ನನಗೆ ಬಹಳ ದೊಡ್ಡ ಕನಸಿದೆ, ನಮ್ಮ ಸಂಸ್ಥೆಯ ಮೂಲಕ ತುಂಬಾ ಚಿತ್ರಗಳು ತಯಾರಾಗಬೇಕು, ಒಂದಷ್ಟು ಮಂದಿ ನಿರ್ದೇಶಕರು, ಛಾಯಾಗ್ರಾಹಕರು, ತಂತ್ರಜ್ಞರು, ಕಲಾವಿದರು ನಿರಂತರ ಕೆಲಸ ಮಾಡುತ್ತಿರಬೇಕು. ವಿಭಿನ್ನ ರೀತಿಯ ಚಿತ್ರಗಳನ್ನು ನೀಡಬೇಕು ಎನ್ನುವ ನಿರ್ದೇಶಕ ಸತ್ಯಪ್ರಕಾಶ್ ಅವರ ಹಿಂದಿನ ಚಿತ್ರ ‘ಮ್ಯಾನ್ ಆಫ್ ದ ಮ್ಯಾಚ್’ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ಜೊತೆಗಿತ್ತು. ಅದು ಅವರ ನಿರ್ಮಾಣದ ಚಿತ್ರವೂ ಹೌದು. ಅವರ ಜೊತೆ ಡಿ ಮಂಜುನಾಥ್ ನಿರ್ಮಾಪಕರಾಗಿ ಜೊತೆಗಿದ್ದರು. ‘ರಾಮಾ ರಾಮ ರೇ’, ‘ಒಂದಲ್ಲ ಎರಡಲ್ಲ’ ಚಿತ್ರಗಳ ಮೂಲಕ ತಮ್ಮದು ಚಿತ್ರರಂಗದ ಮಾಮೂಲಿ ಹಾದಿಯಲ್ಲ ಎನ್ನುವುದನ್ನು ಹೇಳಿದ್ದ ಸತ್ಯಪ್ರಕಾಶ್ ಅವರ ಹೊಸ ಚಿತ್ರದ ಶೀರ್ಷಿಕೆ ಮತ್ತು ಮೊದಲ ನೋಟವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಪುನೀತ್ ಅಗಲಿಕೆಯ ನಂತರ ಪಿಆರ್‌ಕೆ ಸಂಸ್ಥೆಯ ಆಶಯದೊಂದಿಗೆ ಮುಂದುವರಿಯುತ್ತಿರುವ ಅಶ್ವಿನಿ ಅವರು ಸಿನಿಮಾ ಸಮಾರಂಭದಲ್ಲಿ ಪಾಲ್ಗೊಂಡದ್ದು ಇದೇ ಮೊದಲು.
ಸತ್ಯ ಮೂವೀಸ್ ಮತ್ತು ಮಯೂರ ಪಿಕ್ಚರ್ಸ್ ಜೊತೆಯಾಗಿ ನಿರ್ಮಿಸುತ್ತಿರುವ ಹೊಸ ಚಿತ್ರ ‘ಅನ್‌ಲಾಕ್ ರಾಘವ’. ಈ ಚಿತ್ರದ ರಚನೆ ಸತ್ಯಪ್ರಕಾಶ್ ಅವರದಾದರೆ, ನಿರ್ದೇಶಿಸುವುದು ದೀಪಕ್ ಮಧುವನಹಳ್ಳಿ. ಸತ್ಯಪ್ರಕಾಶ್ ಪ್ರಕಾರ ಇದು ನಿಜವಾದ ಕಮರ್ಶಿಯಲ್ ಚಿತ್ರ. ಇದು ಹಾಸ್ಯ ಪ್ರಧಾನ ಪ್ರೇಮಕಥೆಯಾಗಿದ್ದು, ಇದರ ಮುಖ್ಯಪಾತ್ರಧಾರಿ ನಿರ್ಮಾಪಕ ಮಂಜುನಾಥ್ ಅವರ ಮಗ, ‘ವೀಕೆಂಡ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಿಲಿಂದ್. ಅವರ ಜೋಡಿಯಾಗಿ ರೇಚಲ್ ಡೇವಿಡ್, ಜೊತೆಗೆ ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ಸುಂದರ್ ವೀಣಾ, ಧರ್ಮಣ್ಣ ಕಡೂರು, ಭೂಮಿಶೆಟ್ಟಿ ಮೊದಲಾದವರಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಲವಿತ್ ಛಾಯಾಗ್ರಹಣ ಹಾಗೂ ಅಜಯ್ ಕುಮಾರ್ ಸಂಕಲನ ಇರಲಿದೆ.