‘ಒಂದು ಬಾರಿ ಹೀಗಾಗಿತ್ತು. ಒಂದು ನಾಯಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಮರಿ ಹಾಕಿತ್ತು. ಬಳಿಕ ನನ್ನ ಬಳಿ ಬಂದು ನನ್ನನ್ನು ಕರೆಯುವಂತೆ ಎಳೆಯುತ್ತಿತ್ತು. ಎಲ್ಲೋ ಇದು ಮರಿ ಹಾಕಿದೆ ಎಂದುಕೊಂಡು ಅದರ ಹಿಂದೆ ಹೋದೆ. ನಾನು ಹಿಂದೆ ಬರುತ್ತಿದ್ದೇನೋ ಇಲ್ಲವೋ ಎಂದು ಆಗಾಗ ಹಿಂದೆ ತಿರುಗಿ ನೋಡುತ್ತಲೇ ಇತ್ತು. ನಾನು ಹಿಂದೆ ಬರುತ್ತಿರುವುದನ್ನು ಕಂಡು ಸಂತೋಷದಿಂದ ಬಾಲ ಅಳ್ಳಾಡಿಸುತ್ತಾ ಮರಿ ಹಾಕಿದ್ದ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ನಾನು ಆ ಮರಿಗಳನ್ನು ಎತ್ತುಕೊಂಡು ನಮ್ಮ ಮನೆಗೆ ತಂದು ಪೋಷಣೆ ಮಾಡಿದೆ’
ಇದು ಚಾ.ನಗರದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ನರ್ಗೀಸ್ ಭಾನು ಅವರ ಕಥೆ. ಬೀದಿ ನಾಯಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ತಮ್ಮ ಮನೆಯ ಸುತ್ತಮುತ್ತಲೂ ಇರುವ ನಾಯಿಗಳಿಗೆ ನಿತ್ಯ ಆಹಾರ, ಆರೋಗ್ಯ ಕೆಟ್ಟರೆ ಚಿಕಿತ್ಸೆ ಕೊಡಿಸುತ್ತಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.
ನಾಯಿಗಳ ಬಗ್ಗೆ ನನಗೆ ಬಾಲ್ಯದಿಂದಲೂ ಪ್ರೀತಿ ಇದೆ. ಇದು ನನಗೆ ಅಪ್ಪನಿಂದ ಬಂದಿದ್ದು. ಮದುವೆ ಆದ ಮೇಲೆ ಮನೆಗೆ ಒಂದು ನಾಯಿ ತಂದು ಸಾಕಿದೆ. ಪತಿಯೂ ಇದಕ್ಕೆ ಪ್ರೋತ್ಸಾಹ ನೀಡಿದರು. ಆಮೇಲೆ ಮಕ್ಕಳಾದ ಮೇಲೆ ನಾಯಿ ಸಾಕುವುದನ್ನು ತಾತ್ಕಾಲಿಕವಾಗಿ ಬಿಟ್ಟಿದ್ದೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮತ್ತೆ ಬೀದಿ ನಾಯಿಗಳನ್ನು ಸಲಹುವ ಕಾರ್ಯಕ್ಕೆ ಮುಂದಾದೆ ಎನ್ನುತ್ತಾರೆ ನರ್ಗೀಸ್ ಭಾನು.
ಒಮ್ಮೆ ಪ್ರೀತಿ ತೋರಿದರೆ ಮತ್ತೆ ಮತ್ತೆ ಬಳಿ ಬರುತ್ತವೆ
ಜಾತಿ ನಾಯಿಗಳನ್ನು ಸಾಕುವುದು ಹಲವರಿಗೆ ಫ್ಯಾಷನ್. ನನಗೆ ಬೀದಿ ನಾಯಿಗಳ ಆರೈಕೆ ಮಾಡುವುದರಲ್ಲಿಯೇ ಖುಷಿ. ಒಮ್ಮೆ ಅವುಗಳಿಗೆ ತುತ್ತು ಅನ್ನ ಹಾಕಿದರೆ ಅವು ಮತ್ತೆ ಮತ್ತೆ ಬಳಿ ಬರುತ್ತವೆ. ಈಗ ಐದಾರು ನಾಯಿಗಳು ನಮ್ಮ ಮನೆಯಲ್ಲಿ ಇವೆ. ಅವುಗಳ ಆರೋಗ್ಯ ಕೆಟ್ಟಾಗ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಮರಿಗಳನ್ನು ಜೋಪಾನ ಮಾಡುತ್ತೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಬೀದಿ ನಾಯಿಗಳನ್ನು ಒಗ್ಗಿಸಿಕೊಂಡರೆ ಅವುಗಳಿಂದ ಸಮಸ್ಯೆ ಎನ್ನುವ ಆರೋಪವೂ ಕೆಲವರಿಂದ ವ್ಯಕ್ತವಾಗುತ್ತದೆ. ಆದರೆ ಇದರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವುದು ನರ್ಗೀಸ್ ಅವರ ಅಭಿಪ್ರಾಯ.
ಮನಸ್ಸಿನ ಖುಷಿಗೆ ಈ ಕಾಯಕ
ನನ್ನ ವೃತ್ತಿ, ಕುಟುಂಬ, ವಯಕ್ತಿಕ ಬದುಕು ನನ್ನದು. ಇದರ ನಡುವಲ್ಲಿ ಬಳಿಗೆ ಬಂದ ನಾಯಿಗಳನ್ನು ಆತ್ಮೀಯತೆಯಿಂದ ಕಾಣುವುದು, ಅವುಗಳಿಗೆ ಆಹಾರ ನೀಡುವುದು ನನಗೆ ಖುಷಿ ನೀಡುತ್ತದೆ. ಅವುಗಳ ಆರೋಗ್ಯ ಕೆಟ್ಟಾಗ ನನ್ನಲ್ಲಿ ಮರುಕ ಉಂಟಾಗುತ್ತದೆ. ಅವುಗಳ ತೋರುವ ಪ್ರೀತಿಗೆ ಮನಸ್ಸು ಕರಗುತ್ತದೆ. ಅವುಗಳಿಗೂ ಭಾವನೆಗಳಿವೆ. ಅದನ್ನು ಅರ್ಥ ಮಾಡಿಕೊಂಡರೆ ಮನಸ್ಸು ತಿಳಿಯಾಗುತ್ತದೆ. ಹೀಗಾಗಿ ಬೀದಿ ನಾಯಿಗಳ ಪೋಷಣೆಯಲ್ಲಿಯೇ ನನಗೆ ಸಂತೋಷ ಸಿಕ್ಕುತ್ತದೆ ಎನ್ನುತ್ತಾರೆ ನರ್ಗೀಸ್.