Mysore
23
overcast clouds
Light
Dark

ಕಂದಾಚಾರಗಳನ್ನು ಮೆಟ್ಟಿನಿಂತ ಹಿರಿಯರು

• ಶ್ರೀಮತಿ ಹರಿಪ್ರಸಾದ್

9 ದಶಕಗಳಿಗೂ ಹಿಂದಿನ ಮಾತು. 1930ರ
ಆದಿಭಾಗ, ಆಗಿನ ನಮ್ಮದು ಒಂದು ಸಾಧಾರಣ
ಮಧ್ಯಮವರ್ಗದ ಕುಟುಂಬ, ಮನೆಯಲ್ಲಿ 4 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಮೊದಲನೆಯ ಮಗನಿಗಷ್ಟೆ ಮದುವೆಯಾಗಿತ್ತು. ಮೊದಲನೆಯ ಮಗಳಿಗೆ ಸುಮಾರು 14-15 ವರ್ಷಗಳಿರಬಹುದು. ಮದುವೆ ಮಾಡಿದರು. ಹುಡುಗ ಮಹಾರಾಜ ಕಾಲೇಜಿನಲ್ಲಿ ಪ್ರೊ.ರೋಲೋ, ಪ್ರೊ.ಈಗಲ್‌ಟನ್ ಅವರು ಇದ್ದ ಕಾಲದಲ್ಲಿ ಇಂಗ್ಲಿಷ್ ಎಂ.ಎ. ಮಾಡಿದ್ದರು.

ಕಮಲ ಮತ್ತು ಕೃಷ್ಣ (ಸಾಂದರ್ಭಿಕ ಹೆಸರುಗಳು) ಮದುವೆಯಾಗಿ ಒಂದು ಗಂಡುಮಗು ಹುಟ್ಟಿ ಅಸುನೀಗಿತು. ಎರಡನೆಯ ಗಂಡು ಮಗು ಹುಟ್ಟಿದ ಒಂದು ವರ್ಷದ ನಂತರ ಯಾವ ಕಾರಣಕ್ಕಾಗಿಯೋ 20-21ರ ವಯಸ್ಸಿನ ಕಮಲಳನು ಮಗುವಿನೊಡನೆ ಆಕೆಯ ಅತ್ತೆಯ ಮನೆಯವರು, ಅವರಿದ್ದ ಊರಿನಲ್ಲಿನ ಕಮಲಳ ದೊಡ್ಡಪ್ಪನ ಮನೆಗೆ ಬಿಟ್ಟು ಬರುತ್ತಿದ್ದರು. ಕೆಲವು ತಿಂಗಳು ಹೀಗೆಯೇ ನಡೆಯುತ್ತಿದ್ದಿತು. ಕಮಲಳ ದೊಡ್ಡಪ್ಪ ಆಕೆ ಮತ್ತು ಮಗುವನ್ನು ಆಕೆಯ ಅತ್ತೆಯ ಮನೆಗೆ ವಾಪಸ್ಸು ಒಯ್ದು ಬಿಟ್ಟುಬರುತ್ತಿದ್ದರು. ಹಲವು ಬಾರಿ ಹೀಗಾಯಿತು. ಚಿಕ್ಕವಯಸ್ಸಿನ ತರುಣಿ ಕಮಲಳಿಗೆ ಹೇಳುವ, ಕೇಳುವ ಯಾವ ಧೈರ್ಯವೂ ಇರಲಿಲ್ಲ. ಈ ಮಧ್ಯೆ ಕಮಲಳ ಚಿಕ್ಕಮ್ಮನ ಗಂಡನಿಗೆ ವರ್ಗಾವಣೆಯಾದ ಬಳಿಕ ಕಮಲ ಇದ್ದ ಅದೇ ಊರಿಗೆ ಬಂದರು.

ಅವರು ಅಕ್ಕನ ಮಗಳಿಗೆ ಹೀಗೆ ಆಗುತ್ತಿದ್ದುದನ್ನು ನೋಡಿ ತಮ್ಮ ಮನೆಗೂ ಒಂದೆರಡು ಬಾರಿ ಕರೆದುಕೊಂಡು ಹೋಗಿದ್ದರು.
ಬಳಿಕ ಕಮಲ ಒಂದೂವರೆ ವರ್ಷದ ಮಗುವಿನೊಡನೆ ತಾಯಿಯ ಮನೆಗೆ ಕಮಲಳಿಗೆ ಹಾಕಿ ಕಳುಹಿಸಿದ್ದ ಆಭರಣಗಳನ್ನು ತೆಗೆದು ಅತ್ತೆಯ ಮನೆಯವರು ಕಳುಹಿಸಿಬಿಟ್ಟರು.

 

ಹೀಗೆ ಏಕಾಯಿತು? ಆ ಕುಟುಂಬದ ಯಾರಿಗೂ ತಿಳಿಯದ ವಿಷಯ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಅಗತ್ಯ ಅಷ್ಟಾಗಿರಲಿಲ್ಲ. ಅದೇ ರೀತಿ ಕಮಲಳ ವಿದ್ಯಾಭ್ಯಾಸವೂ ಪ್ರಾಥಮಿಕ ಶಾಲಾ ಹಂತಕ್ಕೇ ಮುಗಿದಿತ್ತು. ಆದರೆ ಇಲ್ಲಿ ನಾವು ಕಮಲಳ ತಂದೆಯನ್ನು ನೆನೆಯಲೇಬೇಕು. ಅವರು ತಲೆಯ ಮೇಲೆ ಕೈಯಿಟ್ಟುಕೊಂಡು ಕೂರದೆ ಮಗಳನ್ನು ಓದಿಸಿ, ಅವಳ ಕಾಲಮೇಲೆ ಅವಳನ್ನು ನಿಲ್ಲಿಸಬೇಕೆಂದು ನಿರ್ಧರಿಸಿದರು. ಕಮಲ ಅವರಿಗೋ ಅಳು, ಮಗನನ್ನು ಓದಿಸಿದರೆ ಸಾಕು, ನಾನು ನಿಮ್ಮ ಮನೆ ಕೆಲಸ ಮಾಡಿಕೊಂಡು ಇದ್ದುಬಿಡುತ್ತೇನೆ ಅಂದಳು.

ಅವರ ತಂದೆ ಕೇಳಬೇಕಲ್ಲ. ಕಮಲಳನ್ನು ಶಾಲೆಗೆ ಸೇರಿಸಿದರು. ಹೋಗಿಬರುವ ಅಭ್ಯಾಸ ಮಾಡಿಕೋ ಮಗಳೇ ಎಂದರು. ಆಕೆಗೋ ಅವಮಾನ. ಸಹಪಾಠಿಗಳೆಲ್ಲ ಒಳಗಚ್ಚೆ ಸೀರೆಯುಟ್ಟು ತರಗತಿಗೆ ಬರುವ ಈಕೆಯನ್ನು ಕುತೂಹಲದಿಂದ ನೋಡುತ್ತಿದ್ದರು. ಕಮಲಳಿಗೆ ಎಲ್.ಎಸ್.(ಲೋಯರ್ ಸೆಕೆಂಡರಿ) ಎಂಬ ಮಾಧ್ಯಮಿಕಶಾಲೆಯ (ಮಿಡಲ್ ಸ್ಕೂಲ್) ಅಂತಿಮ ಪರೀಕ್ಷೆ ಮಾಡಿಕೊಳ್ಳುವಂತೆ ತಂದೆ ಒತ್ತಾಸೆ ಮಾಡಿದರು. ಒಂದು ಬಾರಿ ಸಹಿ ಮಾಡುವುದಿಲ್ಲವೆಂದ ಆಕೆಯ ಸಹಿಯನ್ನೂ ರಾಮಯ್ಯನವರೇ ಮಾಡಿದ್ದೂ ಉಂಟು. ಇದು ಸರಿಯಲ್ಲ ಹೌದು. ಆದರೆ ಅಂತಹ ಸಾಂಪ್ರದಾಯಿಕ ಯುಗದಲ್ಲಿಯೂ ಮಗಳನ್ನು ಹೇಗಾದರೂ ಓದಿಸಬೇಕೆಂದು ಅವರು ಪಟ್ಟು ಹಿಡಿದುದನ್ನು ಮೆಚ್ಚಬೇಕು.

ಮುಂದೆ ಕಮಲ ಅವರು ಪ್ರೌಢಶಾಲೆಯನ್ನೂ ಕಷ್ಟಪಟ್ಟು ಇಷ್ಟವಿಲ್ಲದಿದ್ದರೂ ಓದಿ ಮುಗಿಸಿದರು. ಆನಂತರ ಆಗಿನ ಮೆಡಿಕಲ್ ಡಿಪ್ಲೊಮಾ (ಎಲ್. ಎಮ್.ಪಿ- ಲೈಸೆನ್ಸಿಯೇಟೆಡ್ ಮೆಡಿಕಲ್ ಪ್ರಾಕ್ಟಿಷನರ್)ಗೆ ಸೀಟು ಪಡೆದು, ಮಗಳನ್ನು ಸೇರಿಸಿದರು. ಅದನ್ನೂ ಇಷ್ಟವಿಲ್ಲದೆ ಅಳುತ್ತಲೇ
ಕಮಲ ಅವರು ಓದಿದರಾದರೂ ಮಿಡ್‌ವೈಫರಿ ವಿಷಯದಲ್ಲಿ ಮೆಡಲ್ ಗಿಟ್ಟಿಸಿದರು. ಸುಮಾರು 1945ರಲ್ಲಿ ಅವರಿಗೆ ಸರ್ಕಾರಿ ಡಾಕ್ಟರ್ ಕೆಲಸ ದೊರೆಯಿತು. ರಾಮಯ್ಯನವರು ನೆಮ್ಮದಿಯ
ಉಸಿರೆಳೆದರು.

ಒಟ್ಟಿನಲ್ಲಿ ಕಮಲ ಅವರು ಮುಂದೆ ಮೂರು ದಶಕಗಳಿಗೂ ಹೆಚ್ಚು ಕಾಲ ವೈದ್ಯೆಯಾಗಿ ಕೆಲಸ ಮಾಡಿದರು. ವರ್ಗವಾದ ಊರುಗಳಿಗೆಲ್ಲಾ ಹೋದರು. ಬಹಳಷ್ಟು ಚಿಕ್ಕನಗರಗಳಲ್ಲೇ ಅವರ ಸರ್ವಿಸ್ ನಡೆಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿದರು. ಆದ್ದರಿಂದ ಅವರ ವೈದ್ಯಕೀಯ ಅನುಭವದ ಸಂಪತ್ತು ಅಪಾರವಾಗಿ ಬೆಳೆಯಿತು. ಲೆಕ್ಕವಿಲ್ಲದಷ್ಟು ಹೆರಿಗೆಗಳನ್ನು ಮಾಡಿದರು, ನಿಷ್ಣಾತರಾದರು.

ಹೆರಿಗೆಯಾಗುವಾಗ ಹುಟ್ಟುವ ಮಗುವಿನ
ತಲೆ ಮೊದಲು ಬರಬೇಕು. ಆದರೆ ಅನೇಕ ತಾಯಂದಿರಿಗೆ ಇದು ಹೀಗಾಗದೆ ಹೆರಿಗೆಯ
ಶ್ರಮ ಹೆಚ್ಚುತ್ತದೆ. ಇದಕ್ಕೆ ‘ಬ್ರೀಚ್ ಕೇಸ್’ ಎನ್ನುತ್ತಾರೆ. ಇಂತಹ ಹೆರಿಗೆಯ ಅನುಮಾನವಿದ್ದಾಗ ಗರ್ಭಿಣಿಯ ಉದರದಲ್ಲಿ ಅಡ್ಡಡ್ಡ ಇರುವ ಭ್ರೂಣ ಶಿಶುವನ್ನು 5ನೇ ತಿಂಗಳಿನಿಂದಲೇ ಒಂದು ಬಗೆಯಲ್ಲಿ ನಿಧಾನವಾಗಿ ಚಲಿಸುತ್ತಾ ಹೆರಿಗೆಯ ಸಮಯಕ್ಕೆ ಅದು ಸರಿಯಾದ ಜಾಗಕ್ಕೆ ಬರುವಂತೆ ಕಮಲ ಅವರು ಮಾಡುತ್ತಿದ್ದರೆಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ. ಇಂತಹ ನೂರಾರು ಕೇಸ್‌ಗಳನ್ನು ಕಮಲ ಅವರು ನಡೆಸಿದ್ದಾರೆ.

ಕಾಲಗಣನೆಯ ದೃಷ್ಟಿಯಿಂದ ರಾಮಯ್ಯನವರ ದೂರದೃಷ್ಟಿಯನ್ನು ಬಹಳವೇ ಮೆಚ್ಚಿಕೊಳ್ಳಬೇಕು. ಕಮಲ ಅವರಿಗೆ ಸ್ವತಂತ್ರವಾಗಿ ಬಾಳುವ ಹಕ್ಕನ್ನು ನಿರ್ಮಿಸಿಕೊಟ್ಟರು. ಆಕೆ ದಿಟ್ಟವಾಗಿ ಬೆಳೆದರು. ತನಗೆ ಬರುತ್ತಿದ್ದ ಪಿಂಚಣಿಯಲ್ಲಿ ತನ್ನದೇ ಸ್ವಂತ ಮನೆಯನ್ನು ಮಾಡಿಕೊಂಡರು. ಕೊನೆಗೆ ತನಗೆ ಬರುತ್ತಿದ್ದ ಪಿಂಚಣಿಯಲ್ಲಿ ಜೀವನ ಮಾಡುತ್ತಿದ್ದರು. ಈಗ 80 ವರ್ಷಗಳ ಹಿಂದೆಯೇ ಸಮಾಜದ ಕಾಕದೃಷ್ಟಿಗೆ ಹಿಂಜರಿಯದೆ ಮಾಡಿದ ರಾಮಯ್ಯನವರ ಕೈಂಕರ್ಯ ಎಲ್ಲರಿಗೂ ಒಂದು ಮಾದರಿ. ಇದು ಕಾಲ್ಪನಿಕ ಕಥೆಯಲ್ಲ, ನಿಜವಾಗಿ ನಡೆದ ಸಂಗತಿ.