ಮಗುವೊಂದು ತಾಯಿಯ ಒಡಲೊಳಗೆ 9 ತಿಂಗಳು ಇರುತ್ತದೆ. ಆ ನವಮಾಸ ಮಗು ಮತ್ತು ತಾಯಿ ಇಬ್ಬರಿಗೂ ಅಮೂಲ್ಯವೆ. ನಾವು ಜಗತ್ತಿನ ಯಾವುದೇ ಮೂಲೆಗೆ ಹೋದರೂ ತಾಯಿಯ ಗರ್ಭಾಶಯದಲ್ಲಿ ಮಗು ಇರುವುದು 9 ತಿಂಗಳು ಮಾತ್ರವೇ. ಆದರೆ ಜೀವರಾಶಿಗಳಲ್ಲೆಲ್ಲಾ ಇದೇ ಸಮಯ ಇರುವುದಿಲ್ಲ. ಕೆಲವು ಪ್ರಾಣಿಗಳಲ್ಲಿ ನಾಲ್ಕೇ ತಿಂಗಳಿಗೆ ಹೆರಿಗೆಯಾದರೆ ಮತ್ತು ಕೆಲವು ೨ ವರ್ಷಗಳ ವರೆಗೂ ತಮ್ಮ ಕಂದಮ್ಮನನ್ನು ಹೊಟ್ಟೆಯಲ್ಲಿಟ್ಟುಕೊಂಡು ಪೋಷಣೆ ಮಾಡುತ್ತವೆ. ಅದರಲ್ಲಿ ಆನೆಯೇ ಮೊದಲನೆಯದು.
ಹೌದು ಜಗತ್ತಿನಲ್ಲಿ ಇರುವ ಮರಿ ಹಾಕುವ ಪ್ರಾಣಿಗಳಲ್ಲಿ ಆನೆಯೇ ಅತ್ಯಂತ ದೀರ್ಘಾವಧಿ (೨ ವರ್ಷ)ವರೆಗೂ ಮರಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಳ್ಳುವುದು. ಇದರಲ್ಲಿಯೂ ಆಫ್ರಿಕಾದ ಆನೆಗಳು ಬರೋಬ್ಬರಿ 645 ದಿನಗಳು, ಏಷ್ಯಾದ ಆನೆಗಳು ೬೧೭ ದಿನಗಳ ಕಾಲ ಮರಿಯನ್ನು ಗರ್ಭದಲ್ಲಿ ಇರಿಸಿಕೊಳ್ಳುತ್ತವೆ. ಹೀಗೆ ಅತ್ಯಂತ ದೀರ್ಘ ಅವಧಿಯವರೆಗೆ ಮರಿಯನ್ನು ಪೊರೆಯುವ ಆನೆಗಳು ಒಮ್ಮೆಗೆ ಒಂದೇ ಮರಿಯನ್ನು ಹಾಕುತ್ತವೆ. ಮತ್ತೆ ಇವುಗಳು ತಮ್ಮ ಜೀವಿತದ (70 ವರ್ಷ) ಕಾಲದಲ್ಲಿ 12 ಮರಿಗಳನ್ನು ಹಾಕುತ್ತವೆ.