ತಂದೆ ಮಕ್ಕಳ ಕಥೆಯನ್ನು ಹೊಂದಿದೆ ಎನ್ನಲಾಗಿರುವ ‘ಅಬ್ಬರ’, ಸತ್ಯಘಟನೆಗಳನ್ನು ಆಧರಿಸಿದೆ ಎಂದಿರುವ ‘ಮಠ’, ಎತ್ತರ ಮತ್ತು ವಯಸ್ಸಿನ ಅಂತರದ ಪ್ರೇಮಿಗಳ ಕಥೆ ಎನ್ನಲಾದ ‘ಕುಳ್ಳನ ಹೆಂಡತಿ’ ಕತೆಗಾರನೊಬ್ಬನ ಕತೆ ಹೇಳುವ ‘ಆವರ್ತ’, ದಕ್ಷಿಣ ಕನ್ನಡದಲ್ಲಿ ಚಿತ್ರೀಕರಣವಾಗಿರುವ ‘ಖಾಸಗಿ ಪುಟಗಳು’, ಒಂದೇ ಪಾತ್ರದ ಚಿತ್ರ ಎಂದು ಚಿತ್ರತಂಡ ಹೇಳಿರುವ ‘ದ ಫಿಲಂ ಮೇಕರ್’ ಈ ಆರು ಚಿತ್ರಗಳು ಈ ವಾರ ತೆರೆಗೆ ಬರುವುದಾಗಿ ಪ್ರಕಟಿಸಿವೆ. ಇವುಗಳ ಜೊತೆ, ರಾಜಕುಮಾರ್ ಅಭಿನಯದ ‘ಭಾಗ್ಯವಂತರು’, ಶಂಕರನಾಗ್ ಅಭಿನಯದ ‘ಎಸ್‌ಪಿ ಸಾಂಗ್ಲಿಯಾನ’ ಚಿತ್ರಗಳು ಮತ್ತೆ ತೆರೆಗೆ ಬರಲಿವೆ. ಹಿಂದೆಂದೂ ಕಾಣದ ಜನಪ್ರಿಯತೆಯನ್ನು ಕಂಡ ‘ಕಾಂತಾರ’ಕ್ಕೆ ಇಂದು ಐವತ್ತನೇ ದಿನ.
‘ಅಬ್ಬರ’
ಸಿ. ಅಂಡ್ ಎಂ. ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ನಿರ್ಮಿಸಿರುವ ಚಿತ್ರ ‘ಅಬ್ಬರ’. ‘ಟೈಸನ್’, ‘ಕ್ರ್ಯಾಕ್’ಗಳ ಕೆ.ರಾಮ್ ನಾರಾಯಣ್ ನಿರ್ದೇಶನದ ಈ ಚಿತ್ರದ ಮುಖ್ಯಪಾತ್ರಧಾರಿ ಪ್ರಜ್ವಲ್ ದೇವರಾಜ್. ಅವರೊಂದಿಗೆ ರಾಜಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ಶೋಭರಾಜ್, ರವಿಶಂಕರ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ಇದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ, ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ ಚಿತ್ರಕ್ಕಿದೆ.
‘ಮಠ’
ವಿ ಆರ್ ಕಂಬೈನ್ಸ್ ಲಾಂಛನದಲ್ಲಿ ಆರ್.ರಮೇಶ್ ನಿರ್ಮಿಸಿರುವ ಚಿತ್ರ ‘ಮಠ’. ‘ಪುಟಾಣಿ ಸಫಾರಿ’, ‘ವರ್ಣಮಯ’, ‘ವಾಸಂತಿ ನಲಿದಾಗ’ ಚಿತ್ರಗಳ ರವೀಂದ್ರ ವೆಂಶಿ ರಚನೆ, ನಿರ್ದೇಶನದ ಚಿತ್ರವಿದು. ಬಹು ತಾರಾಗಣದ ಈ ಚಿತ್ರದಲ್ಲಿ ಸಂತೋಷ ದಾವಣಗೆರೆ ಮುಖ್ಯಭೂಮಿಕೆಯಲ್ಲಿದ್ದು, ಜೊತೆಗೆ ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್, ಬಿರಾದರ್ ಮುಂತಾದವರಿದ್ದಾರೆ. ಜೀವನ್ ಗೌಡ ಛಾಾಂಗ್ರಹಣ, ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಗೀತರಚನೆ, ಸಿ. ಶ್ರೀ ಗುರು ಸಂಗೀತ ನಿರ್ದೇಶನ, ರವಿಚಂದ್ರನ್ ಸಂಕಲನ,
‘ಆವರ್ತ’
ವಿಜೇತ ಚಿತ್ರ ಲಾಂಛನದಲ್ಲಿ ವೇಮಗಲ್ ಜಗನ್ನಾಥ್ ತಮ್ಮ ಗೆಳೆಯರೊಂದಿಗೆ ಸೇರಿ ನಿರ್ಮಿಸಿರುವ ಚಿತ್ರ ‘ಆವರ್ತ. ಇದರ ರಚನೆ, ನಿರ್ದೇಶನವೂ ಅವರದೇ. ಅತಿಶಯ ಜೈನ್ ಸಂಗೀತ ಸಂಯೋಜನೆ, ಮಲ್ಲಿಕಾರ್ಜುನ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ‘ಆವರ್ತ’ಕ್ಕಿದೆ. ಧನ್ವಿತ್, ಜಯ ಚಂದ್ರ, ನಯನ, ಮೇಘಶ್ರೀ ಮುಖ್ಯ ಭೂಮಿಕೆಯ ಈ ಚಿತ್ರದ ವಿಶೇಷ ಪಾತ್ರದಲ್ಲಿ ಹಿರಿಯ ನಟ ಶಿವರಾಮ್ ಇದ್ದಾರೆ.
‘ಖಾಸಗಿ ಪುಟಗಳು’
ಎಸ್ ವಿ ಎಂ ಮೋಶನ್ ಪಿಕ್ಚರ್ ಲಾಂಛನದಲ್ಲಿ ಮಂಜು ವಿ ರಾಜ್, ವೀಣಾ ವಿ ರಾಜ್, ಮಂಜುನಾಥ್ ಡಿ ಎಸ್ ನಿರ್ಮಿಸಿರುವ ಚಿತ್ರ ‘ಖಾಸಗಿ ಪುಟಗಳು’. ಸಂತೋಷ್ ಶ್ರೀಕಂಠಪ್ಪ ರಚನೆ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ವಿಶ್ವ ಆರ್ ಎನ್, ಲಿಯೋನಿಲಾ ಡಿ’ಸೋಜಾ, ಚೇತನ್ ದುರ್ಗಾ, ನಂದಗೋಪಾಲ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಮಂಗಳೂರು ಮುಂತಾದವರಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ವಾಸುಕಿ ವೈಭವ್ ರಾಗಸಂಯೋಜನೆ, ರಾಕೇಶ್ ಆಚಾರ್ಯ ಹಿನ್ನಲೆ ಸಂಗೀತ, ಆಶಿಕ್ ಕುಸುಗೋಳಿ ಸಂಕಲನ ಚಿತ್ರಕ್ಕಿದೆ.
‘ಕುಳ್ಳನ ಹೆಂಡತಿ’
ಸ್ಟಾರ್ ವೆಂಚರ್ಸ್ ಲಾಂಛನದಲ್ಲಿ ತಾಂರಾಗಿರುವ ಚಿತ್ರ ‘ಕುಳ್ಳನ ಹೆಂಡತಿ’. ವಿಶಾಖ್ ರಚನೆ, ನಿರ್ದೇಶನದ ಈ ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ಹಾಗೂ ರಾಸಿಕಾ ಬೀರೇಂದ್ರ ಮುಖ್ಯಪಾತ್ರಧಾರಿಗಳು. ಅವರೊಂದಿಗೆ ದೀಪಿಕಾ, ಅರಸೀಕೆರೆ ರಾಜು, ಕೆಂಚಣ್ಣ, ಜಯಾ, ಬಾಲ ಕಲಾವಿದೆ ದ್ರಿಯಾ ಇದ್ದಾರೆ. ಪರಮ್ ನಿರ್ವಿಕಾರ್ ಮೊದಲಬಾರಿಗೆ ಸಂಗೀತ ನಿರ್ದೇಶನ, ಶಿನೂಬ್ ಛಾಯಾಗ್ರಹಣ ಇದೆ.
‘ದಿ ಫಿಲಂ ಮೇಕರ್’
ಆರ್ಯ ಎಸ್. ರೆಡ್ಡಿ ರಚನೆ, ಸಂಕಲನ, ಛಾಯಾಗ್ರಹಣ ಮತ್ತು ನಿರ್ದೇಶನದ ಚಿತ್ರ ‘ದಿ ಫಿಲಂ ಮೇಕರ್’. ಅವರ ಗೆಳೆಯರು ನಿರ್ಮಿಸಿರುವ ಈ ಚಿತ್ರದ ಒಂದೇ ಒಂದು ಪಾತ್ರದ ಚಿತ್ರವಾಗಿದ್ದು, ಸುನಿಲ್ ಗೌಡ ಈ ಪಾತ್ರದಲ್ಲಿದ್ದಾರೆ. ವಿಶಾಲ್ ಆಲಾಪ್ ರಾಗಸಂಯೋಜನೆ, ವಿಶ್ವಾಸ್ ಕೌಶಿಕ್ ಹಿನ್ನೆಲೆ ಸಂಗೀತ ಇದೆ.