ಮೈಸೂರು ವಿವಿ ಮುಂಭಾಗದ ಕುವೆಂಪು ಪ್ರತಿಮೆ ಸೇರಿ ಹಲವು ಕಲಾಕೃತಿ ರಚನೆ ಸಾಂಸ್ಕೃತಿಕ ನಗರಿ ಮೈಸೂರನ್ನು ಒಂದು ಸುತ್ತು ಹಾಕಿದರೆ ಸಾಕಷ್ಟು ಸಾಧಕರ ಪ್ರತಿಮೆಗಳನ್ನು ಕಣ್ತುಂಬಿಕೊಳ್ಳಬಹುದು. ಹಾಗೆ ನೋಡಿದರೆ ಒಂದೊಂದು ವೃತ್ತದಲ್ಲೂ ಪ್ರಮುಖರೊಬ್ಬರ ಪ್ರತಿಮೆ ಇದ್ದೇ ಇರುತ್ತದೆ. ಇಂತಹ ಹಲವಾರು ಪ್ರತಿಮೆಗಳ ಹಿಂದಿನ ಕರ್ತೃ ಶಿಲ್ಪ ಕಲಾವಿದ ವಿ.ಎ. ದೇಶಪಾಂಡೆ.
ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯದ್ವಾರದಲ್ಲಿ ಇರುವ ಕುವೆಂಪು ಪ್ರತಿಮೆ ಗಮನಿಸಿದ್ದೀರಾ? ಗಾಂಧಿ ವೃತ್ತದಲ್ಲಿ ಇರುವ ಗಾಂಧಿ ಪ್ರತಿಮೆ? ರೈಲ್ವೆ ನಿಲ್ದಾಣದ ಮುಂದಿರುವ ಬಾಬು ಜಗಜೀವನ್ ರಾಮ್ ಪ್ರತಿಮೆ? ಹೀಗೆ ಪ್ರಶ್ನೆ ಮಾಡುತ್ತಾ ಹೋದರೆ ಅದೇ ಆದೀತು.
ಈ ಪ್ರತಿಮೆಗಳ ಹಿಂದಿನ ಶಕ್ತಿ ಕಾವಾದ ನಿರ್ದೇಶಕರಾಗಿದ್ದ ವಿ.ಎ.ದೇಶಪಾಂಡೆ. ತಮ್ಮ ವಿಶೇಷ ದೃಷ್ಟಿಕೋನಗಳಿಂದ ನಿರ್ಮಿಸಿದ ಪ್ರತಿಮೆಗಳು ಹಲವಾರು ವಿಶೇಷಗಳನ್ನು ಹೊಂದಿವೆ. ಹಾಗೆ ನೋಡಿದರೆ ಮೈಸೂರು ವಿವಿ ಮುಂಭಾಗದಲ್ಲಿ ಇರುವ ಬೆತ್ತದ ಕುರ್ಚಿಯ ಮೇಲೆ ಕುಳಿತ ಕುವೆಂಪು ಅವರ ಪ್ರತಿಮೆ ವಿಶಿಷ್ಟವಾದುದು. ಏಕೆಂದರೆ ನಿಂತಿರುವ ಕುವೆಂಪು ಪ್ರತಿಮೆಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಕುಳಿತ ಪ್ರತಿಮೆ ವಿರಳ. ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಅಂಗವಾಗಿ ದೇಶಪಾಂಡೆಯವರು ಈ ಪ್ರತಿಮೆ ನಿರ್ಮಿಸಿ ಮೈಸೂರು ವಿವಿಯ ಮೊದಲ ಕುಲಪತಿಗಳಾದ ಕುವೆಂಪು ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದ್ದರು.
ಮೈಸೂರಿನ ರೈಲು ನಿಲ್ದಾಣ ಎದುರಿನ ಬಾಬು ಜಗಜೀವನ್ ರಾಮ್ ಪ್ರತಿಮೆ, ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಕಂಚಿನ ಪ್ರತಿಮೆ, ಮೈಸೂರಿನ ವಿವೇಕಾನಂದ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆ, ಕೆ.ಡಿ.ವೃತ್ತದಲ್ಲಿರುವ ಕೃಷ್ಣದೇವರಾಯನ ಕಂಚಿನ ಪ್ರತಿಮೆ, ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆ, ಕೆ.ಎಂ.ಕಾರಿಯಪ್ಪ ವೃತ್ತ ದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಕಂಚಿನ ಪ್ರತಿಮೆಗಳ ಹಿಂದಿನ ರೂವಾರಿ ವಿ.ಎ.ದೇಶಪಾಂಡೆ.
ಮೈಸೂರಿನಾಚೆಗೂ ಕೈ ಚಳಕ
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಸಾಂಸ್ಕೃತಿಕ ಸಾಮರಸ್ಯಕ್ಕೆ ಮುನ್ನುಡಿ ಬರೆದಾಗ ತಮಿಳಿಗರು ಚೆನ್ನೈನಲ್ಲಿ ಸರ್ವಜ್ಞನ ಕಂಚಿನ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಿದ್ದರು. ಆಗ ದೇಶಪಾಂಡೆ ಅವರು ಪ್ರತಿಮೆಯ ಉಸ್ತುವಾರಿ ಹೊತ್ತು, ತಮಿಳು ನೆಲದಲ್ಲಿ ಕನ್ನಡಿಗನ ಮೂರ್ತಿ ಸ್ಥಾಪಿಸಿದ್ದರು. ಇದರ ಜೊತೆಗೆ ಉಡುತಡಿಯಲ್ಲಿರುವ ಅಕ್ಕಮಹಾದೇವಿಯ ಕಂಚಿನ ಪ್ರತಿಮೆ, ಬೆಂಗಳೂರಿನಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವೃತ್ತದ ರಾಣಿ ಅಬ್ಬಕ್ಕಾದೇವಿಯ ಕಂಚಿನ ಪ್ರತಿಮೆ… ಹೀಗೆ ದೇಶಪಾಂಡೆ ಅವರ ಹತ್ತಾರು ಕಲಾಕೃತಿಗಳನ್ನು ಉದಾಹರಿಸಬಹುದು.
ಶಿಲ್ಪಕಲೆಯೇ ಜೀವಾಳ
ದೇಶಪಾಂಡೆ ಅವರ ಹವ್ಯಾಸ ಶಿಲ್ಪಕಲೆ. ವೃತ್ತಿಯಲ್ಲಿ ಶಿಲ್ಪಕಲಾ ಪ್ರಾಧ್ಯಾಪಕ, ಮೈಸೂರಿನ ಕಾವಾ (ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ) ಡೀನ್ ಆಗಿದ್ದವರು. ನಿವೃತ್ತಿ ನಂತರ ಪೂರ್ಣಾವಧಿಯ ಶಿಲ್ಪಕಲಾವಿದರಾಗಿದ್ದ ಪ್ರೊ.ವಿ.ಎ.ಡಿ ಅವರ ಊರು ಶಿಲ್ಪಕಲೆಯ ತವರೂರಾದ ಬಾದಾಮಿ (ಜನನ ೧೯೫೫) ಅಲ್ಲಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೆಲೆಯೂರಿ ಶಿಲ್ಪಕಲೆಯಲ್ಲಿ ತಮ್ಮ ಛಾಪನ್ನು ಒತ್ತಿದವರು. 66 ವರ್ಷಗಳ ತಮ್ಮ ಬದುಕನ್ನು ಶಿಲ್ಪಕಲೆಗೆ ಮುಡಿಪಿಟ್ಟಿದ್ದ ಅವರು ೨೦೧೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕ ೃ ತರಾಗಿದ್ದರು. ೨೦೨೧ರ ಮೇನಲ್ಲಿ ನಿಧನರಾದ ಇವರು ಇಲವಾಲ ಬಳಿಯ ಚಿಕ್ಕೇಗೌಡನಕೊಪ್ಪಲಿನಲ್ಲಿ ಅವರೇ ಕಟ್ಟಿದ ಪ್ರತಿಮಾ ಸ್ಟುಡಿಯೋದ ಮೂಲಕ ಇನ್ನೂ ನಮ್ಮೊಂದಿಗೆ ಜೀವಂತವಾಗಿದ್ದಾರೆ..
ಶಿಷ್ಯರಿಂದ ಕೃತಿ ರಚನೆ
ದೇಶಪಾಂಡೆ ಅವರ ಶಿಷ್ಯ ಡಾ.ಆರ್.ಎಚ್.ಕುಲಕರ್ಣಿ ‘ಶಿಲ್ಪ ಕಲಾವಿದ ವಿ.ಎ. ದೇಶಪಾಂಡೆ’ ಕೃತಿ ರಚಿಸಿದ್ದಾರೆ. ಆರ್ಟ್ ಪೇಪರ್ ಬಳಸಿರುವ, ಕೇಸ್ ಬಾಕ್ಸ್ ಬೈಂಡಿಂಗ್ ಹೊಂದಿದ ಪುಸ್ತಕ ಇದಾಗಿದ್ದು, ದೇಶಪಾಂಡೆ ಅವರ ಕಲಾಕೃತಿಗಳ ಚಿತ್ರಗಳೂ ಇಲ್ಲಿವೆ. ಪತ್ನಿ ಪ್ರಮೋದಿನಿ ಅವರು ನೆರವಾಗುತ್ತಿದ್ದ ಬಗೆ, ಪ್ರತಿಮಾ ಸ್ಟುಡಿಯೋ ಕುರಿತ ಮಾಹಿತಿಯನ್ನೂ ಕೃತಿ ಒಳಗೊಂಡಿದೆ. ಮೈಸೂರಿನ ಸ್ಟುಡಿಯೋ ಪ್ರತಿಮಾ ಪ್ರಕಟಿಸಿರುವ ಪುಸ್ತಕದ ಕುರಿತ ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9880105526 ಸಂಪರ್ಕಿಸಬಹುದು.