾದ ಪ್ರಮೋಷನಲ್ ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿಗೆ ಬಂದಿದ್ದ ಪ್ರಿಯಾ ಅವರು ತಮ್ಮ ಪತಿಯ ಸಿನಿಮಾಗಳು, ಅವರ ಅಭಿಯನ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು. ಜೊತೆಗೆ ತಾವು ಯಾವ ರೀತಿ ತಮ್ಮ ಪತಿಯ ಸಿನಿಮಾಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ ಎಂದು ತೆರೆದಿಟ್ಟಿದ್ದರು.

———–

ದರ್ಶನ್-ವಿಜಯಲಕ್ಷ್ಮೀ

ಸ್ಯಾಂಡಲ್‌ವುಡ್ ಮಟ್ಟಿಗೆ ದರ್ಶನ್ ದೊಡ್ಡ ಸ್ಟಾರ್ ನಟ. ಅಭಿಮಾನಿಗಳ ಸಂಖ್ಯೆ ಹೆಚ್ಚು. ಸಾಲು ಸಾಲು ಸಿನಿಮಾಗಳ ಬಂದರೂ ಅವುಗಳನ್ನು ಅಳೆದು ತೂಗಿ ಒಪ್ಪಿಕೊಂಡು ಮಾಡಿದ ಸಿನಿಮಾಗೆ ನ್ಯಾಯ ಒದಗಿಸುವ ನಟ ದರ್ಶನ್. ಒಂದು ಲೆಕ್ಕದಲ್ಲಿ ದರ್ಶನ್ ನಿರ್ಮಾಪಕ ಪಾಲಿನ ವಿಜಯದ ಅಸ್ತ್ರ. ಇದರ ಹಿಂದೆ ನಿಜಕ್ಕೂ ಇರುವುದು ವಿಜಯಲಕ್ಷ್ಮೀ. ಕೆಲವು ಬಾರಿ ಸಣ್ಣ ಕಲಹಗಳು ಉಂಟಾಗಿದ್ದರೂ, ಅವೆಲ್ಲವನ್ನೂ ದಾಟಿ ಒಬ್ಬರಿಗೊಬ್ಬರು ಪೂರಕವಾಗಿ ಸಾಗುತ್ತಿದೆ ಈ ಜೋಡಿ.

———

ಶಿವರಾಜ್ ಕುಮಾರ್- ಗೀತಾ ಶಿವರಾಜ್‌ಕುಮಾರ್

ಮಾಜಿ ಸಿಎಂ ಬಂಗಾರಪ್ಪ ಅವರ ಮಗಳು ಗೀತಾ ಶಿವರಾಜ್‌ಕುಮಾರ್. ತಂದೆಯದ್ದೂ ದೊಡ್ಡ ಕುಟುಂಬ. ಸೇರಿದ ಗಂಡನ ಮನೆಯೂ ದೊಡ್ಮನೆ. ಹೀಗಿರುವಾಗ ಎರಡೂ ಕುಟುಂಬಗಳಿಗೂ ಘನತೆ ಬರುವಂತೆ ನಡೆದುಕೊಂಡು ಬಂದಿರುವವರು ಗೀತಾ. ದೊಡ್ಮನೆಯ ದೊಡ್ಡ ಸೊಸೆಯಾಗಿ, ಪತಿಯ ಸಿನಿಮಾ, ಸಾಮಾಜಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಅವರ ಪಾತ್ರ ನಿಜಕ್ಕೂ ದೊಡ್ಡದು.

———–

ಗಣೇಶ್-ಶಿಲ್ಪಾ ಗಣೇಶ್

ತಮ್ಮ ಪ್ರತಿಭೆಯಿಂದಲೇ ಮೇಲರಳಿ ನಿಂತವರು ಗಣೇಶ್. ಹೆಸರಿಗೆ ತಕ್ಕಂತೆ ಗೋಲ್ಡನ್ ಸ್ಟಾರ್ ಆಗಿ ಮಿಂಚುತ್ತಿರುವ ಇವರ ಹಿಂದೆ ಶಿಲ್ಪಾ ಎನ್ನುವ ದೊಡ್ಡ ಶಕ್ತಿ ಇದೆ. ಪ್ರಾರಂಭದಲ್ಲಿ ಗಣೇಶ್ ಮಾಡಿದ ಸಿನಿಮಾಗಳು ಯಶ ಕಾಣುತ್ತಿದ್ದವು. ಅದೇ ವೇಳೆ ಗಣೇಶ್ ಜೊತೆಗೂಡಿದ ಶಿಲ್ಪಾ ಮುಂದೆ ಎಲ್ಲ ವ್ಯಾವಹಾರಗಳನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಪತಿಯ ಎಲ್ಲ ಸಿನಿಮಾಗಳು, ರಿಯಾಲಿಟಿ ಶೋಗಳನ್ನು ತಾವೇ ಖುದ್ದಾಗಿ ನಿರ್ವಹಣೆ ಮಾಡುತ್ತಾ ಗಣೇಶ್ ಪಾಲಿನ ಬೆನ್ನೆಲುಬು ಶಿಲ್ಪಾ.

———

ಯಶ್- ರಾಧಿಕಾ ಪಂಡಿತ್

ಇಬ್ಬರೂ ಸ್ಟಾರ್ ನಟ, ನಟಿಯರೇ. ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದ ಈ ಜೋಡಿ ಸಂಧಿಸಿದ್ದು ೨೦೧೬ರಲ್ಲಿ. ಮದುವೆ ನಂತರ ರಾಧಿಕಾ ಸಿನಿಮಾಗಳಲ್ಲಿ ನಟಿಸುತ್ತಾರಾ? ಯಶ್ ಸಿನಿಮಾ ಜರ್ನಿ ಹೇಗಿರಬಹುದು ಎಂಬೆಲ್ಲಾ ಕುತೂಹಲ ಇತ್ತು. ಅದಕ್ಕೆ ತಕ್ಕಹಾಗೆ ಯಶ್ ‘ಕೆಜಿಎಫ್’ ಎನ್ನುವ ಮೈಲುಗಲ್ಲು ನೆಟ್ಟ ಸಿನಿಮಾ ಮಾಡಿ ಮುಗಿಸಿದರು. ರಾಧಿಕಾ ಕೂಡ ಸಂಸಾರವನ್ನೂ ನಿಭಾಯಿಸಿಕೊಂಡು ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡು, ಯಶ್ ಅವರ ಯಶಸ್ಸಿನ ಪ್ರೇರಕ ಶಕ್ತಿಯಾಗಿ ನಿಂತಿದ್ದಾರೆ.

———-

ಧ್ರುವ ಸರ್ಜಾ-ಪ್ರೇರಣಾ

ಒಟ್ಟಿಗೆ ಮೂರು ಭರ್ಜರಿ ಸಿನಿಮಾಗಳನ್ನು ಕೊಟ್ಟು ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಸೃಷ್ಟಿ ಮಾಡಿದ ನಟ ಧ್ರವಾ ಸರ್ಜಾ. ಒಳ್ಳೆಯ ಸಿನಿಮಾ ಹಿನ್ನೆಲೆ ಇದ್ದರೂ ಸ್ವ ಸಾಮರ್ಥ್ಯದಲ್ಲಿ ನಿಂತವರು. ಇವರ ಬಾಳಲ್ಲಿ ಪ್ರೇರಣಾ ಎನ್ನುವ ಸ್ನೇಹಿತೆ ಜೊತೆಯಾಗಿದ್ದೇ, ಭಜರಂಗಿಯಂತೆ ಒಂಟಿಯಾಗಿದ್ದ ಧ್ರುವ ಬಾಳಲ್ಲಿ ಹೊಸ ಚಿಗುರು ಮೂಡಿತು. ವರ್ಷಕ್ಕೆ ಒಂದೇ ಸಿನಿಮಾ ಎಂಬಂತೆ ಲೆಕ್ಕಾಚಾರ ಹಾಕಿಕೊಂಡು ಸಿನಿಮಾ ಮಾಡುತ್ತಿರುವ ಧ್ರುವಾ ಮುಂದೆ ಪ್ರೇರಣಾ ಅವರ ಪ್ರೇರಣೆಯಿಂದ ಏನು ಮಾಡುತ್ತಾರೆ ನೋಡಬೇಕು.

———-

ಉಪೇಂದ್ರ- ಪ್ರಿಯಾಂಕಾ ಉಪೇಂದ್ರ

ಹೊಸತನಕ್ಕೆ ಉಪೇಂದ್ರ ಹೆಸರುವಾಸಿ. ಏನೇ ಮಾಡಿದರೂ ಅದರಲ್ಲಿ ಕ್ರಿಯೇಟಿವಿಟಿ ಗ್ಯಾರೆಂಟಿ. ಇಂತಿಪ್ಪ ಉಪೇಂದ್ರ ಸಿನಿಮಾ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡಿದ್ದ ಪ್ರಿಯಾಂಕ ಅವರನ್ನು ಮದುವೆಯಾದರು. ಅದಾದ ಮೇಲೆ ಪ್ರಿಯಾಂಕ ಉಪೇಂದ್ರ ಪಾಲಿನ ಬಹುದೊಡ್ಡ ಶಕ್ತಿಯಾದರು. ಒಂದು ಲೆಕ್ಕಕ್ಕೆ ಇಡೀ ಕುಟುಂಬವೇ ಸಿನಿಮಾ ಮಯ. ಯಾವುದೇ ಚಿತ್ರ ಫೈನಲ್ ಆಗಬೇಕಿದ್ದರೂ ಎಲ್ಲರೂ ಕೂತು ಚರ್ಚೆ ಮಾಡುತ್ತಾರೆ. ಆ ನಿಟ್ಟಿನಲ್ಲಿ ಉಪೇಂದ್ರ ಪಾಲಿಗೆ ಪ್ರಿಯಾಂಕ ವರ.

————-

ಜಗ್ಗೇಶ್-ಪರಿಮಳಾ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಈಗ ರಾಜ್ಯಸಭಾ ಸದಸ್ಯ. ರಾಯರ ಅಪ್ಪಟ ಭಕ್ತ. ಇವರ ಪಾಲಿನ ಧೀಶಕ್ತಿ ಪರಿಮಳಾ ಜಗ್ಗೇಶ್. ಒಂದು ಕಾಲದಲ್ಲಿ ಕಡುಕಷ್ಟ. ಬಾಡಿಗೆ ಮನೆಯಲ್ಲಿ ವಾಸ. ಪಾತ್ರಕ್ಕಾಗಿ ಅಲೆದಾಟ ಹೀಗೆಲ್ಲಾ ಇರುವಾಗ ಜಗ್ಗೇಶ್‌ಗೆ ಧೈರ್ಯ ತುಂಬಿದವರು ಪರಿಮಳಾ. ಇದನ್ನು ಅನೇಕ ಕಡೆಗಳಲ್ಲಿ ಜಗ್ಗೇಶ್ ಹೇಳಿಕೊಂಡಿದ್ದಾರೆ. ಬಹಿರಂಗ ಕಾರ್ಯಕ್ರಮಗಳಲ್ಲಿ ಇಬ್ಬರೂ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಪರಿಮಳಾ ಅವರ ಶ್ರಮ, ಅವರ ಧೈರ್ಯದ ದರ್ಶನವಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ